ಶಿವಮೊಗ್ಗ: ಬದುಕಿನ ಉನ್ನತಿಗಾಗಿ ವಿಭಿನ್ನ ವಿಷಯಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ ಎಂದು ಡಿವಿಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೊಳಲೆ ರುದ್ರಪ್ಪಗೌಡ ಹೇಳಿದರು.ನಗರ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಮಂಗಳವಾರ ಸ್ವಾತಂತ್ರ್ಯೋತ್ಸವದ ಸವಿ ನೆನಪಿನಲ್ಲಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ವಿಚಾರವಾಗಿ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡದ ಶ್ರೇಷ್ಠತೆಯನ್ನು ಎಷ್ಟು ಕೊಂಡಾಡಿದರು ಸಾಲದು. ಬುಕರ್ ಪ್ರಶಸ್ತಿಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯದ ಪ್ರಕಾರಗಳು ಮತ್ತಷ್ಟು ಪ್ರಜ್ವಲಿಸಿದೆ. ಹಿರಿಯರಿಗೆ ಗೌರವ ನೀಡಿ. ಸೌಜನ್ಯತೆ ಎಂಬುದು ಬದುಕಿನ ಪ್ರತಿ ಹಂತದಲ್ಲಿ ಪ್ರಜ್ವಲಿಸಲಿ. ಆಧುನಿಕತೆಯ ಅಂಧತ್ವ ನಿಮ್ಮನ್ನು ಕಾಡದಿರುವಂತೆ ನೋಡಿಕೊಳ್ಳಿ. ಸಂವಿಧಾನದ ಆಶಯಗಳಿಗೆ ಹೆಚ್ಚು ಶಕ್ತಿ ತುಂಬುವ ಕಾರ್ಯ ಯುವ ಸಮೂಹದಿಂದ ನಡೆಯಲಿ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ವಿಶ್ವದಲ್ಲಿಯೇ ಶ್ರೇಷ್ಠವಾದ ಸಂವಿಧಾನ ಭಾರತಕ್ಕಿದೆ. ಆಧುನಿಕ ಸೌಲಭ್ಯಗಳು ಇಲ್ಲದ ಕಾಲದಲ್ಲಿಯು ಸಂವಿಧಾನ ರಚನಾ ಸಮಿತಿಯು ಸಾರ್ವಜನಿಕ ಚರ್ಚೆಗೆ ಮುಕ್ತವಾಗಿ ಅವಕಾಶ ನೀಡಿ, ಸುಮಾರು 769 ಜನ ತಮ್ಮ ಅಭಿಪ್ರಾಯ ತಿಳಿಸಿದ್ದರು ಎಂಬುದೇ ಅದ್ಭುತ ಸಂಗತಿ. ಸ್ವತಂತ್ರ್ಯ ಚಳುವಳಿಗಳನ್ನು ನಾವು ಓದಿದ್ದೇವೆ, ಆದರೆ ಸ್ವತಃ ನೋಡಿದವರ ಅಭಿಲಾಷೆ ಅನುಭವದ ಮಾತುಗಳನ್ನು ಕೇಳಿದಾಗ ರೋಮಾಂಚನವಾಗುತ್ತದೆ ಎಂದರು.
