ಶಿವಮೊಗ್ಗ : ವೇತನ ಪರಿಷ್ಕರಣೆಯ ಬಾಕಿ ಹಣ ಬಿಡುಗಡೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯದಾದ್ಯಂತ ಮಂಗಳವಾರ ಕರೆ ನೀಡಿದ್ದ ಕೆಎಸ್ಆರ್‌ಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡುವೆಯೂ ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಶೇ.50ಕ್ಕೂ ಹೆಚ್ಚು ಬಸ್‌ಗಳು ಸಂಚರಿಸಿದವು.
ಮುಷ್ಕರದ ಬಗ್ಗೆ ಮೊದಲೇ ಸಾರ್ವಜನಿಕರಿಗೆ ಬಂದ್ ಮಾಹಿತಿ ಇದ್ದುದರಿಂದ ಬಹುತೇಕ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಅತ್ಯಂತ ವಿರಳವಾಗಿತ್ತು. ಕಾಯಂ ನೌಕರರು ಗೈರು ಹಾಜರಾಗಿದ್ದರೂ ಹಲವು ಬಸ್‌ಗಳು ಶಿವಮೊಗ್ಗ ಡಿಪೋದಿಂದ ಓಡಾಡಿದವು. ತರಬೇತಿ ಪಡೆಯುತ್ತಿರುವ ಚಾಲಕರು ಮತ್ತು ನಿರ್ವಾಹಕರು ಹಾಗೂ ಖಾಸಗಿ ಬಸ್ ಚಾಲಕರನ್ನು ಬಳಸಿಕೊಂಡು ನಿಗಮದ ಅಧಿಕಾರಿಗಳು ಬಸ್ ಓಡಿಸುತ್ತಿರುವುದು ಕಂಡು ಬಂತು.ದೂರದ ಪ್ರಯಾಣಿಕರಿಗೆ ಬೇರೆ ಡಿಪೋದಿಂದ ಬಂದ ಬಸ್‌ಗಳು ಅವರ ಡಿಪೋದವರೆಗೆ ಮಾತ್ರ ಬಿಡುತ್ತೇವೆ ಎಂದು ಹೇಳಿದ್ದು ಕೇಳಿ ಬಂತು. ಬೆಳಗ್ಗೆ ಆರೂವರೆಗವರೆಗೆ ಒಂದಿಷ್ಟು ಬಸ್‌ಗಳ ಸಂಚಾರವಿತ್ತು. ನಂತರ ಬಹುತೇಕ ಬಸ್‌ಗಳ ಸಂಚಾರ ರದ್ದಾಯಿತು. ಜಿಲ್ಲೆಯ ಹಲವೆಡೆ ಖಾಸಗಿ ಬಸ್‌ಗಳಲ್ಲಿ ಜನ ತೆರಳಿದರು. ಆಟೋ, ಟ್ಯಾಕ್ಸಿಗೂ ಬೇಡಿಕೆ ಕಂಡು ಬಂದಿತ್ತು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಕೆಲವು ಬಸ್‌ಗಳು ಖಾಲಿಯಾಗಿ ಓಡಾಡುತ್ತಿರುವುದು ಕಂಡುಬಂದಿದೆ. ಬಹುತೇಕ ಇಂದಿನ ಮುಷ್ಕರಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.ವಿವಿಧ ಊರುಗಳಿಗೆ ತೆರಳು ಬಂದಿದ್ದವರಿಗೆ ಬಸ್ ಇಲ್ಲದೇ ತೊಂದರೆಯಾಗಿದ್ದು, ಬೇರೆ ವ್ಯವಸ್ಥೆ ಇಲ್ಲದ ಕಾರಣ ಮನೆಗೆ ವಾಪಸ್ ಆಗಿದ್ದಾರೆ. ಕೆಲವು ಮಾರ್ಗಗಳಲ್ಲಿ ಖಾಸಗಿ ಬಸ್ ಓಡಿಸಲಾಗಿದೆ.ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಎಐಟಿಯುಸಿ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ಎಂ.ಮಹಾದೇವ್ ಮಾತನಾಡಿ, ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಲು ಆ.4 ರವರೆಗೆ ಗಡುವು ನೀಡಲಾಗಿತ್ತು. ಈ ಹಿಂದೆ 21 ದಿನದ ನೋಟಿಸ್ ಅನ್ನು ಸರ್ಕಾರಕ್ಕೆ ನೀಡಲಾಗಿತ್ತು. ಡಿಸೆಂಬರ್‌ನಲ್ಲಿ ಬೆಳಗಾವಿ ಚಲೋ ಮುಷ್ಕರ ಹಮ್ಮಿಕೊಂಡು ಅಲ್ಲಿ ಕೂಡ ಸರ್ಕಾರದ ಪರವಾಗಿ ಸಚಿವ ದಿನೇಶ್ ಗುಂಡೂರಾವ್ ಅವರು ಬಂದು ಮನವಿ ಸ್ವೀಕರಿಸಿದ್ದರು. ಮುಖ್ಯಮಂತ್ರಿಗಳು 15 ದಿನ ಸಮಯ ಕೇಳಿದ್ದರು. ಬಳಿಕ ಏಪ್ರಿಲ್ 14ರಂದು ಮುಖ್ಯಮಂತ್ರಿಗಳು ನಮ್ಮ ಜೊತೆಗೆ ಮಾತನಾಡಿ ಒಂದೂವರೆ ಗಂಟೆ ಕಾಲ ಸಭೆ ನಡೆಸಿ ಬಹುತೇಕ ಬೇಡಿಕೆಗಳನ್ನು ಪೂರೈಸುವ ಭರವಸೆ ನೀಡಿದ್ದರು. ಸುಮಾರು 35 ತಿಂಗಳ ಹೆಚ್ಚುವರಿ ವೇತನ ಬಾಕಿ ಇದ್ದು, ನೌಕರರ ಮೇಲಿನ ಎಲ್ಲಾ ಕೇಸ್‌ಗಳನ್ನು ವಾಪಸ್ ಪಡೆಯಬೇಕೆಂಬ ಬೇಡಿಕೆ ಇಟ್ಟಿದ್ದೆವು. ಆದರೆ, ಜುಲೈ 4ರಂದು ಮತ್ತೆ ಸಭೆ ಕರೆದು ಮುಖ್ಯಮಂತ್ರಿಗಳು ಉಲ್ಟಾ ಹೊಡೆದರು ಎಂದು ದೂರಿದರು.ನಮ್ಮ ಯಾವ ಸಮಸ್ಯೆಗೂ ಸರ್ಕಾರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಬದಲಾಗಿ ಎಸ್ಮಾ ಕಾಯ್ದೆ ಜಾರಿಗೆ ತರುವ ಬೆದರಿಕೆ ಹಾಕಿದ್ದಾರೆ. ಕೋರ್ಟ್ ಆದೇಶದ ನೆಪವೊಡ್ಡಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಕೆಲವು ಹೊಸದಾಗಿ ನೇಮಕಗೊಂಡ ಚಾಲಕರನ್ನು ಅಧಿಕಾರಿಗಳು ಕೂಡಿಹಾಕಿ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿದ ಅವರು, ಸರ್ಕಾರ ಕೂಡಲೇ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.