ಕನ್ನಡಪ್ರಭ ವಾರ್ತೆ, ತುರುವೇಕೆರೆ
ತಾಲೂಕಿನಾದ್ಯಂತ ಸೋಮವಾರ ರಾತ್ರಿ 309 ಮಿಮೀ ಮಳೆಯಾಗಿದೆ. ಈ ಮಳೆಯ ಆರ್ಭಟಕ್ಕೆ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ನೆಂದು ತೊಪ್ಪೆಯಾಗಿದೆ. ಸರಾಗವಾಗಿ ನೀರು ಹರಿಯಲು ವ್ಯವಸ್ಥೆ ಮಾಡದ ಸ್ಥಳೀಯ ಆಡಳಿತದ ವಿರುದ್ಧ ಜನರು ಕಿಡಿಕಾರಿ ಹಿಡಿಶಾಪ ಹಾಕಿದ್ದು ಒಂದೇ ದಿನ ವರುಣನ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.ಪಟ್ಟಣದ ಮುತ್ತುರಾಯನ ನಗರದ ಪ್ರಿಯಾ ಕಾನ್ವೆಂಟ್ ಬಳಿಯ ಹತ್ತಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ. ಮನೆಯಲ್ಲಿದ್ದ ಎಲ್ಲಾ ವಸ್ತುಗಳು ನೀರು ಪಾಲಾಗಿವೆ. ಮನೆಯ ಸಂಪ್ ಗೆ ಚರಂಡಿ ನೀರು ಸೇರಿದಂತೆ ಕಲುಷಿತ ನೀರು ಸೇರಿದೆ. ಇದೇ ವೇಳೆ ವಿಷಜಂತುಗಳೂ ಸಹ ಮನೆಯೊಳಗೆ ಹರಿದಾಡಿದ ಘಟನೆಯೂ ನಡೆದಿದೆ. ಮುತ್ತುರಾಯನ ನಗರದಲ್ಲಿ ಸರಾಗವಾಗಿ ನೀರು ಹೋಗದೆ ಅವಘಢ ಸಂಭವಿಸಿದೆ. ದಾರಿಯನ್ನು ಮುಚ್ಚಿರುವ ಕಾರಣ ಚರಂಡಿ ನಿರ್ಮಾಣ ಮಾಡಲಾಗಿಲ್ಲ. ಇದರಿಂದಾಗಿ ಮೇಲಿನಿಂದ ಬಂದ ನೀರೆಲ್ಲಾ ಮನೆಯೊಳಗೆ ಹರಿಯುತ್ತಿದೆ ಎಂದು ಅಲ್ಲಿನ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮುತ್ತುರಾಯನಗರದ ವಾಸಿಗಳು ರಾತ್ರಿ ಮಳೆಯಿಂದ ಅನುಭವಿಸಿದ ನರಕಯಾತನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ತಾಲೂಕು ದಂಡಾಧಿಕಾರಿ ಎನ್.ಎ.ಕುಂಇ ಅಹಮದ್ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಿಗೆ ಸ್ಥಳಕ್ಕೆ ತೆರಳಿ ಅತಿಕ್ರಮಿಸಿಕೊಂಡಿರುವ ರಸ್ತೆಯನ್ನು ತೆರವುಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆ. ಪಟ್ಟಣದ ಮುತ್ತುರಾಯನಗರದ ನಿವಾಸಿಗಳು ತಮಗೆ ಮೂಲಭೂತ ಸೌಲಭ್ಯಗಳನ್ನು ನೀಡಲು ಪಟ್ಟಣ ಪಂಚಾಯಿತಿ ವಿಫಲವಾಗಿದೆ ಎಂದು ಆರೋಪಿಸಿ ಆ .11 ರಂದು ಪಟ್ಟಣ ಪಂಚಾಯಿತಿ ಮುಂಭಾಗ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ತಾಲೂಕಿನ ಗಡಿಭಾಗವಾಗಿರುವ ಸೀಗೇಹಳ್ಳಿಯಲ್ಲೂ ಮಳೆಯ ಆರ್ಭಟಕ್ಕೆ ಜನರು ಹೈರಾಣಾಗಿದ್ದಾರೆ. ಸೀಗೇಹಳ್ಳಿಯ ಎಸ್ ಸಿ ಮತ್ತು ಎಸ್ ಟಿ ಸಮುದಾಯಕ್ಕೆ ಸೇರಿದ ಬುಡ್ಡಯ್ಯ, ಮುದ್ದಯ್ಯ ಎಂಬುವವರ ಮತ್ತು ಗ್ರಾಮದ ಒಳಗಿರುವ ಕೊಂಡಯ್ಯ, ಚಿಕ್ಕಮ್ಮ, ಮತ್ತು ಜಗದೀಶ್ ಎಂಬುವವರ ಮನೆಗೂ ನೀರು ನುಗ್ಗಿ ಮನೆಯಲ್ಲಿದ್ದ ದಿನಸಿ ಪದಾರ್ಥಗಳು ನೀರುಪಾಲಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎನ್.ಎ.ಕುಂಇ ಅಹಮದ್ ರವರು ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಓ ರವರನ್ನು ಸ್ಥಳಕ್ಕೆ ಕರೆಸಿಕೊಂಡು ಒತ್ತುವರಿ ಮಾಡಿರುವ ರಾಜಕಾಲುವೆಯನ್ನು ತೆರವುಗೊಳಿಸಲು ಸೂಚನೆ ನೀಡಿದರು. ಆತಂಕ – ಸೀಗೇಹಳ್ಳಿ ಗ್ರಾಮದ ಬಹುತೇಕ ಮನೆಗಳು ನೀರಿನಿಂದ ಆವೃತವಾಗಿದೆ. ನಿನ್ನೆ ರೀತಿ ಇಂದೂ ಮಳೆ ಬಂದಲ್ಲಿ ಮನೆಗಳನ್ನು ಉಳಿಸಿಕೊಳ್ಳುವುದು ಸಾಹಸವಾಗಲಿದೆ ಎಂದು ಗ್ರಾಮದ ಮುಖಂಡ ಆನಂದ್ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನೀರಿನಿಂದ ನಷ್ಠಕ್ಕೀಡಾಗಿರುವ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದೂ ಸಹ ಆನಂದ್ ಆಗ್ರಹಿಸಿದ್ದಾರೆ. ತುಂಬಿದ ಕೆರೆ – ತಾಲೂಕಿನ ಮಾಯಸಂದ್ರ ಹೋಬಳಿಯ ಇಟ್ಟಿಗೇಹಳ್ಳಿ, ಹರಳಕೆರೆ, ಯರದಹಳ್ಳಿ, ಗೈನಾಥಪುರ ಕೆರೆ ಕೋಡಿಯಾಗಿದೆ. ಇವತ್ತು ನಿನ್ನೆ ಬಂದ ರೀತಿಯೇ ಮಳೆ ಬಂದಲ್ಲಿ ಸೀಗೇಹಳ್ಳಿ ಮತ್ತು ಮಲ್ಲೂರಿನ ಕೆರೆಗಳು ಕೋಡಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಸೀಗೇಹಳ್ಳಿ ಗ್ರಾಮಸ್ಥರಾದ ಚಂದ್ರು ತಿಳಿಸಿದ್ದಾರೆ. ಮಳೆ ವಿವರ – ಸೋಮವಾರ ರಾತ್ರಿ ಆಗಿರುವ ಮಳೆಯ ವಿವರ – ದಬ್ಬೇಘಟ್ಟದಲ್ಲಿ 51 ಮಿಮೀ, ಸಂಪಿಗೆಯಲ್ಲಿ 17.6 ಮಿಮೀ, ದಂಡಿನಶಿವರದಲ್ಲಿ 60 ಮಿಮೀ, ತುರುವೇಕೆರೆಯಲ್ಲಿ 84.6 ಮಿಮೀ, ಮಾಯಸಂದ್ರದಲ್ಲಿ 95.8 ಮಿಮೀ ಮಳೆಯಾಗಿದೆ.