ಕನ್ನಡಪ್ರಭ ವಾರ್ತೆ ಬೆಂಗಳೂರು
ಕಬ್ಬು ಬೆಳೆಗೆ ಹೆಚ್ಚುವರಿಯಾಗಿ ಒಟ್ಟಾರೆ 100 ರು. ನಿಗದಿ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ರಾಜ್ಯ ಸರ್ಕಾರ ಶುಕ್ರವಾರ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ದರ ಹೆಚ್ಚಳ ಬಗ್ಗೆ ಇದ್ದ ಎಲ್ಲ ಗೊಂದಲಗಳಿಗೂ ತೆರೆ ಎಳೆದಿದೆ.ಶುಕ್ರವಾರ ಮುಖ್ಯಮಂತ್ರಿ ನೇತೃತ್ವದಲ್ಲಿ ಪ್ರತ್ಯೇಕವಾಗಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರ ಮತ್ತು ಕಬ್ಬು ಬೆಳೆಗಾರರ ಜತೆಗಿನ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ಸರ್ಕಾರದಿಂದ 50 ರು. ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರಿಂದ 50 ರು. ಹೆಚ್ಚುವರಿ ಹಣ ಪಾವತಿಗೆ ನಿರ್ಧರಿಸಲಾಗಿತ್ತು. ನಿರ್ಧಾರದ ಬೆನ್ನಲ್ಲೇ ಶನಿವಾರ ಪ್ರತಿ ಟನ್‌ಗೆ ಹೆಚ್ಚುವರಿ 100 ರು. ಪಾವತಿಗೆ ಆದೇಶಿಸಲಾಗಿದೆ.
ಆದೇಶದ ವಿವರ:ಶೇ. 9.5 ಅಥವಾ ಅದಕ್ಕಿಂತ ಕಡಿಮೆ ಇಳುವರಿ (ರಿಕವರಿ) ದರದ ಕಬ್ಬಿಗೆ ಪ್ರತಿ ಟನ್‌ಗೆ ಕಾರ್ಖಾನೆಗಳು ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರದ ಅನ್ವಯ ರೈತರಿಗೆ ನೀಡಲು ಒಪ್ಪಿರುವ ದರದ ಜತೆಗೆ ಹೆಚ್ಚುವರಿಯಾಗಿ 100 ರು. ನೀಡಲಾಗುತ್ತದೆ.
ಶೇ. 10.25ರ ರಿಕವರಿ ದರಕ್ಕೆ ಕಾರ್ಖಾನೆಗಳು ರೈತರಿಗೆ ಸಾಗಾಟ ಹಾಗೂ ಕಟಾವು ವೆಚ್ಚ ಹೊರತುಪಡಿಸಿ ಪ್ರತಿ ಟನ್ ಕಬ್ಬಿಗೆ 3,100 ರು. ನೀಡಲು ಒಪ್ಪಿವೆ. ಆ ಮೊತ್ತದ ಮೇಲೆ ಹೆಚ್ಚುವರಿಯಾಗಿ 100 ರು. ಸೇರಿಸಿ ಪ್ರತಿ ಟನ್‌ಗೆ 3,200 ರು. ನಿಗದಿ ಮಾಡಲಾಗಿದೆ. ಹಾಗೆಯೇ, ಶೇ. 11.25 ರಿಕವರಿ ದರಕ್ಕೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ಸಾಗಾಟ ಹಾಗೂ ಕಟಾವು ವೆಚ್ಚ ಹೊರತುಪಡಿಸಿ ಪ್ರತಿ ಟನ್ ಕಬ್ಬಿಗೆ 3,200 ರು. ನೀಡಲು ಒಪ್ಪಿದ್ದು, ಅದಕ್ಕೆ ಕಾರ್ಖಾನೆ ಮತ್ತು ಸರ್ಕಾರದ ಪಾಲು ಸೇರಿ ಹೆಚ್ಚುವರಿಯಾಗಿ 100 ಸೇರಿಸಿ ಪ್ರತಿ ಟನ್‌ಗೆ 3,300 ರು. ನಿಗದಿ ಮಾಡಿ ಆದೇಶಿಸಲಾಗಿದೆ.ಶೇ. 10.25-9.50ರ ನಡುವಿನ ಇಳುವರಿ ಪ್ರಮಾಣದ ನಡುವೆ ಪ್ರತಿ ಶೇ. 0.1 ಕಡಿಮೆ ಸಕ್ಕರೆ ಇಳುವರಿಗೆ ಅನುಪಾತಕ್ಕೆ ಅನುಗುಣವಾಗಿ 3.46 ರು. ಮೊತ್ತವನ್ನು ಪ್ರತಿ ಕ್ವಿಂಟಲ್‌ಗೆ ಪರಿಗಣಿಸಬೇಕು. ಶೇ. 11.25-10.25ರ ಸಕ್ಕರೆ ಇಳುವರಿ ಪ್ರಮಾಣದ ನಡುವೆ ಪ್ರತಿ ಶೇ. 0.1 ಕಡಿಮೆ ಸಕ್ಕರೆ ಇಳುವರಿ ಅನುಪಾತಕ್ಕೆ ಅನುಗುಣವಾಗಿ 1 ರು. ಮೊತ್ತವನ್ನು ಪ್ರತಿ ಕ್ವಿಂಟಲ್‌ಗೆ ಪರಿಗಣಿಸುವಂತೆ ನಿರ್ದೇಶಿಸಲಾಗಿದೆ.
ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಮೊದಲ ಕಂತಿನ ಮೊತ್ತವನ್ನು ಸಕ್ಕರೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನಿಗದಿಪಡಿಸಿರುವಂತೆ 14 ದಿನಗಳಲ್ಲಿ ಹಣವನ್ನು ಪಾವತಿಸುವಂತೆಯೂ ಸರ್ಕಾರ ಸೂಚಿಸಲಾಗಿದೆ.----
ಕೇಂದ್ರ ಸರ್ಕಾರ ನಿಗದಿಪಡಿಸಿರುವದರ ಒಪ್ಪದ ರೈತರು: ಸರ್ಕಾರ
ಕಬ್ಬಿಗೆ ಹೆಚ್ಚುವರಿ ದರ ನಿಗದಿಗೆ ಕಾರಣಗಳನ್ನೂ ಆದೇಶದಲ್ಲಿ ತಿಳಿಸಿರುವ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಕಬ್ಬಿಗೆ ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆಯನ್ನು ರೈತರು ಒಪ್ಪಲಿಲ್ಲ. ಅದರ ಜತೆಗೆ ಕಾರ್ಖಾನೆಗಳು ರೈತರೊಂದಿಗೆ ಸಹಕಾರ ಮನೋಭಾವದೊಂದಿಗೆ ವ್ಯವಹರಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ನಿಗದಿ ಮಾಡಿರುವ ಬೆಂಬಲ ಬೆಲೆಗಿಂತ ಹೆಚ್ಚಿನ ದರವನ್ನು ನಿಗದಿ ಮಾಡಲಾಗುತ್ತಿದೆ. ಕಬ್ಬು ಸರಬರಾಜು ಮಾಡಿದ ರೈತರಿಗೆ ಆರ್ಥಿಕ ನೆರವು ನೀಡಲು ಹೆಚ್ಚುವರಿ ದರ ನೀಡಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.