ನಮಗೆ ಸಿಕ್ಕ ಶ್ರೇಷ್ಠವಾದ ಸಂವಿಧಾನವನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೆ. ಶೈಕ್ಷಣಿಕ ಸುಸಂಸ್ಕೃತರು ಈ ಪ್ರಜಾಪ್ರಭುತ್ವ ವ್ಯವಸ್ಥೆಗೆ ನೀಡುತ್ತಿರುವ ಕೊಡುಗೆ ಏನು ಎಂಬುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಪ್ರಜಾಪ್ರಭುತ್ವದ ಬಗ್ಗೆ ಯುವ ಸಮೂಹ ಹೆಚ್ಚು ಅರಿಯಬೇಕಿದೆ. ತಪ್ಪುಗಳನ್ನು ನೋಡಿಯು ಪ್ರತಿಭಟಸದೆ ಸುಮ್ಮನಾಗುವುದು ನಮಗೆ ಮಾಡಿಕೊಂಡ ಆತ್ಮವಂಚನೆ ಎಂದು ತಿಳಿಸಿದರು.ಪದವಿಯ ಹಂತದವರೆಗೆ ಕನ್ನಡ ಭಾಷೆಯನ್ನು ಕಲಿತ ಪದವೀಧರರು, ತಮ್ಮ ದೈನಂದಿನ ಬಳಕೆಯಲ್ಲಿ ಇಂಗ್ಲಿಷ್ ಭಾಷೆಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ಒಂದು ಬಗೆಯ ಆತ್ಮವಂಚನೆಯೇ ಸರಿ. ನಮ್ಮ ಹೃದಯದ ಭಾಷೆ ಕನ್ನಡಕ್ಕೆ ಆದ್ಯತೆ ನೀಡಿ. ಇತರೆ ಭಾಷೆಗಳನ್ನು ಮುಕ್ತವಾಗಿ ಕಲಿಯಿರಿ. ಸಾಮಾಜಿಕ ವ್ಯವಸ್ಥೆಗೆ ಆಧಾರ ಸ್ತಂಭವಾಗಿರಬೇಕಿದ್ದ ಯುವ ಸಮೂಹಕ್ಕೆ ಕಾನೂನಿನ ಅರಿವು ಬೇಕಿದೆ. ಸಮಾಜದ ಸದೃಢತೆಗೆ ಸಂವಿಧಾನ ನೀಡಿದ ಶಕ್ತಿ, ಜವಾಬ್ದಾರಿ, ಮಾನವೀಯ ಮೌಲ್ಯಗಳ ಬಗ್ಗೆ ಅರಿಯಿರಿ ಎಂದು ಕರೆ ನೀಡಿದರು.
ರಸಪ್ರಶ್ನೆ ಕಾರ್ಯಕ್ರಮದಿಂದ ಪ್ರೌಢಶಾಲಾ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಇಲಾಖೆ ನೀಡಿದ ಆದೇಶವೊಂದು ಇಂತಹ ಪರಿಸ್ಥಿತಿಗೆ ಕಾರಣವಾಗಿದೆ. ಸೃಜನಶೀಲತೆ ಬಿತ್ತುವ ಪ್ರೌಢಶಾಲಾ ಮತ್ತು ಪದವಿಪೂರ್ವ ಹಂತದಲ್ಲಿ, ಸ್ಪಂದನೀಯ ಕಾರ್ಯವನ್ನು ಚಿವುಟುವ ಕಾರ್ಯ ನಡೆಯುತ್ತಿರುವುದು ಬೇಸರದ ಸಂಗತಿ. ಓದಿಗೆ ಬಡತನ ಬಂದಿದೆ. ಅಂಕಗಳ ಬೇಟೆಯೊಂದೆ ನಮ್ಮ ಗುರಿಯಾಗಬಾರದು. ಅಧ್ಯಯನಗಳಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾ.ಎಚ್.ಟಿ.ಕೃಷ್ಣಮೂರ್ತಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷರಾದ ಎಂ.ನವೀನಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕೋಶಾಧ್ಯಕ್ಷ ಮಧುಸೂದನ್ ಐತಾಳ್, ಸರ್.ಎಂ.ವಿಶ್ವೇಶ್ವರಯ್ಯ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕ ಶೋಯಬ್ ಅಹಮದ್, ತೀರ್ಥಹಳ್ಳಿ ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಭದ್ರಾವತಿ ತಿಮ್ಮಪ್ಪ, ಶಿಕಾರಿಪುರ ಎಚ್.ಎಸ್.ರಘು, ಕೆ.ಎಸ್.ಹುಚ್ಚರಾಯಪ್ಪ, ಕೋಡ್ಲು ಯಜ್ಞಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಪದವಿ ಕಾಲೇಜುಗಳ 23 ತಂಡಗಳು ಭಾಗವಹಿಸಿದ್ದರು.