ಕನ್ನಡಪ್ರಭ ವಾರ್ತೆ ಅರಸೀಕೆರೆ
ಸಾರಿಗೆ ಇಲಾಖೆಯ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆಯಿಂದಲೇ ಸಾರಿಗೆ ಬಸ್ಸುಗಳು ರಸ್ತೆಗೆ ಇಳಿಯದೆ ಡಿಪೋ ಆವರಣದಲ್ಲಿ ಸಾಲಾಗಿ ನಿಂತರೆ, ಇತ್ತ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಆವರಣದಲ್ಲಿ ಖಾಸಗಿ ವಾಹನಗಳ ದರ್ಬಾರ್ ಜೋರಾಗಿತ್ತು.ಅರಸೀಕೆರೆ ಡಿಪೋನಲ್ಲಿ 110 ಬಸ್ಸುಗಳಿದ್ದು ಈ ಪೈಕಿ 80ಕ್ಕೂ ಹೆಚ್ಚು ಬಸ್ ಗಳು ಡಿಪೋ ಆವರಣದಲ್ಲಿ ಸೇರಿಕೊಂಡರೆ ಮತ್ತೆ ಬೇರೆ ಊರುಗಳಿಗೆ ಹೋಗಿದ್ದ ಬಸ್‌ಗಳು ಅಲ್ಲಲ್ಲಿಯೇ ಸುರಕ್ಷಿತವಾಗಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ತಹಸೀಲ್ದಾರ್ ಸಂತೋಷ್ ಕುಮಾರ್ ಖಾಸಗಿ ಶಾಲಾ ಸಂಸ್ಥೆಗಳ ಹಾಗೂ ಇತರ ವಾಹನಗಳ ಮಾಲೀಕರ ಸಹಕಾರವನ್ನು ಪಡೆದು, ಪ್ರಯಾಣಿಕರಿಗೆ ತೊಂದರೆಯಾಗದ ರೀತಿ ಪೊಲೀಸರ ಸಹಾಯದಿಂದ ಖಾಸಗಿ ವಾಹನಗಳನ್ನು ಬಳಸಿಕೊಂಡು ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದ ದೃಶ್ಯ ಗಮನ ಸೆಳೆಯಿತು. ಬೆಳಗ್ಗೆ 6 ರಿಂದಲೇ ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ನೌಕರರನ್ನು ಸರದಿ ಮೇಲೆ ಕಾರ್ಯ ನಿರ್ವಹಿಸುವಂತೆ ಬಸ್ ನಿಲ್ದಾಣಕ್ಕೆ ಆಯೋಜಿಸಿದ್ದರು.ಸಾರಿಗೆ ಇಲಾಖೆಯ ನೌಕರರು ತಮ್ಮ ವೃತ್ತಿಯನ್ನು ಸೇವಾ ಮನೋಭಾವನೆಯಿಂದ ಮಾಡುತ್ತಿದ್ದೇವೆ ಆದರೆ ನಮ್ಮ ಸೇವೆಗೆ ತಕ್ಕ ಪುರಸ್ಕಾರವನ್ನ ಸರ್ಕಾರ ನೀಡುತ್ತಿಲ್ಲ ಪ್ರತಿಯೊಂದು ದಿನ ಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತದೆ ಶಿಕ್ಷಣ ಆರೋಗ್ಯ ವೆಚ್ಚ ದುಬಾರಿಯಾಗುತ್ತಿವೆ. ಹೀಗಾಗಿ ಸಾರಿಗೆ ಇಲಾಖೆ ನೌಕರರು ತಮ್ಮ ಕುಟುಂಬವನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಗಮನ ಹರಿಸಬೇಕಿದೆ ನಮ್ಮ ನ್ಯಾಯ ಸಮ್ಮತ ಬೇಡಿಕೆಯನ್ನು ಈಡೇರಿಸುವ ಮೂಲಕ ಸಾರಿಗೆ ಇಲಾಖೆ ನೌಕರ ಹಿತ ಕಾಯಬೇಕಿದೆ ಎಂದು ಸಾರಿಗೆ ಇಲಾಖೆಯ ನೌಕರ ಮೂತಿಕೆರೆ ಮಂಜುನಾಥ್ ಒತ್ತಾಯಿದರು.
ಶಾಸಕ ಕೆ. ಎಂ ಶಿವಲಿಂಗೇಗೌಡ ಮಾತನಾಡಿ, ಸಾರಿಗೆ ಇಲಾಖೆಯ ನೌಕರರು ಸೇರಿದಂತೆ ಸರ್ಕಾರಿ ನೌಕರರ ಹಿತ ಕಾಯಲು ರಾಜ್ಯ ಸರ್ಕಾರ ಬದ್ಧವಾಗಿದೆ. ಆದ್ಯತೆ ಮೇರೆಗೆ ಸಾರಿಗೆ ಇಲಾಖೆ ನೌಕರರ ಬೇಡಿಕೆಗಳು ಈಡೇರುವವು. ಸಾರಿಗೆ ಇಲಾಖೆ ನೌಕರರು ತಮ್ಮ ಮುಷ್ಕರವನ್ನು ಕೈ ಬಿಟ್ಟು ತಮ್ಮ ಸೇವಾ ಕಾರ್ಯವನ್ನು ಎಂದಿನಂತೆ ಮುಂದುವರೆಸಿ ಎಂದು ಮನವಿ ಮಾಡಿದರು.