ಬಳ್ಳಾರಿ: ಜಿಲ್ಲೆಯಲ್ಲಿ ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ 15,652 ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 23,271 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಬಾರಿ ಬಳ್ಳಾರಿ ಜಿಲ್ಲೆ ಉತ್ತಮ ಫಲಿತಾಂಶದ ನಿರೀಕ್ಷೆ ಹೊಂದಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ತಿಳಿಸಿದರು.
ದ್ವಿತೀಯ ಪಿಯುಸಿ:ದ್ವಿತೀಯ ಪಿಯುಸಿ ಪರೀಕ್ಷೆ-1 ಇದೇ ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 15,652 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಇವರಲ್ಲಿ 13,286 ಹೊಸ ಅಭ್ಯರ್ಥಿಗಳು (ಹುಡುಗ-5580 ಮತ್ತು ಹುಡುಗಿಯರು-7706), 1899 ಮರು ಪರೀಕ್ಷಾರ್ಥಿಗಳು, 467 ಖಾಸಗಿ ಅಭ್ಯರ್ಥಿಗಳು ಒಳಗೊಂಡಿದ್ದಾರೆ. ಬಳ್ಳಾರಿ ನಗರ-12, ಸಿರುಗುಪ್ಪ-03, ಸಂಡೂರು-02, ಕಂಪ್ಲಿ-02 ಮತ್ತು ಕುರುಗೋಡು-01 ಸೇರಿದಂತೆ ಒಟ್ಟು 20 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ ಎಂದು ಹೇಳಿದರು.
ಅದೇ ರೀತಿ ಎಸ್.ಎಸ್.ಎಲ್.ಸಿ ಪರೀಕ್ಷೆ-1 ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿವೆ. ಜಿಲ್ಲೆಯಲ್ಲಿ ಒಟ್ಟು 326 ಹತ್ತನೆಯ ಶಾಲೆಗಳಿಂದ ಒಟ್ಟು 23,271 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಇವರಲ್ಲಿ 19,722 ಹೊಸ ಅಭ್ಯರ್ಥಿಗಳು, 2,009 ಮರು ಪರೀಕ್ಷಾರ್ಥಿಗಳು, 1,328 ಖಾಸಗಿ ಅಭ್ಯರ್ಥಿಗಳು, 212 ಖಾಸಗಿ ಮರು ಪರೀಕ್ಷಾರ್ಥಿಗಳು ಒಳಗೊಂಡಿದ್ದಾರೆ. ಒಟ್ಟು ಜಿಲ್ಲೆಯ 65 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಲಿವೆ ಎಂದು ತಿಳಿಸಿದರು.ವಿದ್ಯಾರ್ಥಿಗಳಿಗೆ ಸ್ನೇಹಮಯಿ ವಾತಾವರಣ:
ಪರೀಕ್ಷಾ ಅವಧಿಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಸುಲಭವಾಗಿ ಹೋಗಲು ಕೆಕೆಆರ್‌ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗಿದೆ. ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಪ್ರಯಾಣಿಸಬಹುದಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಗಾಳಿ, ಬೆಳಕು, ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರುವಂತೆ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿಗೆ ಸೂಚಿಸಲಾಗಿದೆ ಎಂದರು.
ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಮೂಲಕ ಕಣ್ಗಾವಲು ಇಡಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಒಳಗಡೆ, ಹೊರಗಡೆ, ಪ್ರಾಚಾರ್ಯರ ಕೊಠಡಿಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ ಎಂದರು.