ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಮೂರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಪಿಎಂ ಶ್ರೀ ಮಾದರಿ ಪ್ರಾಥಮಿಕ ಶಾಲೆ ಮೂರ್ನಾಡು ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಗೌರಮ್ಮ ಅವರು ತಮ್ಮ ಅತಿ ಸಣ್ಣ ಜೀವಿತಾವಧಿಯಲ್ಲಿ ಅವರು 21 ಕಥೆಗಳನ್ನು ಬರೆದರು. ಅದರಲ್ಲಿ ಮಹಿಳಾ ಸ್ವಾತಂತ್ರ್ಯ, ವಿಧವಾ ವಿವಾಹ, ಬಾಲ್ಯ ವಿವಾಹ, ವಿಧವಾ ಸಮಸ್ಯೆಗಳ ಬಗ್ಗೆ ಬರೆದಿದ್ದಾರೆ. ಅವರು ನೇರವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಇಳಿಯದಿದ್ದರೂ ಗಾಂಧೀಜಿಯವರು 1934 ರಲ್ಲಿ ಹರಿಜನೋದ್ಧಾರಕ್ಕಾಗಿ ನಿಧಿ ಸಂಗ್ರಹಿಸಲು ಕರ್ನಾಟಕದಲ್ಲಿ 12 ದಿನಗಳ ಪ್ರವಾಸವನ್ನು ಕೈಗೊಂಡರು. ಫೆಬ್ರವರಿ 22-23, 1934 ರಂದು ಗಾಂಧಿಯವರು ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ತಂಗಿದ್ದ ಗೌರಮ್ಮ ವಾಸಿಸುತ್ತಿದ್ದ ಗುಂಡುಕಟ್ಟೆ ಮಂಜುನಾಥಯ್ಯರವರ ಎಸ್ಟೇಟ್ ನಲ್ಲಿ ತಂಗಿದ್ದರು. ನಿಧಿ ಸಂಗ್ರಹಿಸಲು ಬಂದ ಗಾಂಧೀಜಿಯವರನ್ನು ಭೇಟಿಮಾಡುವ ಉದ್ದೇಶದಿಂದ ಗೌರಮ್ಮ ಗಾಂಧಿಯವರ ಸಹಾಯಕರಲ್ಲಿ ತಮ್ಮ ಎಸ್ಟೇಟ್‌ಗೆ ಬಂದು ಈ ಉದ್ದೇಶಕ್ಕಾಗಿ ನೀಡುತ್ತಿರುವ ದೇಣಿಗೆಯನ್ನು ಸ್ವೀಕರಿಸುವಂತೆ ಬೇಡಿಕೊಂಡರು, ಆದರೆ ಅವರಲ್ಲಿ ಯಾರೂ ಗೌರಮ್ಮ ಅವರ ಬೇಡಿಕೆಗಳನ್ನು ಕೇಳಲಿಲ್ಲ. ಕೊನೆಗೆ, ಗಾಂಧಿಯವರು ತಮ್ಮಿಂದ ಕಾಣಿಕೆ ಸ್ವೀಕರಿಸಬೇಕು ಮತ್ತು ತಮ್ಮ ಮನೆಗೆ ಆಗಮಿಸಬೇಕೆಂದು ಅವರು ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಈ ಸುದ್ದಿ ಗಾಂಧಿಯವರ ಕಿವಿಗೆ ತಲುಪಿತು. ಅವರು ಆಕೆಯನ್ನು ತಾವು ತಂಗಿದ್ದ ಸ್ಥಳಕ್ಕೆ ಕರೆದು, ಗೌರಮ್ಮ ಅವರ ಮನೆಗೆ ಬರುವುದಾಗಿ ಭರವಸೆ ನೀಡಿದರು.