ಗದಗ: ವಿದ್ಯಾರ್ಥಿಗಳ ನಿರಂತರ ಅಧ್ಯಯನ ಹಾಗೂ ಶಿಕ್ಷಕರ ಗುಣಾತ್ಮಕ ಕಲಿಸುವಿಕೆಯಿಂದಾಗಿ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಗೊಂಡಿದೆ ಎಂದು ಡಿಡಿಪಿಐ ಆರ್.ಎಸ್. ಬುರಡಿ ಹೇಳಿದರು.
ಶಿಕ್ಷಕರಿಂದ ವಿದ್ಯಾರ್ಥಿಗಳ ಮನೆ ಭೇಟಿ, ಅಧಿಕಾರಿಗಳ ನಿರಂತರ ಭೇಟಿ ಹಾಗೂ ಮಾರ್ಗದರ್ಶನ, ವಿಶೇಷ ಕಾರ್ಯಾಗಾರ, ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸಂಜೆ ವಿಶೇಷ ಮಾರ್ಗದರ್ಶನ, ಸಂಪನ್ಮೂಲ ಶಿಕ್ಷಕರಿಂದ ಸಂದೇಹ ನಿವಾರಣೆ, ವಿವಿಧ ತಾಲೂಕುಗಳಲ್ಲಿ ವಸತಿಯುತ ತರಬೇತಿಗಳು, ಪ್ರೇರಣ ಕಾರ್ಯಾಗಾರಗಳು, ನಿಧಾನ ಕಲಿಕೆ ಹಾಗೂ ಮೇಧಾವಿ ವಿದ್ಯಾರ್ಥಿಗಳಿಗಾಗಿ ವಿಶೇಷ ಶಿಬಿರಗಳ ಫಲಶೃತಿಯೇ ಈ ಉತ್ತಮ ಫಲಿತಾಂಶವಾಗಿದೆ. ಗದಗ ಜಿಲ್ಲೆಯ ಎಲ್ಲ ಶಾಲೆಗಳ ಫಲಿತಾಂಶ ಉತ್ತಮಗೊಳ್ಳಲು ಶ್ರಮಿಸಿದವರು ಅಭಿನಂದನಾರ್ಹರು ಎಂದರು.
ನಿವೃತ್ತ ಡಿಡಿಪಿಐ ಎ.ಎನ್. ನಾಗರಳ್ಳಿ ಮಾತನಾಡಿ, ಸರ್ಕಾರಿ ಶಾಲೆಯ ಉನ್ನತೀಕರಣ ನಮ್ಮ ಸಮೂಹದ ಜವಾಬ್ದಾರಿ. ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕಾಗಿ ನಾವೆಲ್ಲರೂ ಕಂಕಣಬದ್ಧರಾಗುವುದು ಅಗತ್ಯ. ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಸಮುದಾಯ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಮಾತ್ರ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ ಎಂದರು.ತಾರಾಲಯದ ಮಹತ್ವ ಕುರಿತು ಬಾಲ್ಯದಲ್ಲಿಯೇ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವುದು ಅಗತ್ಯ. ಪ್ರಶ್ನಿಸುವ ಮನೋಭಾವ, ಪರಿಶೀಲನೆ, ಅನುಮಾನಗಳಿಗೆ ಉತ್ತರ ಹುಡುಕುವ ಪ್ರವೃತ್ತಿ ಬೆಳೆದಾಗ ಮಾತ್ರ ಅವರು ನಿಜವಾದ ಅರ್ಥದಲ್ಲಿ ಜ್ಞಾನಿಗಳಾಗುತ್ತಾರೆ. ಇದೇ ಮನೋಭಾವ ಅವರನ್ನು ಮುಂದಿನ ದಿನಗಳಲ್ಲಿ ಪುಟಾಣಿ ವಿಜ್ಞಾನಿಗಳಾಗಲು ಪ್ರೇರೇಪಿಸುತ್ತದೆ. ಆದ್ದರಿಂದ, ಶಿಕ್ಷಣದ ಜೊತೆ ವೈಜ್ಞಾನಿಕ ಚಿಂತನೆ ಬೆಳೆಸುವ ಕಾರ್ಯವನ್ನು ನಾವು ಎಲ್ಲರೂ ಕೈಜೋಡಿಸಿ ಮುಂದುವರೆಸಿದಾಗ ಮಾತ್ರ, ನಮ್ಮ ಸರ್ಕಾರಿ ಶಾಲೆಗಳು ಮಾದರಿ ಶಿಕ್ಷಣ ಕೇಂದ್ರಗಳಾಗಿ ರೂಪುಗೊಳ್ಳುತ್ತವೆ ಎಂದರು.
ನಿವೃತ್ತ ಉಪನಿರ್ದೆಶಕ ಎಸ್.ಡಿ. ಗಾಂಜಿ, ಎ.ಎನ್. ನಾಗರಳ್ಳಿ, ಐ.ಬಿ. ಬೆನಕೊಪ್ಪ ಹಾಗೂ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಗೊಳ್ಳಲು ಕಾರಣರಾದ ಡಿಡಿಪಿಐ ಆರ್.ಎಸ್. ಬುರಡಿ ಅವರನ್ನು ಸನ್ಮಾನಿಸಲಾಯಿತು.