ಮರಿಯಮ್ಮನಹಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಗುರುವಾರ ವಿಜಯನಗರ ಜಿಲ್ಲೆ ಬಂದ್ ಕರೆ ನೀಡಿದ್ದು, ಮರಿಯಮ್ಮನಹಳ್ಳಿ ಹಾಗೂ ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.ಬೆಳಿಗ್ಗೆ 6 ಗಂಟೆಯಿಂದಲೇ ಸಂವಿಧಾನ ಸಂರಕ್ಷಣಾ ಸಮಿತಿಯವರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಪ್ರತಿಭಟನಾಕಾರರು ಪ್ರತಿಭಟನೆ ಆರಂಭಿಸಿದ್ದು, ಮರಿಯಮ್ಮನಹಳ್ಳಿಯಲ್ಲಿ ಎಲ್ಲ ಅಂಗಡಿ, ಹೋಟಲ್ ಸೇರಿದಂತೆ ಎಲ್ಲ ಅಂಗಡಿ-ಮುಂಗಟ್ಟು ಬಂದ್ ಮಾಡಿ ಬಂದ್‌ಗೆ ಬೆಂಬಲ ಸೂಚಿಸಿದರು.
ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಸ್, ಆಟೋ ಸೇರಿದಂತೆ ಯಾವುದೇ ವಾಹನಗಳ ಸಂಚಾರ ಇಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬಸ್ ನಿಲ್ದಾಣ ಸಹ ಬಿಕೋ ಎನ್ನುತ್ತಿತ್ತು. ಕೆಲವು ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿದ್ದರು. ವಿವಿಧ ಕಡೆ ತೆರಳಲು ಬಸ್‌ಗಾಗಿ ಇನ್ನು ಕೆಲವರು ಜನರು ಪರದಾಡುತ್ತಿದ್ದರು.ಶಾಲಾ, ಕಾಲೇಜುಗಳು ಬಂದ್ ಆಗಿದ್ದವು. ಬಸ್ ಸಂಚಾರ ಇಲ್ಲದ ಕಾರಣ ಕೆಲ ಪದವಿ ಪರೀಕ್ಷೆಗಳು ಸಹ ಮುಂದೂಡಲಾಗಿತ್ತು.
ಪ್ರತಿಭಟನಾಕಾರರು ಪಟ್ಟಣದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ಕೊನೆಯಲ್ಲಿ ನಾರಾಯಣದೇವರ ಕೆರೆ ವೃತ್ತದಲ್ಲಿ ಸಭೆ ಸೇರಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಪಪಂ ಅಧ್ಯಕ್ಷ ಆದಿಮನಿ ಹುಸೇನ್‌ಬಾಷಾ, ಪ್ರಗತಿಪರ ಸಂಘಟನೆಗಳ ಮುಖಂಡರಾದ ಸಿ. ಮಂಜುನಾಥ, ಎಲ್. ಜಗನ್ನಾಥ, ಮಂಜುನಾಥ, ಉಪನ್ಯಾಸಕ ಹಾಗೂ ಪ್ರಗತಿಪರ ಚಿಂತಕ ಎಸ್.ಬಿ. ಚಂದ್ರಶೇಖರ್ ಮಾತನಾಡಿ, ಡಿ.17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ, ಶೋಷಿತ ಸಮುದಾಯಗಳ ವಿಮೋಚಕ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಕುರಿತು ಅವಹೇಳನಕಾರಿಯಾಗಿ ರಾಜ್ಯಸಭೆಯಲ್ಲಿ ಮಾತನಾಡಿದ್ದಾರೆ. ಇದು ಅತ್ಯಂತ ಖೇದಕರ ಸಂಗತಿ ಮತ್ತು ದೇಶದ ಬಹುಸಂಖ್ಯಾತ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಮಹಿಳೆ, ಕಾರ್ಮಿಕ ಸಮುದಾಯಕ್ಕೆ ಮಾಡಿದ ಘೋರ ಅಪಮಾನ.ಸಂವಿಧಾನದ ಮೌಲ್ಯಗಳಿಗೆ ಅಪಚಾರವೆಸಗದೆ ಅದಕ್ಕೆ ಬದ್ಧವಾಗಿರುತ್ತೇನೆಂದು ಪ್ರಮಾಣವಚನ ಸ್ವೀಕರಿಸುವ ಕಂದ್ರ ಗೃಹ ಸಚಿವ ಸಚಿವರ ಈ ನಡುವಳಿಕೆ ಖಂಡನೀಯವಾಗಿದೆ. ತಕ್ಷಣವೇ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಮನವಿಯನ್ನು ಓದಿ, ಮರಿಯಮ್ಮನಹಳ್ಳಿಯ ನಾಡಕಚೇರಿಯ ಉಪತಹಸೀಲ್ದಾರ್ ಶ್ರೀಧರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಪಪಂ ಸದಸ್ಯರಾದ ಎಲ್. ವಂಸತ ಕುಮಾರ್, ಪರಶುರಾಮ, ಮರಡಿ ಸುರೇಶ್, ಪ್ರಗತಿಪರ ಸಂಘಟನೆಗಳ ಮುಖಂಡರಾದ ಎಲ್. ನಾಗರಾಜ, ಮಾಬುಸುಬಾನಿ, ಬಿ. ಆನಂದ, ಬುಡ್ಡಿ ಮಂಜುನಾಥ, ಎಚ್. ನಾಗಪ್ಪ, ಹನುಮಂತ, ಪಿ.ಮಂಜುನಾಥ, ದುರುಗಪ್ಪ, ಎಲ್.ಚಂದ್ರಶೇಖರ, ಎಲ್.ಪ್ರಕಾಶ್, ಪರಶುರಾಮ, ಗಣೇಶ, ಲಕ್ಷ್ಮಣ, ವಿಶ್ವ, ಮಂಜುನಾಥ ಸೇರಿದಂತೆ ಪ್ರಗತಿಪರ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪಿಎಸ್‌ಐ ಮೌನೇಶ್ ರಾಥೋಡ್ ಸೇರಿದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಹಮ್ಮಿಕೊಂಡಿದ್ದರು.