ಅದರ ಪ್ರಕಾರ, ಗಾಂಧಿ ಅವರ ಮನೆಗೆ ಭೇಟಿ ನೀಡಿದರು. ಗೌರಮ್ಮ ತಾವು ಧರಿಸಿದ್ದ ಅನೇಕ ಆಭರಣಗಳನ್ನು ತೆಗೆದು ಸ್ವಾತಂತ್ರ್ಯ ಹೋರಾಟದ ನಿಧಿಗಾಗಿ ಗಾಂಧಿಯವರಿಗೆ ನೀಡಿದರು. ಮಹಿಳೆಯರ ಸಂಕೇತಗಳಾದ ಹಿಂದೂ ವಿವಾಹಿತ ಕಿವಿಯೋಲೆ, ಮೂಗುತಿ ಮತ್ತು ಮಂಗಲ ಸೂತ್ರವನ್ನು ಹೊರತುಪಡಿಸಿ ಹೆಚ್ಚಿನ ಆಭರಣಗಳನ್ನು ಗೌರಮ್ಮ ಗಾಂಧಿಯವರಿಗೆ ದಾನ ಮಾಡಿದರು. ಈಗ ಚಿನ್ನವನ್ನು ನೀಡುವ ಪ್ರತಿಜ್ಞೆಯನ್ನು ಗೌರಮ್ಮ ಅವರ ಮೇಲೆ ಒತ್ತಾಯಿಸುವ ಸರದಿ ಬಂದಿದೆ. ಚಿನ್ನದ ಆಭರಣಗಳಿಗಾಗಿ ನೀವು ಮತ್ತೆ ನಿಮ್ಮ ಗಂಡನನ್ನು ಹಿಂಸಿಸುತ್ತೀರಾ ಎಂದು ಗಾಂಧೀಜಿ ಗೌರಮ್ಮ ಅವರನ್ನು ಕೇಳಿದಾಗ, ನಾನು ಭರವಸೆ ನೀಡಿದಂತೆ, ಖಾದಿ ಹೊರತುಪಡಿಸಿ ಯಾವುದೇ ವಸ್ತ್ರ ಚಿನ್ನಾಭರಣ ಧರಿಸುವುದಿಲ್ಲ ಎಂದು ಅವರು ಗಾಂಧೀಜಿಗೆ ಭರವಸೆ ನೀಡಿದರು. ಮಾರ್ಚ್ 2, 1934 ರಂದು ಹರಿಜನ ಪತ್ರಿಕೆಯಲ್ಲಿ ಗಾಂಧಿ ಈ ಘಟನೆಯನ್ನು ಉಲ್ಲೇಖಿಸಿದ್ದಾರೆ.
2024 - 25 ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತ ಕುಡಕಂಡಿ ಓಂ ಶ್ರೀ ದಯಾನಂದ ಅವರನ್ನು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕಾಂತೂರು ಮುರುನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ.ಎಸ್. ಕುಶನ್ ರೈ ಅವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಿಕವಾಗಿ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಮೂರ್ನಾಡಿನಲ್ಲಿ ಈ ಕಾರ್ಯಕ್ರಮ ನಡೆಸಿದ್ದು ನಿಜಕ್ಕೂ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮ ನಮ್ಮೂರಿನಲ್ಲಿ ಹಮ್ಮಿಕೊಂಡರೆ ಅದನ್ನು ಯಶಸ್ವಿಗೊಳಿಸಿ ಕೊಡುವುದಾಗಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಕೊಡಗಿನ ಗೌರಮ್ಮ ಬಹುಮುಖ ಪ್ರತಿಭೆಯ ವ್ಯಕ್ತಿತ್ವ, ಕೇವಲ ಕತೆ ಬರೆಯುವುದು ಮಾತ್ರವಲ್ಲದೆ ಅಂದಿನ ಸಮಾಜ ಸುಧಾರಕರಲ್ಲಿ ಒಬ್ಬರು ಕೂಡ. ಬಾಲ್ಯ ವಿವಾಹ, ವಿಧವಾ ವಿವಾಹ, ಮಹಿಳೆಯರ ಸಮಸ್ಯೆಗಳ ಕುರಿತು ಶತಮಾನದ ಹಿಂದೆಯೇ ಪ್ರಸ್ತಾಪ ಮಾಡಿದ್ದೂ ಅಲ್ಲದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮ ಮೈ ಮೇಲಿನ ಚಿನ್ನ ನೀಡುವ ಮೂಲಕ ಅಂದಿನ ಜನರಿಗೆ ಮಾದರಿಯಾಗಿದ್ದರು. ಅವರ ಹೆಸರಿನಲ್ಲಿ ಅವರ ಪುತ್ರ ವಸಂತ್ ರವರು ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಟಿ.