ವಿದ್ಯೆ ಹಾಳಾದರೆ ಇಡೀ ಜೀವನವೇ ನಷ್ಟ

KannadaprabhaNewsNetwork |  
Published : Aug 06, 2025, 01:15 AM IST
ಪೊಟೋ: 05ಎಸ್‌ಎಂಜಿಕೆಪಿ07ಶಿವಮೊಗ್ಗ ನಗರದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಪತ್ರಿಕೆಯು ಹೊರತಂದ ವಿದ್ಯಾರ್ಥಿ ಸಂಚಿಕೆಯನ್ನು ಮಂಗಳವಾರ ವಿಧಾನ ಪರಿಷ್‌ ಸದಸ್ಯ ಡಾ.ಧನಂಜಯ್‌ ಸರ್ಜಿ ಬಿಡುಗಡೆಗೊಳಿಸಿದರು.  | Kannada Prabha

ಸಾರಾಂಶ

ಊಟ ಹಾಳಾದರೆ ಒಂದು ದಿನದ ನಷ್ಟ, ಬೆಳೆ ಹಾಳಾದರೆ ಒಂದು ವರ್ಷದ ನಷ್ಟ, ವಿದ್ಯೆ ಹಾಳಾದರೆ ಇಡೀ ಜೀವನವೇ ನಷ್ಟ ಎಂದು ವಿಧಾನ ಪರಿಷತ್‌ ಸದಸ್ಯ ಡಾ.ಧನಂಜಯ್‌ ಸರ್ಜಿ ಹೇಳಿದರು.

ಶಿವಮೊಗ್ಗ: ಊಟ ಹಾಳಾದರೆ ಒಂದು ದಿನದ ನಷ್ಟ, ಬೆಳೆ ಹಾಳಾದರೆ ಒಂದು ವರ್ಷದ ನಷ್ಟ, ವಿದ್ಯೆ ಹಾಳಾದರೆ ಇಡೀ ಜೀವನವೇ ನಷ್ಟ ಎಂದು ವಿಧಾನ ಪರಿಷತ್‌ ಸದಸ್ಯ ಡಾ.ಧನಂಜಯ್‌ ಸರ್ಜಿ ಹೇಳಿದರು.

ಇಲ್ಲಿನ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಪತ್ರಿಕೆಯು ಹೊರತಂದ ವಿದ್ಯಾರ್ಥಿ ಸಂಚಿಕೆಯನ್ನು ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅನ್ನದಾನಕ್ಕಿಂತ ವಿದ್ಯಾದಾನ ಶ್ರೇಷ್ಠ ದಾನವಾಗಿದ್ದು, ವಿದ್ಯಾರ್ಥಿಗಳು ಚೀಲದಲ್ಲಿ ತುಂಬಿರುವ ಭತ್ತದಂತಾಗದೇ ಭತ್ತದ ಗದ್ದೆಗಳಾಗಿ ಬೆಳೆಯಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ಪುಸ್ತಕದಿಂದ ಮಸ್ತಕ ದತ್ತ ಸಾಗಬೇಕು. ಪ್ರತಿ ಕ್ಷಣವೂ ಸ್ಪರ್ಧಾತ್ಮಕವಾಗಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನ ಪಡೆದುಕೊಳ್ಳುವುದು ಮುಖ್ಯ. ಜ್ಞಾನವೆಂದರೆ ಕೇವಲ ಪುಸ್ತಕದಿಂದ ಮಾತ್ರ ಪಡೆಯುವುದಲ್ಲ. ಪುಸ್ತಕದ ಜೊತೆಗೆ ಸಮಾಜದಲ್ಲಿನ ಆಗು, ಹೋಗುಗಳ ಬಗ್ಗೆ ತಿಳಿದುಕೊಳ್ಳುವುದು ಅತಿ ಮುಖ್ಯ. ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಬೇಕಾದರೆ ಇಂದೇ ದೊಡ್ಡ ಗುರಿಯ ಕನಸು ಕಾಣಬೇಕು. ಆ ಕನಸು ನಮ್ಮ ನಿದ್ದೆಗೆಡಿಸುವಂತಿರಬೇಕು. ನಿರಂತರ ಪ್ರಯತ್ನವಿದ್ದಾಗ ಯಶಸ್ಸಿನ ಹಾದಿ ಸುಲಭವಾಗುತ್ತದೆ ಎಂದು ತಿಳಿಸಿದರು.

