ಮಂಡ್ಯ ಮಂಜುನಾಥ
ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ನಡೆಯದೆ ೬ ವರ್ಷಗಳಿಂದ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಿಗೆ ಕಳೆದೊಂದು ವರ್ಷದಿಂದ ಚುನಾವಣೆ ನಡೆದಿಲ್ಲ. ಸ್ಥಳೀಯ ಸಂಸ್ಥೆಗಳ ಮೇಲೆ ಸರ್ಕಾರ ವಕ್ರದೃಷ್ಟಿ ಬೀರಿರುವಂತೆ ಕಂಡುಬರುತ್ತಿದೆ. ಚುನಾವಣೆಯನ್ನು ವಿಳಂಬ ಮಾಡುತ್ತಲೇ ಸ್ಥಳೀಯ ಮಟ್ಟದ ಪ್ರತಿನಿಧಿಗಳು ಆಯ್ಕೆಯಾಗದಂತೆ ತಡೆದು ಅಧಿಕಾರವನ್ನು ಕೇಂದ್ರೀಕರಣಗೊಳಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಮಟ್ಟದಲ್ಲಿ ಪ್ರತಿನಿಧಿಗಳಿಲ್ಲದೆ ಗ್ರಾಮೀಣಾಭಿವೃದ್ಧಿ ಕುಂಠಿತಗೊಂಡಿದೆ. ಸ್ಥಳೀಯ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದನೆಯೇ ಸಿಗದಂತಾಗಿದೆ. ಎಲ್ಲೆಡೆ ಅಧಿಕಾರಿಗಳ ದರ್ಬಾರ್ ನಡೆದಿದೆ. ಊರಿನ ಅಭಿವೃದ್ಧಿಗೆ ಶಾಸಕರನ್ನೇ ಹುಡುಕಿಕೊಂಡು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ.ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸುವ ಅಧಿಕಾರ ಈ ಹಿಂದೆ ರಾಜ್ಯ ಚುನಾವಣಾ ಆಯೋಗಕ್ಕೆ ಇತ್ತು. ಆಯೋಗವೇ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಹಾಗೂ ಮೀಸಲಾತಿ ಕರಡನ್ನು ಪ್ರಕಟಿಸುವ ಅಧಿಕಾರ ಹೊಂದಿತ್ತು. ಆದರೆ, ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದು ಕರ್ನಾಟಕ ಪಂಚಾಯತ್‌ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ನೀಡಿತ್ತು.
ಜಾತಿ ಗಣತಿ, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನೆಪ ಹೇಳಿಕೊಂಡು ಚುನಾವಣೆಯನ್ನು ಮುಂದೂಡುತ್ತಲೇ ಇದೆ. ಇದರ ಪರಿಣಾಮ ಸ್ಥಳೀಯ ಸಂಸ್ಥೆಗಳ ಅಧಿಕಾರದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಚಾತಕ ಪಕ್ಷಿಗಳಂತೆ ಚುನಾವಣೆ ಘೋಷಣೆಯಾಗುವ ದಿನಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ.
ಎಷ್ಟೋ ಹಳ್ಳಿಗಳಲ್ಲಿ ರಸ್ತೆ, ಚರಂಡಿಗಳು ಅಭಿವೃದ್ಧಿ ಕಾಣದೆ ನೆನಗುದಿಗೆ ಬಿದ್ದಿವೆ. ಚರಂಡಿ ಕಸವೆಲ್ಲಾ ರಸ್ತೆಯಲ್ಲೇ ಚೆಲ್ಲಾಡುತ್ತಿದ್ದರೂ, ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿದ್ದರೂ ಕೇಳೋರೇ ದಿಕ್ಕಿಲ್ಲದಂತಾಗಿದೆ. ಅಧಿಕಾರ ವಿಕೇಂದ್ರೀಕರಣವಾಗದೆ ಕೇಂದ್ರೀಕರಣವಾಗಿರುವುದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಯಾವೊಂದು ಪ್ರಗತಿದಾಯಕ ಚಟುವಟಿಕೆಗಳಿಲ್ಲದೆ ಆಡಳಿತ ಯಂತ್ರ ನಿಷ್ಕ್ರೀಯವಾಗಿರುವಂತೆ ಭಾಸವಾಗುತ್ತಿದೆ.
ಪಂಚಾಯತ್‌ರಾಜ್ ಕಾಯಿದೆ ಪ್ರಕಾರ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸಬೇಕು. ಕಳೆದ ೬ ವರ್ಷಗಳಿಂದ ಚುನಾವಣೆ ನಡೆದಿಲ್ಲ. ಈ ವಿಳಂಬ ನೀತಿ ಸರಿಯಲ್ಲ. ಇದರಿಂದ ಗ್ರಾಮೀಣಾಭಿವೃದ್ಧಿಗೆ ಹಿನ್ನಡೆಯಾಗಲಿದೆ. ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ ದೊರಕಿಸಲಾಗದು.