ಪಿ ರಮೇಶ್ ರವರ ನೇತೃತ್ವದಲ್ಲಿ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಿದರು. ಇಂದು 22 ಮಹಿಳಾ ಲೇಖಕರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಬಿ.ಎಸ್ ಲೋಕೇಶ್ ಸಾಗರ್ ಮಾತನಾಡಿ, ಕೊಡಗಿನ ಗೌರಮ್ಮ ಕೇವಲ ಲೇಖಕಿ ಮಾತ್ರವಾಗಿರಲಿಲ್ಲ. ಅಂದಿನ ದಿನಗಳ ಮೌಲ್ಯದ ಕುರಿತು ಹೋರಾಟ ಮಾಡಿದಂತಹ ವ್ಯಕ್ತಿಯಾಗಿರುತ್ತಾರೆ. ಶತಮಾನದ ಹಿಂದೆಯೇ ಆಂಗ್ಲ ವಿದ್ಯಾಭ್ಯಾಸ ಪಡೆದು ಈಜುಡುಗೆಯಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಅಂದಿನ ಕಾಲಕ್ಕೆ ಮಾಡ್ರನ್ ಆಗಿದ್ದರು ಎಂದರು.
ವೇದಿಕೆಯಲ್ಲಿದ್ದ ಗಣ್ಯರು ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನವನ್ನು ವಿತರಣೆ ಮಾಡಿದರು.
ಸಭೆಯಲ್ಲಿ ಗೌರಮ್ಮ ದತ್ತಿ ಪ್ರಶಸ್ತಿ ವಿಜೇತರಾದ ಡಾ. ಕೋರನ ಸರಸ್ವತಿ, ಸಹನಾ ಕಾಂತಬೈಲು, ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಿ.ಜಿ ಅನಂತಶಯನ, ಸರ್ವೋದಯ ಸಮಿತಿಯ ಅಧ್ಯಕ್ಷರಾದ ಅಂಬೆಕಲ್ ಕುಶಾಲಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರು ಸಾಹಿತಿಗಳು ಆದ ಕಿಗ್ಗಾಲು ಗಿರೀಶ್, ಸದಸ್ಯರಾದ ದಂಬೆಕೋಡಿ ಸುಶೀಲ, ಈರಮಂಡ ಸೋಮಣ್ಣ, ಎಂ ಯು ಮಹಮದ್, ಕೊಂಪುಳಿರ ಮಮತಾ, ಅಪ್ಪಚಂಡ ಸುಚಿತಾ ಡೈಜಿ, ಗ್ರೆಸಿ, ಮುಂಡಂಡ ವಿಜು, ಮೀನಾಕ್ಷಿ ಕೇಶವ, ಪ್ರಿಯಾ, ಕಲ್ಪನಾ ಸಾಮ್ರಾಟ್, ತಿರಚಿಕ್ರ ಸುಮಿತ್ರಾ, ಭವಾನಿ, ಅಮ್ಮಟಂಡ ವಿಂಧ್ಯ, ರಾಜೇಶ್, ಗಂಗಮ್ಮ ಪಿ.ಎಂ.ಶ್ರೀ ಶಾಲಾ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪಿ.ಎಂ.ಶ್ರೀ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಮತ್ತು ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್ ನಿರೂಪಿಸಿದರು. ಈರಮಂಡ ಹರಿಣಿ ವಿಜಯ್ ಸ್ವಾಗತಿಸಿದರು. ಕಡ್ಲೇರ ತುಳಸಿ ಮೋಹನ್ ಮತ್ತು ಮೂರ್ನಾಡು ಕ.ಸಾ.ಪ. ಗೌರವ ಕಾರ್ಯದರ್ಶಿ ಕಟ್ಟೆಮನೆ ಮಹಾಲಕ್ಷ್ಮಿ ಅತಿಥಿಗಳ ಪರಿಚಯ ಮಾಡಿದರು.