ವಿದ್ಯೆಯಿಂದ ವಿನಯ, ವಿನಯದಿಂದ ಕೆಲಸ, ಕೆಲಸದಿಂದ ಹಣ ಸಂಪಾದನೆ ಮಾಡಬಹುದು. ಆ ಹಣ ಧರ್ಮಧಾರಿತವಾಗಿದ್ದ ನೆಮ್ಮದಿ ಜೀವನ ನಮ್ಮದಾಗುತ್ತದೆ. ವಿದ್ಯಾರ್ಥಿಗಳು ಓದಿನ ಶೈಲಿಯನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡು ಸರಿಯಾದ ಓದಿನ ಮಾರ್ಗವನ್ನು ಅನುಸರಿಸಿದರೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸುಲಭವಾಗುತ್ತದೆ. ಮುಖ್ಯವಾಗಿ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು. ಆ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುತ್ತಾ ಸಾಗಿದರೆ ಯಶಸ್ಸು ನಮ್ಮದಾಗುತ್ತದೆ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಯಶಸ್ಸುಗಳಿಸಬೇಕಾದರೆ ಕೇವಲ ಪುಸ್ತಕದಲ್ಲಿ ವಿಷಯವನ್ನು ಮಾತ್ರ ಓದುಕೊಂಡರೆ ಸಾಲದು. ಓದಿನ ಜೊತೆಗೆ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಓದಿಯೂ ಕಲಿಯಬೇಕು, ಬರೆದು ಕಲಿಯಬೇಕು, ಕೇಳಿಯೂ ಕಲಿಯಬೇಕು. ಓದು ವಕ್ಕಾಲು, ಬುದ್ಧಿ ಮುಕ್ಕಾಲು ಎಂಬಂತೆ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಯಾವುದೇ ದೇಶವನ್ನು ನಾಶ ಮಾಡಬೇಕಾದರೆ ಯುದ್ಧವೇ ಮಾಡಬೇಕು ಎಂದೇನಿಲ್ಲ. ಆ ದೇಶದ ಶಿಕ್ಷಣ ಹಾಗೂ ಸಂಸ್ಕೃತಿಯನ್ನು ಹಾಳು ಮಾಡಿದರೆ ಸಾಕು ಆ ದೇಶ ನಾಶವಾಗುತ್ತದೆ ಎಂಬ ಮಾತಿದೆ. ಅಂದರೆ ಶಿಕ್ಷಣಕ್ಕೆ ಅಂತಹ ಶಕ್ತಿ ಇದೆ ಎಂದರ್ಥ ಎಂದರು.

ಕನ್ನಡಪ್ರಭ ವಿಶೇಷ ವರದಿಗಾರ ಗೋಪಾಲ್ ಯಡಗೆರೆ ಮಾತನಾಡಿ, ನಮ್ಮ ಸುತ್ತಮುತ್ತಲಿನಲ್ಲೇ ಅನೇಕ ಸಾಧಕರು ಇದ್ದಾರೆ. ಅವರೊಂದಿಗೆ ಸ್ನೇಹ ಸಾಧ್ಯವಾಗದಿದ್ದರೂ ಅವರ ಸಂಪರ್ಕದಲ್ಲಿದ್ದರೆ ತಮಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳಬಹುದು. ವಿದ್ಯಾರ್ಥಿಗಳಲ್ಲಿ ಓದಿನ ಉತ್ಸಾಹದ ಜೊತೆಗೆ ಜ್ಞಾನ ಸಂಪಾದನೆಯ ಹಂಬಲವೂ ಇರಬೇಕು. ನಾವು ಪಡೆದ ಶಿಕ್ಷಣದಿಂದ ಉದ್ಯೋಗ ಪಡೆದುಕೊಂಡು ಒಂದು ಕುಟುಂಬ ನಿರ್ವಹಣೆಗಷ್ಟೇ ಸೀಮಿತವಾಗಬಾರದು. ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಸಮಾಜದ ಆಸ್ತಿಗಳಾಗಿ ಬೆಳೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮೋಹನ್‌, ನಮಿತಾ ಧನಂಜಯ್ ಸರ್ಜಿ, ಈಶ್ವರ ಸರ್ಜಿ, ಮುರಳೀಧರ್‌ ಕುಲಕರ್ಣಿ, ಕನ್ನಡಪ್ರಭ ಜಾಹಿರಾತು ವಿಭಾಗದ ಸಿ.ಕಾರ್ತಿಕ್‌, ಪ್ರಸರಣ ವಿಭಾಗದ ಎಸ್‌.ಕೆ.ಸಂಚಿತ್‌ ಮತ್ತಿತತರರು ಇದ್ದರು.

ಶಾಲೆಯ ಒಂದು ತರಗತಿಯಲ್ಲಿ ಕುಳಿತು ಪಡೆಯುವುದಕ್ಕಿಂತ ಪತ್ರಿಕೆಗಳು, ಗ್ರಂಥಾಲಗಳು ಜ್ಞಾನ ವೃದ್ಧಿಗೆ ಸಹಕಾರಿಯಾಗಿವೆ. ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಆಲೋಚನೆ, ಕಲಿಯುವಿಕೆಯ ಉತ್ಸಾಹ, ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಲು ಸಹಕಾರಿ. ಈ ನಿಟ್ಟಿನಲ್ಲಿ ಕನ್ನಡಪ್ರಭ ಪತ್ರಿಕೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳೆವಣಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ವಿದ್ಯಾರ್ಥಿ ಸಂಚಿಕೆಯನ್ನು ಹೊರ ತಂದಿರುವುದು ನಿಜಕ್ಕೂ ಶ್ಲಾಘನೀಯ.

- ಡಾ.ಧನಂಜಯ್‌ ಸರ್ಜಿ, ವಿಧಾನ ಪರಿಷತ್‌ ಸದಸ್ಯ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