ಗೋಪಾಲಗೌಡರು ಶುದ್ಧ ರಾಜಕಾರಣದ ಪ್ರತೀಕ

KannadaprabhaNewsNetwork | Published : Mar 15, 2025 1:07 AM

ಸಾರಾಂಶ

ಶಿವಮೊಗ್ಗ: ಶುದ್ಧ ರಾಜಕಾರಣದ ಪ್ರತೀಕರಾಗಿದ್ದ ಶಾಂತವೇರಿ ಗೋಪಾಲಗೌಡರು ತಬ್ಬಲಿ ಜಾತಿಗಳ ಬಂಧುವಾಗಿ, ಬಡವರ ಪಾಲಿನ ಭರವಸೆಯಾಗಿ ವಿಧಾನಸೌಧದ ಹೊರಗೂ ಒಳಗೂ ಹೋರಾಡಿದ ನಿಜ ಜನನಾಯಕ ಎಂದು ಪತ್ರಕರ್ತ ಎನ್‌.ರವಿಕುಮಾರ್‌ ಹೇಳಿದರು.

ಶಿವಮೊಗ್ಗ: ಶುದ್ಧ ರಾಜಕಾರಣದ ಪ್ರತೀಕರಾಗಿದ್ದ ಶಾಂತವೇರಿ ಗೋಪಾಲಗೌಡರು ತಬ್ಬಲಿ ಜಾತಿಗಳ ಬಂಧುವಾಗಿ, ಬಡವರ ಪಾಲಿನ ಭರವಸೆಯಾಗಿ ವಿಧಾನಸೌಧದ ಹೊರಗೂ ಒಳಗೂ ಹೋರಾಡಿದ ನಿಜ ಜನನಾಯಕ ಎಂದು ಪತ್ರಕರ್ತ ಎನ್‌.ರವಿಕುಮಾರ್‌ ಹೇಳಿದರು.

ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜನಲ್ಲಿ ಶುಕ್ರವಾರ ಇತಿಹಾಸ ವಿಭಾಗ ಮತ್ತು ಕನ್ನಡ ವಿಭಾಗದ ವತಿಯಿಂದ ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಂತವೇರಿ ಗೋಪಾಲಗೌಡರು ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಸಾಮಾಜಿಕ, ರಾಜಕೀಯ ಚಳವಳಿಯನ್ನು ಮುನ್ನಡೆಸಿದವರು. ಅವರು ನೈಜ ಜನಪರ ಚಳವಳಿ ಮತ್ತು ಪ್ರಾಮಾಣಿಕ ರಾಜಕಾರಣದ ಮಾದರಿಯಾಗಿದ್ದಾರೆ ಎಂದರು.ಬಡತನದಲ್ಲೂ ವಿದ್ಯಾಭ್ಯಾಸ ಬಿಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಶಾಂತವೇರಿ ಗೋಪಾಲಗೌಡರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಜೈಲು ವಾಸ ಅನುಭವಿಸಿದವರು. ಸ್ವಾತಂತ್ರ್ಯ ನಂತರದಲ್ಲಿ ಭೂ ರಹಿತ ಬಡವರ, ಗೇಣಿದಾರರ ಭೂ ಹಕ್ಕಿಗಾಗಿ ರಾಜಕೀಯ ಹೋರಾಟ ಆರಂಭಿಸಿದರು. ಕಾಂಗ್ರೆಸ್ ಸಮಾಜವಾದಿ ಪಕ್ಷದ ಧೋರಣೆಯನ್ನು ಖಂಡಿಸಿ ಅಂದಿನ ಮೈಸೂರು ರಾಜ್ಯದಲ್ಲಿ ಅಣ್ಣ ದೇಶಪಾಂಡೆ ಜೊತೆ ಸಮಾಜವಾದಿ ಪಕ್ಷ ಕಟ್ಟುವ ಮೂಲಕ 1952ರಲ್ಲಿ ಮೊದಲ ಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆಯಾಗಿ ಬಡವರ, ಕನ್ನಡ ನಾಡಿನ ಧ್ವನಿಯಾಗಿದ್ದವರು ಎಂದು ತಿಳಿಸಿದರು.

ಸಮಾಜವಾದಿ, ರಾಷ್ಟ್ರ ನಾಯಕ ರಾಮಮನೋಹರ ಲೋಹಿಯಾ , ಡಾ.ಟಿ.ವಿಶ್ವನಾಥ್ ಅವರ ಒಡನಾಟ, ಕಾರ್ಲ್ ಮಾರ್ಕ್ಸ್ ದಾಸ್ ಕ್ಯಾಪಿಟಲ್, ಸಾಕ್ರೆಟಿಸ್, ಹೆನ್ರಿ ದೇವಿಡ್, ಗಾಂಧಿ ಚಿಂತನೆಗಳಿಂದ ಸಮಾಜವಾದಿ ಚಳುವಳಿಗೆ ತಾತ್ವಿಕ ಗಟ್ಟಿತನವನ್ನು ಹಾಕಿದ ಶಾಂತವೇರಿ ಗೋಪಾಲಗೌಡರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಖನಾಗಿಯೂ ಕಂಗೊಳಿಸಿದರು ಎಂದು ಹೇಳಿದರು.

ಕನ್ನಡ ಸಾಹಿತ್ಯ ಲೋಕ ಶಾಂತವೇರಿ ಗೋಪಾಲಗೌಡರನ್ನು ಒಳಗೊಂಡಷ್ಟು ಮತ್ತೊಬ್ಬರನ್ನು ಒಳಗೊಳ್ಳಲಿಲ್ಲ. ಅಡಿಗರು, ಲಂಕೇಶ್, ಪುತಿನ , ಸಿಪಿಕೆ ಅವರು ಗೌಡರ ವ್ಯಕ್ತಿತ್ವವನ್ನು ಕಾವ್ಯದ ಮೂಲಕ ಕಾಣಿಸಿದ್ದಾರೆ ಎಂದು ಬಣ್ಣಿಸಿದರು.

ಕರ್ನಾಟಕ ಘೋಷಣೆ, ಕನ್ನಡ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿಸುವಂತೆ, ಕಾಗೋಡು ಚಳುವಳಿ ಗುರಿ ಈಡೇರಿಸುವಂತೆ, ಕನ್ನಡದ ಡಿಂಡಿಮ ಭಾರಿಸಿದ ಶಾಂತವೇರಿ ಗೋಪಾಲಗೌಡರು ಬಡತನದಿಂದ ನೋವುಂಡರೂ ಸಾತ್ವಿಕ ಸಿಟ್ಟು, ಆದರ್ಶ, ಪ್ರಾಮಾಣಿಕತೆ, ನ್ಯಾಯ ಪ್ರಜ್ಞೆ, ಸ್ವಾಭಿಮಾನವನ್ನೂ ಬಿಟ್ಟುಕೊಡಲಿಲ್ಲ. ಕೇವಲ 49 ವರ್ಷಗಳ ಸಾರ್ಥಕ ಬದುಕನ್ನು ಬದುಕಿದರು. ಗೋಪಾಲಗೌಡರ ಬದುಕೇ ಎಲ್ಲ ಕಾಲಕ್ಕೂ ಸಾಮಾಜಿಕ, ರಾಜಕೀಯ ಹೋರಾಟಕ್ಕೆ ಶುದ್ಧ ಆದರ್ಶ ಮಾದರಿ ಎಂದು ಬಣ್ಣಿಸಿದರು.

ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೈ.ಎಚ್.ನಾಗರಾಜ್‍ ಮಾತನಾಡಿ, ಗೋಪಾಲ್‍ಗೌಡರು ಅಪ್ಪಟ ರಾಜಕಾರಣಿಯಾಗಿದ್ದು, ಅತ್ಯಂತ ಪ್ರಾಮಾಣಿಕರಾಗಿದ್ದರು. ಬಡವರ ಆಶಾಕಿರಣವಾಗಿದ್ದರು. ಮೌಲ್ಯ ರಾಜಕಾರಣಕ್ಕೆ ಹೆಸರಾಗಿದ್ದು, ಸರಳತೆ ಸಜ್ಜನಿಕೆಯ ಸಮಾಜವಾದಿಯಾಗಿದ್ದರು. ಅವರು ತಮ್ಮ ಮೊದಲ ಚುನಾವಣೆಯಲ್ಲಿ ಕೇವಲ 6 ಸಾವಿರ ರು.ಗಳನ್ನು ಮಾತ್ರ ಖರ್ಚು ಮಾಡಿದ್ದರು. ಅದನ್ನು ಕೂಡ ಸಾಲ ಮಾಡಿಯೇ ತೀರಿಸಿದರು ಎಂದು ತಿಳಿಸಿದರು.

ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಡಾ.ಸೈಯ್ಯದ್‍ ಸನಾವುಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಧ್ಯಾಪಕರುಗಳಾದ ಡಾ.ಹಾಲಮ್ಮ, ಡಾ.ಜಿ.ಕೆ.ಪ್ರೇಮಾ, ಡಾ.ಮೋಹನ್ ಚಂದ್ರಗುತ್ತಿ, ಮಹಾದೇವ ಸ್ವಾಮಿ, ಶಂಭುಲಿಂಗಮೂರ್ತಿ ಸೇರಿದಂತೆ ಹಲವರಿದ್ದರು.

Share this article