ಶಿವಮೊಗ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ರಾಜ್ಯ ಕಾಂಗ್ರೆಸ್ ಹುಚ್ಚರ ಸಂತೆಯಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹರಿಹಾಯ್ದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಈಗಾಗಲೇ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಭಾರತ ದೇಶದಲ್ಲಿ ದೇಶಕ್ಕೆ ಪೂರಕವಾಗಿ ನೀವು ವರ್ತಿಸುತ್ತಿಲ್ಲ ಎಂದು ಕಟು ಮಾತಿನಲ್ಲಿ ಎಚ್ಚರಿಸಿದೆ. ಚೀನಾದ ವಿಷಯಕ್ಕೆ ಸಂಬಂಧಿಸದಿಂತೆ ಕಾಂಗ್ರೆಸ್ ಯಾವಾಗಲು ಸುಳ್ಳು ಹೇಳುತ್ತಲೇ ಬಂದಿದೆ. ಅದನ್ನೇ ರಾಹುಲ್ ಗಾಂಧಿ ಅವರು ಕೂಡ ಮುಂದುವರೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ದೇಶ ವಿಭಜನೆ ಮಾಡಿದವರು ಕಾಂಗ್ರೆಸಿಗರು. ಸೈನಿಕರಿಗೆ ಅಪಮಾನ ಮಾಡಿದವರು ಕಾಂಗ್ರೆಸಿಗರು. ಭಾರತದ ನೆಲವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದು ಹೇಳುವ ಮೂಲಕ ದೇಶದ್ರೋಹದ ಹೇಳಿಕೆ ನೀಡಿದ್ದಾರೆ. ಒಂದು ರೀತಿಯಲ್ಲಿ ಚೀನಾದ ಪರ ಅವರು ಮಾತನಾಡುತ್ತಿದ್ದಾರೆ. ಆದ್ದರಿಂದ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿರುವ ಹಿನ್ನೆಲೆಯಲ್ಲಿ ಅವರು ದೇಶದ ಜನರ ಕ್ಷಮೆ ಕೇಳಬೇಕು ಮತ್ತು ಈ ಕಾಂಗ್ರೆಸ್ ನಾಯಕರು ತಮ್ಮ ನಡವಳಿಕೆಗಳನ್ನು ತಿದ್ದಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ದೇಶ ಭಕ್ತರನ್ನು ಯಾವಾಗಲೂ ಸ್ನೇಹಿತರಂತೆ ಕಾಣುತ್ತದೆ. ಕಾಂಗ್ರೆಸ್‌ನವರು ಪಾಠ ಕಲಿಸುವ ಅಗತ್ಯವಿಲ್ಲ. ದೇಶ ದ್ರೋಹದ ಹೇಳಿಕೆ ನೀಡಿರುವ ಅವರು ಈ ದೇಶದಲ್ಲಿ ಬದುಕುವ ಯೋಗ್ಯತೆ ಮತ್ತು ಹಕ್ಕು ಅವರಿಗಿಲ್ಲ ಎಂದರು.ಸಂತೋಷ್ ಲಾಡ್ ವಿರುದ್ಧ ಕಿಡಿ:ಇನ್ನು ರಾಜ್ಯದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೂಡ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಲಾಡ್ ಅವರಿಗೆ ಇಲ್ಲ. ಮೋದಿ ಜಗತ್ತಿನಲ್ಲಿಯೇ ಹೆಸರಾದವರು. ಕಾರ್ಮಿಕರ ಸಮಸ್ಯೆಗಳನ್ನು ಹೇಳಲು ಮತ್ತು ಅದನ್ನು ನಿವಾರಿಸಲು ಅವರು ಶಿವಮೊಗ್ಗಕ್ಕೆ ಬಂದಿದ್ದರು. ಆದರೆ ಅದನ್ನು ಬಿಟ್ಟು ಮೋದಿ ಅವರ ಬಗ್ಗೆ ದೇಶದ ಜಿಡಿಪಿ ಮತ್ತು ಡಿಮಾನಿಟೈಸೇಷನ್ ಬಗ್ಗೆ ಮಾತನಾಡುತ್ತಾರೆ. ಮೋದಿ ಅವರ ಬಗ್ಗೆ ಮಾತನಾಡುವಾಗ ಅವರು ಎಚ್ಚರಿಕೆಯಿಂದಿರಬೇಕು ಎಂದು ಕಿಡಿಕಾರಿದರು.
ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಅವರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳಿ ಈಗ ಮುಷ್ಕರ ಮಾಡುತ್ತಿರುವವರ ವಿರುದ್ಧ ಎಸ್ಮಾ ಜಾರಿ ಮಾಡಲು ಹೊರಟಿರುವುದು ಸರಿಯಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಈ ನಿರ್ಧಾರ ತೆಗೆದುಕೊಂಡಾಗ ಇದೇ ಸಿದ್ದರಾಮಯ್ಯ ಅವರು ಏನು ಮಾತನಾಡಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ಕುಟುಕಿದರು.ಟಿಪ್ಪು ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮೈಸೂರು ಸಾಮ್ರಾಜ್ಯವನ್ನು ದೇವರಾಜ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದ್ದರು. ಈಗಿನ ಸರ್ಕಾರವಾಗಿದ್ದರೆ ಟಿಪ್ಪು ಸಾಮ್ರಾಜ್ಯ ಎಂದು ಹೆಸರಿಡುತ್ತಿದ್ದರು ಎಂದು ವ್ಯಂಗ್ಯವಾಡಿದ ಅವರು ಒಬ್ಬ ನರಹಂತಕ ಟಿಪ್ಪುವನ್ನು ವೈಭವೀಕರಿಸುತ್ತಿರುವುದನ್ನು ನೋಡಿದರೆ ಇವರು ಇನ್ನೆಷ್ಟು ದಿನ ಓಲೈಕೆ ರಾಜಕಾರಣ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ರಾಹುಲ್ ಗಾಂಧಿ ಅವರು ಸೇರಿದಂತೆ ಕಾಂಗ್ರೆಸ್ ನಾಯಕರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇವರು ತಮ್ಮ ಮಾತುಗಳನ್ನು ತಿದ್ದಿಕೊಳ್ಳಬೇಕು. ಇವಿಎಂ ಬಗ್ಗೆ ಕಾಂಗ್ರೆಸ್ ನವರು ಮಾತನಾಡುತ್ತಾರೆ. ಕರ್ನಾಟಕದ ಫಲಿತಾಂಶದ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಚುನಾವಣಾ ಆಯೋಗಕ್ಕೂ ಇವರಿಗೆ ಗೌರವವಿಲ್ಲ. ಕಾಂಗ್ರೆಸ್ ನ ಭೌತಿಕತೆಯೇ ದಿವಾಳಿಯಾಗಿದೆ ಎಂದು ಟೀಕಿಸಿದರು.ಪ್ರತಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಗದೀಶ್, ಮಾಲತೇಶ್, ಕೆ.ವಿ.ಅಣ್ಣಪ್ಪ , ಕೆ.ಜಿ.ಕುಮಾರಸ್ವಾಮಿ, ವಿನ್ಸೆಂಟ್ ರೋಡ್ರಿಗಸ್ ಇದ್ದರು.ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಒಂದು ರೀತಿಯಲ್ಲಿ ಸರ್ಕಾರಿ ಪ್ರಾಯೋಜಿತವಾಗಿದೆ. ಈ ರೀತಿಯ ಮುಷ್ಕರ ಮಾಡಿ ಸಮಸ್ಯೆಯನ್ನು ದೊಡ್ಡದು ಮಾಡಿ ಹಣ ಕೊಡಲಾಗದೇ ಶಕ್ತಿ ಯೋಜನೆಯನ್ನೇ ನಿಲ್ಲಿಸುವ ಹುನ್ನಾರವಿದು ಎನಿಸುತ್ತದೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ನೌಕರರ ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕು.
- ಎಸ್.ಎನ್. ಚನ್ನಬಸಪ್ಪ, ಶಾಸಕಸಚಿವ ಲಾಡ್ ರಾಜಕಾರಣ
ಭಾಷಣ ಮಾಡಿದ್ದು ಸರಿಯಲ್ಲಸಂತೋಷ್ ಲಾಡ್ ಶಿವಮೊಗ್ಗಕ್ಕೆ ಬಂದಿದ್ದು ಕಾರ್ಮಿಕ ಭವನ ಉದ್ಘಾಟನೆ ಮಾಡಲು. ಆದರೆ ಮಾತನಾಡಿದ್ದು ರಾಜಕಾರಣ. ಇದೊಂದು ಸರ್ಕಾರಿ ಕಾರ್ಯಕ್ರಮ. ಈ ಸರ್ಕಾರಿ ಕಾರ್ಯಕ್ರಮದಲ್ಲಿ ಸಾವಿರಾರು ಜನ ಸೇರಿರುತ್ತಾರೆ. ಇಂತಹ ಕಾರ್ಯಕ್ರಮದಲ್ಲಿ ಸಂತೋಷ್ ಲಾಡ್ ರಾಜಕಾರಣ ಭಾಷಣ ಮಾಡಿದ್ದು ಸರಿಯಲ್ಲ. ಇದು ನಮಗೆ ಅತ್ಯಂತ ಬೇಸರವನ್ನುಂಟು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.