ಅರಣ್ಯದಲ್ಲಿ ಸಿಗುವ ಒತ್ತರದ ಹಂಬು ಬಳಸಿ ರಥ ಎಳೆದ ಭಕ್ತರು । ಬೆಟ್ಟದಲ್ಲಿ ಮೊಳಗಿದ ಗೋವಿಂದ ನಾಮ ಸ್ಮರಣೆ । ಬಿಸಿಲಿನ ನಡುವೆಯೂ ಗೋಪಾಲನ ದರ್ಶನಕ್ಕೆ ಬಂದ ಜನಸಾಗರ । ಜಿಪಂ ಸಿಇಒ, ಎಸ್ಪಿ, ಶಾಸಕರಿಂದ ದೇವರ ದರ್ಶನ
ಬಂಡೀಪುರ ಹುಲಿ ಸಂರಕ್ಷಿತದೊಳಗಿನ ನಾಡಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಗುರುವಾರ ಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ನಡೆಯಿತು. ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಹಾಗೂ ಸ್ಥಳೀಯ ಭಕ್ತರು ಗುರುವಾರ ಬೆಳಗ್ಗೆಯಿಂದಲೇ ಬೆಟ್ಟಕ್ಕೆ ಬಿಸಿಲಿನ ನಡುವೆಯೂ ಜಮಾಯಿಸಿ ತೇರು ಎಳೆದು ಪುನೀತರಾದರು.
ಗೋಪಾಲಸ್ವಾಮಿ ಬೆಟ್ಟದ ತಪ್ಪಲು ಹಾಗೂ ಗುಂಡ್ಲುಪೇಟೆಯಿಂದ ಸಾರಿಗೆ ಬಸ್ ,ಖಾಸಗಿ ವಾಹನಗಳಲ್ಲಿ ಬಂದ ಭಕ್ತರು ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳ ನಂತರ ಹಿಮವದ್ ಗೋಪಾಲಸ್ವಾಮಿ ಉತ್ಸವ ಮೂರ್ತಿಯನ್ನು ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿಟ್ಟು ದೇವಾಲಯದ ಸುತ್ತಲೂ ಗೋವಿಂದ, ಗೋಪಾಲ ಎಂಬ ಜೈಕಾರದೊಂದಿಗೆ ಪ್ರದಕ್ಷಿಣೆ ನಡೆಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಕೆ.ವಿ.ಗೋಪಾಲಕೃಷ್ಣ ಭಟ್ ಮಹಾ ಮಂಗಳಾರತಿ ನೆರವೇರಿಸಿದರು. ತಹಸೀಲ್ದಾರ್ ಮಂಜುನಾಥ್ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಭಕ್ತರು ಗೋವಿಂದ,ಗೋವಿಂದ,ಗೋಪಾಲ ಎಂಬ ಹರ್ಷೋದ್ಗಾರದೊಂದಿಗೆ ರಥವನ್ನು ಎಳೆದು ಸಾಗುವಾಗ ದೇವಾಲಯದ ಹೊರ ಆವರಣದ ಎರಡು ಕಡೆ ನಿಂತಿದ್ದ ಭಕ್ತರು ರಥೋತ್ಸವಕ್ಕೆ ನಮಿಸಿ,ಹಣ್ಣು-ಧವನ ಎಸೆದು ಇಷ್ಟಾರ್ಥಗಳ ಸಿದ್ಧಿಗೆ ಪ್ರಾರ್ಥಿಸಿದರು.ಒಂದು ಸುತ್ತು ಪ್ರದಕ್ಷಿಣೆ ನಂತರ ಮೂಲಸ್ಥಾನದಲ್ಲಿ ರಥೋತ್ಸವ ಕೊನೆಗೊಂಡಿತು. ಅರಣ್ಯದಲ್ಲಿ ಸಿಗುವ ಒತ್ತರದ ಹಂಬು ಬಳಸಿ ರಥವನ್ನುಎಳೆಯುವುದು ಈ ಜಾತ್ರೆಯ ವಿಶೇಷ. ಪ್ರತಿ ವರ್ಷದಂತೆ ಗೋಪಾಲಪುರ,ಕಣ್ಣೇಗಾಲ, ದೇವರಹಳ್ಳಿ ಹಾಗೂ ಹೊನ್ನೇಗೌಡನಹಳ್ಳಿ ಗ್ರಾಮದವರು(ತೇರು ಬಿಟ್ಟಿ ಸಂಘ) ರಥೋತ್ಸವ ಯಶಸ್ವಿಗೊಳಿಸಿದರು.
ವಿವಿಧ ಗಣ್ಯರಿಂದ ಗೋಪಾಲಸ್ವಾಮಿ ದರ್ಶನ
ಮಜ್ಜಿಗೆ ಪಾನಕ ವಿತರಣೆ:
ಬಸವಳಿದ ಭಕ್ತರು: ಗೋಪಾಲಸ್ವಾಮಿ ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಭಕ್ತರು ಸಾರಿಗೆ ಬಸ್ಸಿನಲ್ಲೇ ಬೆಟ್ಟಕ್ಕೆ ತೆರಳಬೇಕಿರುವ ಕಾರಣ ಬಿಸಿಲಿನಲ್ಲಿ ಬಸ್‌ಗಾಗಿ ಕಾದು ನಿಂತ ಕಾರಣ ನಗರ ಪ್ರದೇಶದ ಭಕ್ತರು ಬಸವಳಿಸಿದರು.