ಸರ್ಕಾರ, ಕಾಫಿ ಮಂಡಳಿ ಬೆಳೆಗಾರರ ನೆರವಿಗೆ ಬರಬೇಕು: ಶಾಸಕರ ಮನವಿ

KannadaprabhaNewsNetwork |  
Published : Jul 11, 2025, 01:47 AM IST
ಚಿತ್ರ : 7ಎಂಡಿಕೆ2 : ಕಾಫಿ ಮಂಡಳಿ ಅಧ್ಯಕ್ಷರನ್ನು ಭೇಟಿಯಾದ ಕೊಡಗು ನಿಯೋಗ. | Kannada Prabha

ಸಾರಾಂಶ

ಇನ್ನೂ ಮೂರು ತಿಂಗಳ ಕಾಲ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುವುದರಿಂದ ಕಾಫಿ ಕೃಷಿಗೆ ಕೊಳೆರೋಗ ಎದುರಾಗುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರಸ್ತುತ ವರ್ಷ ಕೊಡಗು ಜಿಲ್ಲೆಯಲ್ಲಿ ಸುರಿದ ಅತಿವೃಷ್ಟಿಯಿಂದ ಮುಂದಿನ ದಿನಗಳಲ್ಲಿ ಕಾಫಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿರುವುದರಿಂದ ಸರ್ಕಾರ ಹಾಗೂ ಕಾಫಿ ಮಂಡಳಿ ಬೆಳೆಗಾರರ ನೆರವಿಗೆ ಬರಬೇಕೆಂದು ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದ ಬೆಳೆಗಾರರ ನಿಯೋಗ ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜಿ.ದಿನೇಶ್ ಅವರಿಗೆ ಮನವಿ ಸಲ್ಲಿಸಿದೆ.

ಸೋಮವಾರಪೇಟೆಗೆ ಆಗಮಿಸಿದ ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜಿ.ದಿನೇಶ್ ಅವರನ್ನು ಭೇಟಿಯಾದ ಪ್ರಮುಖರು ಇತ್ತೀಚಿನ ದಿನಗಳಲ್ಲಿ ಕೊಡಗಿನ ಕಾಫಿ ಬೆಳೆಗಾರರು ಅನುಭವಿಸುತ್ತಿರುವ ಕಷ್ಟ ನಷ್ಟಗಳ ಕುರಿತು ವಿವರಿಸಿದರು.

ಅತಿ ಹೆಚ್ಚು ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಜನವರಿಯಿಂದ ಜೂನ್ ಅಂತ್ಯಕ್ಕೆ 70 ರಿಂದ 100 ಇಂಚಿನಷ್ಟು ಮಳೆಯಾಗಿದೆ. ಅತಿಯಾದ ಮಳೆಯಿಂದ ಸಕಾಲದಲ್ಲಿ ಕೃಷಿ ಚಟುವಟಿಕೆ ನಡೆಸಲು ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಇನ್ನೂ ಮೂರು ತಿಂಗಳ ಕಾಲ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುವುದರಿಂದ ಕಾಫಿ ಕೃಷಿಗೆ ಕೊಳೆರೋಗ ಎದುರಾಗುವ ಸಾಧ್ಯತೆ ಇದೆ.

ಇದರಿಂದ ಮುಂದಿನ ವರ್ಷ ನಿರೀಕ್ಷಿಸಿದಷ್ಟು ಕಾಫಿ ಫಸಲು ಕೈಸೇರುವುದು ಅಸಾಧ್ಯವಾಗಿದೆ. ಆದ್ದರಿಂದ ಸರ್ಕಾರ ಮತ್ತು ಕಾಫಿ ಮಂಡಳಿ ಕಾಫಿ ಕ್ಷೇತ್ರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಈಗಿನಿಂದಲೇ ಅಧ್ಯಯನ ನಡೆಸಿ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ನ ಪದಾಧಿಕಾರಿಗಳು ಹಾಗೂ ವಿವಿಧ ಭಾಗಗಳ ಬೆಳೆಗಾರರು ಮನವಿ ಮಾಡಿದರು.

ಕಾಫಿ ಬೆಳೆಗಾರರ ಸಂಕಷ್ಟದ ಕುರಿತು ಶಾಸಕ ಡಾ.ಮಂತರ್ ಗೌಡ ಅವರು ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜಿ.ದಿನೇಶ್ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾ ಬೆಳ್ಯಪ್ಪ, ಕಾರ್ಯದರ್ಶಿ ಸಿ.ಕೆ.ಬೆಳ್ಯಪ್ಪ, ಕಾರ್ಯಕಾರಿಣಿ ಸಮಿತಿ ಸದಸ್ಯ ವಿಶ್ವನಾಥ್ ಕೆ.ಕೆ., ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ, ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್, ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಬಿ.ಸತೀಶ್, ವಕೀಲ ಬಿ.ದೀಪಕ್, ಕಾಫಿ ಬೆಳೆಗಾರರಾದ ಎ.ಆರ್.ಮುತ್ತಣ್ಣ, ಕೆ.ಎಂ.ಲೋಕೇಶ್, ಎನ್.ಬಿ.ಗಣಪತಿ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು