ಸರ್ಕಾರಿ ಶಾಲಾ ಮಕ್ಕಳಿಗೆ 2026-27ನೇ ಸಾಲಿನಲ್ಲಿ ನೀಡಬೇಕಾದ ಉಚಿತ ಶೂ, ಸಾಕ್ಸ್ ಖರೀದಿಗೆ ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್‌ಡಿಎಂಸಿ) ಹಣ ನೀಡುವ ಬದಲು ಟೆಂಡರ್ ಪ್ರಕ್ರಿಯೆ ಮೂಲಕ ಖರೀದಿಸಿ ನೀಡಲು ಸರ್ಕಾರ ತೀರ್ಮಾನಿಸಿದೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು
ಸರ್ಕಾರಿ ಶಾಲಾ ಮಕ್ಕಳಿಗೆ 2026-27ನೇ ಸಾಲಿನಲ್ಲಿ ನೀಡಬೇಕಾದ ಉಚಿತ ಶೂ, ಸಾಕ್ಸ್ ಖರೀದಿಗೆ ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್‌ಡಿಎಂಸಿ) ಹಣ ನೀಡುವ ಬದಲು ಟೆಂಡರ್ ಪ್ರಕ್ರಿಯೆ ಮೂಲಕ ಖರೀದಿಸಿ ನೀಡಲು ಸರ್ಕಾರ ತೀರ್ಮಾನಿಸಿದೆ.
ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿನ 1ರಿಂದ 10ನೇ ತರಗತಿವರೆಗಿನ 36.56 ಲಕ್ಷ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಖರೀದಿಗೆ 104 ಕೋಟಿ ರು. ಅನುದಾನ ವೆಚ್ಚಕ್ಕೆ ಶಿಕ್ಷಣ ಇಲಾಖೆ ಆಯುಕ್ತರಿಗೆ ಅನುಮತಿ ನೀಡಿದೆ. ಈ ಪೈಕಿ ಎಸ್‌ಡಿಎಂಸಿಯವರು ನಿರ್ಧರಿಸಿದರೆ ಅತಿ ಹೆಚ್ಚು ಮಳೆಯಾಗುವ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಶಿರಸಿ ಜಿಲ್ಲೆಗಳ ಶಾಲೆಗಳ ಮಕ್ಕಳಿಗೆ ಶೂ ಬದಲು ಚಪ್ಪಲಿ ಖರೀದಿಗೆ ಅವಕಾಶ ನೀಡಲಾಗುವುದು ಎಂದು ಇಲಾಖೆ ಹೇಳಿದೆ.
ಉಚಿತ ಶೂ, ಸಾಕ್ಸ್ ಯೋಜನೆ ಶುರುವಾದ ಆರಂಭಿಕ ವರ್ಷಗಳಲ್ಲಿ ಟೆಂಡರ್ ಮೂಲಕವೇ ಖರೀದಿಸುತ್ತಿದ್ದ ಶಾಲಾ ಶಿಕ್ಷಣ ಇಲಾಖೆಯು, ನಂತರ ಟೆಂಡರ್ ಪ್ರಕ್ರಿಯೆಯಲ್ಲಿ ವಿಳಂಬ, ಗುಣಮಟ್ಟದ ಕೊರತೆ ಹಾಗೂ ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 2017-18ರಿಂದ ಟೆಂಡರ್ ಪ್ರಕ್ರಿಯೆ ಕೈಬಿಟ್ಟು ನೇರವಾಗಿ ಆಯಾ ಶಾಲಾ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೂ, ಸಾಕ್ಸ್ ಖರೀದಿಗೆ ಬೇಕಾದ ಹಣವನ್ನು ಎಸ್‌ಡಿಎಂಸಿಗಳಿಗೆ ನೀಡುತ್ತಾ ಬರುತ್ತಿತ್ತು. ಇದೀಗ ಎಂಟು ವರ್ಷಗಳ ಬಳಿಕ ಮತ್ತೆ ಟೆಂಡರ್ ಪ್ರಕ್ರಿಯೆ ಮೊರೆ ಹೋಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಟೆಂಡರ್ ನಿರ್ಧಾರ ಏಕೆ?:
ಟೆಂಡರ್ ಕರೆಯುವ ನಿರ್ಧಾರ ಮಾಡಲು ಇಲಾಖೆ ನೀಡಿರುವ ಕಾರಣಗಳೆಂದರೆ,ಪ್ರತಿ ಶಾಲೆಗಳಿಗೂ ಪ್ರತ್ಯೇಕವಾಗಿ ಶೂ, ಸಾಕ್ಸ್‌ಗಳ ಪೂರೈಕೆಯನ್ನು ಪತ್ತೆ ಹಚ್ಚುವುದು ಕಷ್ಟವಾಗಿದ್ದು, ಪೂರೈಕೆಯ ಗುಣಮಟ್ಟದಲ್ಲಿ ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲಾಗುವುದಿಲ್ಲ. ನಿಗದಿತ ಸಮಯದಲ್ಲಿ ಶೂ ಮತ್ತು ಸಾಕ್ಸ್ ಪೂರೈಕೆಯನ್ನು ಖಚಿತಪಡಿಸುವುದು ಕಷ್ಟ. ಪಾವತಿ ವಿಳಂಬವಾದರೆ ಎಸ್‌ಡಿಎಂಸಿ ಮಟ್ಟದಲ್ಲಿ ಸಣ್ಣ ಕಂಪನಿಗಳು ಪೂರೈಕೆ ಮಾಡುವುದು ಕಷ್ಟವಾಗುತ್ತದೆ ಎಂದು ಹೇಳಿದೆ.
--ಬಾಕ್ಸ್---
ಎಂಟು ವರ್ಷಗಳ ಹಿಂದಿನ
ದರವೇ ಮುಂದುವರಿಕೆ!
ಶೂ, ಸಾಕ್ಸ್ ಖರೀದಿಗೆ ಎಂಟು ವರ್ಷಗಳಿಂದ ಇರುವ ದರವನ್ನೇ ಈ ಬಾರಿಯೂ ಮುಂದುವರೆಸಲಾಗಿದೆ. ತರಗತಿವಾರು 1ರಿಂದ 5ನೇ ತರಗತಿ ಮಕ್ಕಳಿಗೆ ತಲಾ 265 ರು., 6 ರಿಂದ 8ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ 295 ರು., 9 ರಿಂದ 10ನೇ ತರಗತಿ ಮಕ್ಕಳಿಗೆ ತಲಾ 325 ರು. ನಿಗದಿಪಡಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.