ರಾಷ್ಟ್ರಪತಿ ಪದಕ ಪಡೆದ ಪೊಲೀಸರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ದಾವಣಗೆರೆಸರ್ಕಾರಗಳು ತಪ್ಪು ಮಾಡಿದವರಿಗೆ ಶೀಘ್ರ ಶಿಕ್ಷೆ ನೀಡಿ, ಒಳ್ಳೆಯದು ಮಾಡಿದವರನ್ನು ಪ್ರೋತ್ಸಾಹಿಸಿದರೆ ಸಾಕು ಪ್ರಗತಿ ತನ್ನಿಂದ ತಾನೇ ವೃದ್ಧಿಯಾಗುತ್ತದೆ. ರಾಜ ಮಹಾರಾಜರ ಕಾಲದಲ್ಲೂ ಕೂಡ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಕಾರ್ಯಗಳಿಗೆ ಹೆಚ್ಚು ಆದ್ಯತೆ ನೀಡಿದ್ದರು. ಹಾಗಾಗಿ ಈಗಲಾದರೂ ಸರ್ಕಾರಗಳು ಎಚ್ಚೆತ್ತುಕೊಂಡು ಶೀಘ್ರ ನ್ಯಾಯಕ್ಕೆ ಆದ್ಯತೆ ನೀಡಬೇಕು ಎಂದು ನಿವೃತ್ತ ಪೊಲೀಸ್ ಮಹಾನಿರೀಕ್ಷಕ ಶಂಕರ ಮಹಾದೇವ ಬಿದರಿ ಹೇಳಿದರು.
ನಗರದ ಶಿವಧ್ಯಾನ ಮಂದಿರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ದಾವಣಗೆರೆ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಮತ್ತು ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಪುರಸ್ಕೃತ ಪೊಲೀಸರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಬಲಿಷ್ಠ ಕಾನೂನು, ಶೀಘ್ರ ನ್ಯಾಯದಾನ ಬದಲಾವಣೆ ಅಗತ್ಯ ಎಂದರು.ಯಾವುದೇ ಅಪರಾಧಕ್ಕೆ 2 ವರ್ಷದಲ್ಲೇ ಶಿಕ್ಷೆ ಆಗಬೇಕು. ಈಗಿನ ರೀತಿ 30, 40 ವರ್ಷ ಎಳೆದುಕೊಂಡು ಹೋದರೆ ಅದು ಶಿಕ್ಷೆ ಅಲ್ಲ, ನ್ಯಾಯದ ವ್ಯವಸ್ಥೆ ಅಲ್ಲ, ಬದಲಿಗೆ ಅನ್ಯಾಯದ ಕೂಪ ಆಗಲಿದೆ. ತಪ್ಪು ಮಾಡಿದ್ದರೆ ಶಿಕ್ಷೆ ಆಗಬೇಕು. ನಿರ್ದೋಷಿಯಾದರೆ ಬಿಡುಗಡೆ ಆಗಬೇಕು. ದೇಶದಲ್ಲಿ ನ್ಯಾಯ ಬಲಿಷ್ಠವಾಗಬೇಕು. ನ್ಯಾಯ ಶೀಘ್ರವಾಗಿ ದೊರೆಯಬೇಕು. ಈ ರೀತಿಯ ಬದಲಾವಣೆಗಳನ್ನು ನ್ಯಾಯ ವ್ಯವಸ್ಥೆಯಲ್ಲಿ ಸರ್ಕಾರಗಳು ತಂದರೆ ದೇಶದ ಅಭಿವೃದ್ಧಿ, ಜನರ ಕಲ್ಯಾಣ ಸಾಧ್ಯ ಎಂದರು.
ಪೊಲೀಸ್ ಕೆಲಸಕ್ಕಿಂತ ಪುಣ್ಯವಾದ ಕೆಲಸ ಭೂಮಿ ಮೇಲೆ ಬೇರೆ ಇಲ್ಲ. ಜಗತ್ತಿನ ಅಭಿವೃದ್ಧಿಗೆ ಶಾಂತಿ ಸುವ್ಯವಸ್ಥೆ ಮುಖ್ಯವಾಗಿದೆ. ನ್ಯಾಮತಿ ಬ್ಯಾಂಕ್ ದರೋಡೆ ಭೇದಿಸಿದ ದಾವಣಗೆರೆ ಜಿಲ್ಲಾ ಪೊಲೀಸರು ಕಾರ್ಯ ಶ್ಲಾಘನೀಯವಾಗಿದ್ದು, ಮುಖ್ಯಮಂತ್ರಿ ಪದಕ ಅವರಿಗೆ ಸಲ್ಲಬೇಕಾದ ಗೌರವ ಎಂದರು.ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಪ್ರಧಾನ ಸಂಚಾಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಮಾತನಾಡಿ, ಜನರನ್ನು ರಕ್ಷಣೆ ಮಾಡುವ ಪೊಲೀಸರು ಕೂಡ ತಮ್ಮ ಕಾರ್ಯಕ್ಕೆ ಹೋಗುವುದಕ್ಕು ಮುನ್ನ ಪರಮಾತ್ಮನಿಗೆ ವಂದಿಸಿ ಹೋಗುತ್ತಾರೆ. ಹಾಗಾಗಿ ಪರಮಾತ್ಮನ ರಕ್ಷಣೆ ಎಲ್ಲರಿಗೂ ಬೇಕು. ಸದಾ ಒತ್ತಡದ ಕೆಲಸದಲ್ಲಿರುವ ಪೊಲೀಸರು ಆಧ್ಯಾತ್ಮದ ತರಬೇತಿ ಪಡೆದುಕೊಳ್ಳಬೇಕು ಎಂದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹಳಿಯಾಳ ಶಾಖೆ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಡಾ.ಪದ್ಮಾಜಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಂಕರ್ ಬಿದರಿ ಅವರಿಗೆ ‘ಮೌಲ್ಯ ಮಿತ್ರ’ ಬಿರುದು ನೀಡಿ ಸನ್ಮಾನಿಸಿದರೆ, ಪದಕ ಪುರಸ್ಕೃತ ಪೊಲೀಸರಿಗೆ ‘ರಕ್ಷಶ್ರೀ’ ಬಿರುದು ನೀಡಿ ಸನ್ಮಾನಿಸಲಾಯಿತು.ನಿವೃತ್ತ ಎಸ್ಪಿ ಬಿ.ಬಿ.ಸಕ್ರಿ, ವೈದ್ಯ ಡಾ.ಬಿ.ಎಸ್.ನಾಗಪ್ರಕಾಶ್, ನಿವೃತ್ತ ಡಿವೈಎಸ್ಪಿ ಮುರುಗನ್, ಕೊಟ್ರೇಶ್ ಕಂಚಿಕೇರಿ ಸೇರಿದಂತೆ ಇತರೆ ಅಧಿಕಾರಿ ವರ್ಗ, ಸಿಬ್ಬಂದಿ, ಇತರರು ಇದ್ದರು.