ಗೌರಿಬಿದನೂರು ಹಾಲು ಉತ್ಪಾದನೆಯಲ್ಲಿ ಜಿಲ್ಲೆಗೇ ಪ್ರಥಮ

KannadaprabhaNewsNetwork |  
Published : Jun 23, 2024, 02:06 AM IST
ಗೌರಿಬಿದನೂರು ಹಾಲು ಉತ್ಪಾದನೆಯಲ್ಲಿ ಇಡೀ ಜಿಲ್ಲೆಯಲ್ಲಿಯೇ ಪ್ರಗತಿಯ ಪಥದಲ್ಲಿದೆ | Kannada Prabha

ಸಾರಾಂಶ

ಹಾಲು ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಬಹುತೇಕ ರೈತಾಪಿ ವರ್ಗದವರು ಹೈನುಗಾರಿಕೆ ಮೇಲೆ ಅವಲಂಬಿತರಾಗಿದ್ದು, ಅವರೆಲ್ಲರ ನೆಮ್ಮದಿಯ ಬದುಕಿಗೆ ಹೈನುಗಾರಿಕೆ ಸಹಕಾರಿಯಾಗಿದೆ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಬಯಲುಸೀಮೆಯ ಪ್ರದೇಶದಲ್ಲಿ ಹೈನುಗಾರಿಕೆಯು ರೈತಾಪಿ ವರ್ಗದವರ ಜೀವನಾಡಿಯಾಗಿದ್ದು. ಗೌರಿಬಿದನೂರು ಹಾಲು ಉತ್ಪಾದನೆಯಲ್ಲಿ ಇಡೀ ಜಿಲ್ಲೆಯಲ್ಲಿಯೇ ಪ್ರಗತಿಯ ಪಥದಲ್ಲಿದೆ ಎಂದು ಶಾಸಕ ಕೆ. ಎಚ್. ಪುಟ್ಟಸ್ವಾಮಿ ಗೌಡ ತಿಳಿಸಿದರು.

ಹಾಲು ಶಿತಲೀಕರಣ ಘಟಕದಲ್ಲಿ ಹಮ್ಮಿಕೊಂಡಿದ್ದ ಕ್ಷೀರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾಲು ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಬಹುತೇಕ ರೈತಾಪಿ ವರ್ಗದವರು ಹೈನುಗಾರಿಕೆ ಮೇಲೆ ಅವಲಂಬಿತರಾಗಿದ್ದು, ಅವರೆಲ್ಲರ ನೆಮ್ಮದಿಯ ಬದುಕಿಗೆ ಹೈನುಗಾರಿಕೆ ಸಹಕಾರಿಯಾಗಿದೆ ಎಂದರು.

ಹಾಲು ಉತ್ಪಾದಕರಿಗೆ ನೆರವು

ಹಾಲು ಒಕ್ಕೂಟವು ಹಾಲಿಗೆ ಉತ್ತಮ ಪ್ರೋತ್ಸಾಹ ಧನ ನೀಡುವ ಜೊತೆಗೆ ರೈತರಿಗೆ ಉತ್ತಮ ಬೆಲೆ ನೀಡಿದೆ. ಇದರಿಂದಾಗಿ ಗ್ರಾಮೀಣ ಭಾಗದ ರೈತಾಪಿ ವರ್ಗದ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಕ್ಷೇತ್ರದಲ್ಲಿನ ರೈತರ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಿ ಇಡೀ ರಾಜ್ಯದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೇನೆ. ರೈತರ ಯಾವುದೇ ಸಮಸ್ಯೆಗಳಿಗೆ ನನ್ನ ಸಹಾಯ, ಸಹಕಾರವಿರುತ್ತದೆ ಎಂದು ತಿಳಿಸಿದರು.

ಕೋಚಿಮುಲ್ ನ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾತನಾಡಿ, ಹೆಚ್ಚಿನ ಹಾಲು ಉತ್ಪಾದನೆಯಲ್ಲಿ, ಗುಣಮಟ್ಟದಲ್ಲಿ, ವಿಮೆ ಮಾಡಿಸುವುದರಲ್ಲಿ ಗೌರಿಬಿದನೂರು ಪ್ರಥಮ ಸ್ಥಾನದಲ್ಲಿದೆ. ಇಡೀ ಒಕ್ಕೂಟಕ್ಕೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುವ ಅಧಿಕಾರಿ ವರ್ಗ ಮತ್ತು ಹೈನುದಾರರ ಹಿತವನ್ನು ಕಾಪಾಡುವುದೇ ನಮ್ಮ ಜವಾಬ್ದಾರಿ ಎಂದರು.

ಹಸಿರು ಮೇವು ಉತ್ಪಾದನೆ

ಒಕ್ಕೂಟದ ವತಿಯಿಂದ ಹಸಿರು ಮೇವು ಉತ್ಪಾದನೆ ಮಾಡಲು ಹೈನುದಾರರಿಗೆ ಪ್ರೋತ್ಸಾಹ ನೀಡಲಾಗಿದೆ. ಒಕ್ಕೂಟವು ಹಾಲಿನ ಪ್ರಮಾಣದಲ್ಲಿ ಪ್ರಗತಿ ಕಾಣಲು ಹಾಲು ಉತ್ಪಾದಕರು, ಸಹಕಾರ ಸಂಘದ ಸಿಬ್ಬಂದಿ ಹಾಗೂ ನಿಮ್ಮೆಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಒಕ್ಕೂಟವು ಅಭಿವೃದ್ಧಿಯ ಪಥದತ್ತ ಸಾಗಾಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಹಾಲು ಉತ್ಪಾದಕರ ಹಾಗೂ ಸಿಬ್ಬಂದಿಯ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು. ಒಕ್ಕೂಟದ ಮಾಜಿ ಅಧ್ಯಕ್ಷ ಜೆ.ಕಾಂತರಾಜು, ನಿರ್ದೇಶಕಿ ಸುನಂದಮ್ಮ, ವ್ಯವಸ್ಥಾಪಕ ನಾಗೇಶ್, ಉಪ ವ್ಯವಸ್ಥಾಪಕ ನರೇಂದ್ರ, ಮೇವು ಘಟಕದ ವ್ಯವಸ್ಥಾಪಕ ಮಂಜುನಾಥ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ಮಾರುತಿ, ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್ ರೆಡ್ಡಿ, ಇನ್ನಿತರರು ಭಾಗವಹಿಸಿದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