ಸರ್ಕಾರಗಳು ಚುನಾವಣೆ ನಡೆಸದಿರುವುದೇ ದೊಡ್ಡ ಅಪರಾಧ. ಪ್ರಜಾಪ್ರಭುತ್ವಕ್ಕೆ ಅವಮಾನ. ಅಧಿಕಾರ ವಿಕೇಂದ್ರೀಕರಣ ಎಂದರೆ ಇದೇನಾ. ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಕಾರಣವೇ ಇಲ್ಲದೆ ಚುನಾವಣೆ ನಡೆಸದಿರುವುದು ಜನರಿಗೆ ಮಾಡಿರುವ ಮಹಾ ದ್ರೋಹ.
ರಾಜ್ಯ ಸರ್ಕಾರ ತಡ ಮಾಡದೆ ಚುನಾವಣೆ ನಡೆಸಬೇಕು. ಸ್ಥಳೀಯ ಪ್ರದೇಶಾಭಿವೃದ್ಧಿಗೆ ಸರ್ಕಾರ ನೀಡುವ ಅನುದಾನಗಳು ಸಕಾಲದಲ್ಲಿ ಅಭಿವೃದ್ಧಿಗೆ ಬಳಕೆಯಾಗಬೇಕಾದರೆ ಜನರಿಂದ ಆಯ್ಕೆಯಾದ ಪ್ರತಿನಿಧಿಗಳಿರಬೇಕು. ಆಗ ವಾಪಸ್ ಹೋಗಲು ಅವಕಾಶವಾಗುವುದಿಲ್ಲ. ಸ್ಥಳೀಯ ಪ್ರದೇಶಗಳು ನಿರೀಕ್ಷೆಯಂತೆ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ.
ಆರು ವರ್ಷಗಳಿಂದ ಜಿಪಂ-ತಾಪಂ ಚುನಾವಣೆ ನಡೆದಿಲ್ಲ. ಗ್ರಾಮೀಣ ಮಟ್ಟದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಧಿಕಾರ ವಿಕೇಂದ್ರೀಕರಣವಾಗಿದ್ದಾಗ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕಿಸಲು ಸಾಧ್ಯವಾಗುತ್ತದೆ. ಈಗ ಅಧಿಕಾರ ಒಂದೆಡೆ ಕೇಂದ್ರೀಕರಣವಾಗಿರುವುದಿಂದ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ.
- ಸಿ.ಅಶೋಕ್, ಮಾಜಿ ಸದಸ್ಯರು, ಜಿಪಂಆರು ವರ್ಷವಾದರೂ ಚುನಾವಣೆ ನಡೆಸುವ ಯೋಗ್ಯತೆ ಇಲ್ಲದಿದ್ದ ಮೇಲೆ ಚುನಾವಣೆ ನಡೆಸುವ ಅಧಿಕಾರವನ್ನು ಚುನಾವಣಾ ಆಯೋಗದಿಂದ ಏಕೆ ಕಸಿದುಕೊಳ್ಳಬೇಕಿತ್ತು. ಸ್ಥಳೀಯ ಪ್ರತಿನಿಧಿಗಳಿಗೆ ಅಧಿಕಾರ ಸಿಗಬಾರದು ಎಂಬ ಒಳಸಂಚು ಇರುವಂತೆ ಕಾಣಿಸುತ್ತದೆ. ಅಧಿಕಾರವನ್ನು ವಿಕೇಂದ್ರೀಕರಣಗೊಳಿಸದೆ ಕೇಂದ್ರೀಕರಿಸಿಕೊಂಡು ಅಭಿವೃದ್ಧಿಗೆ ಹಿನ್ನಡೆ ಉಂಟುಮಾಡುತ್ತಿದೆ.
- ಎಂ.ವಿ.ಪ್ರಕಾಶ್, ಮಾಜಿ ಅಧ್ಯಕ್ಷರು, ನಗರಸಭೆಸ್ಥಳೀಯ ಸಂಸ್ಥೆ ಚುನಾವಣೆಯನ್ನು ನಡೆಸದೆ ರಾಜ್ಯಸರ್ಕಾರ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದೆ. ಪುರಸಭೆ ಕಾಯ್ದೆ ೧೯೬೪ರ ಪ್ರಕಾರ ೭೪ರ ತಿದ್ದುಪಡಿ ನಿಯಮ ಮತ್ತು ೨೦೨೬ರ ಜೂನ್‌ನಲ್ಲಿ ಸುಪ್ರೀಂಕೋರ್ಟ್ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಸೂಚಿಸಿದ್ದರೂ ಈವರೆಗೂ ಚುನಾವಣೆ ನಡೆಸದ ಸರ್ಕಾರವನ್ನು ವಜಾಗೊಳಿಸುವುದೇ ಸೂಕ್ತ.
- ಶಿವಕುಮಾರ್, ಮಾಜಿ ಸದಸ್ಯರು, ನಗರಸಭೆ