ಕಂಡ ಕಂಡ ಗುರುವಿಗೆ ಪಾದ ಪೂಜೆ ಮಾಡಬೇಕಿಲ್ಲ

KannadaprabhaNewsNetwork |  
Published : Jul 11, 2025, 01:47 AM IST
ಪೋಟೋ, 10ಎಚ್‌ಎಸ್‌ಡಿ1: ಗುರು ಪೂರ್ಣಿಮಾ ಅಂಗವಾಗಿ ಸಾಣೇಹಳ್ಳಿಯ ಶ್ರೀ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಸವೇಶ್ವರರ ಹಾಗೂ ಶಿವಕುಮಾರ ಸ್ವಾಮೀಜಿಗಳ ಮೂರ್ತಿಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಪಂಡಿತಾರಾಧ್ಯ ಶ್ರೀಗಳು  ಚಾಲನೆ ನಿಡಿದರು. | Kannada Prabha

ಸಾರಾಂಶ

ಗುರು ಪೂರ್ಣಿಮಾ ಅಂಗವಾಗಿ ಸಾಣೇಹಳ್ಳಿಯ ಶ್ರೀ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಸವೇಶ್ವರರ ಹಾಗೂ ಶಿವಕುಮಾರ ಸ್ವಾಮೀಜಿಗಳ ಮೂರ್ತಿಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಪಂಡಿತಾರಾಧ್ಯ ಶ್ರೀಗಳು ಚಾಲನೆ ನಿಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಗುರು ಪೂರ್ಣಿಮೆ ಅಂದಾಕ್ಷಣ ಕಂಡ ಕಂಡ ಗುರುವಿಗೆ ಪಾದಪೂಜೆ ಮಾಡೋದಲ್ಲ ಜ್ಞಾನ ಕೊಟ್ಟಂತಹ ನಮ್ಮ ತಂದೆ ತಾಯಿಗಳಿಗೆ, ಶಿಕ್ಷಣ ನೀಡಿದ ಅಧ್ಯಾಪಕರಿಗೆ ಧಾರ್ಮಿಕ ದೀಕ್ಷೆ ಕೊಟ್ಟ ಗುರುಗಳನ್ನು ಗುರುವೆಂದು ಭಾವಿಸಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಶ್ರೀಮಠದ ಆವರಣದಲ್ಲಿ ಗುರುವಾರ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇತ್ತೀಚಿಗೆ ದೃಶ್ಯಮಾಧ್ಯಮಗಳನ್ನು ನೋಡಿದರೆ ದಾರಿ ತಪ್ಪಿಸುವಂಥ ಗುರುಗಳೇ ಹೆಚ್ಚಿದ್ದಾರೆ. ಜ್ಯೋತಿಷ್ಯ, ಹೋಮ, ಹವನ ವಾಸ್ತುಗಳ ಬಗ್ಗೆ ಹೇಳುವವರು ಗುರುಗಳಲ್ಲ. ಇವರು ಗುರುವಿನ ಹೆಸರನ್ನು ಹೇಳಿಕೊಂಡು ಸುಲಿಗೆ ಮಾಡುವಂಥ ಸುಲಿಗೆಕೋರರು ಎಂದರು.

ನಿಜವಾದ ಗುರು ಜನರಿಗೆ ಜ್ಞಾನದ ದೀವಿಗೆಯನ್ನು ಹಚ್ಚಿ ಬೆಳಕಿನ ಕಡೆ ಕರೆದುಕೊಂಡು ಹೋಗಿ ಅಜ್ಞಾನ ದೂರ ಮಾಡುವನು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮೆಲ್ಲರ ಬದುಕಿಗೆ ಹೊಸ ರೂಪವನ್ನು, ಮೆರಗನ್ನು ತಂದುಕೊಟ್ಟ ಬಸವಣ್ಣನವರನ್ನು ಆದ್ಯ ಗುರುವೆಂಬ ಭಾವಿಸಿಕೊಂಡಾಗ ಬದುಕು ಅರ್ಥಪೂರ್ಣವಾಗುವುದು. ಪ್ರಕೃತಿಯನ್ನು ಗುರುವೆಂದು ಭಾವಿಸಿಕೊಂಡಾಗ ನಾವು ಪ್ರಕೃತಿಯ ಸೌಂದರ್ಯವನ್ನು ಹಾಳು ಮಾಡದೇ ಎಚ್ಚರದಿಂದಿರಲು ಸಾಧ್ಯ ಎಂದರು.

ಗುರುಪೂರ್ಣಿಮಾ ದಿನ ಇವತ್ತು ಯಾರು ನಮಗೆ ಮಾರ್ಗದರ್ಶನ ಮಾಡುವರೋ ಅವರನ್ನು ಗುರುವೆಂದು ಭಾವಿಸಿ ಅವರ ಪಾದಪೂಜೆ ಮಾಡುವಂಥ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಬಹುಶಃ ಇಲ್ಲಿಯೂ ಅದೇ ಪ್ರಧಾನ ಆಗಿತ್ತು. ಅದು ಪ್ರಧಾನವಾಗದೇ ಮೊದಲು ನಮಗೆ ಜ್ಞಾನವನ್ನು ನೀಡಿದಂತಹ ಬಸವ ಗುರುವನ್ನು ಸ್ಮರಣೆ ಮಾಡಿಕೊಳ್ಳೋಣ. ಬಸವ ಗುರುವನ್ನು ಪರಿಚಯ ಮಾಡಿಕೊಟ್ಟ ಶಿವಕುಮಾರ ಸ್ವಾಮೀಜಿಯವರನ್ನು ನೆನಪಿಸಿಕೊಳ್ಳೋಣ. ಇದೇ ನಿಜವಾದ ಗುರುಪೂರ್ಣಿಮವಾಗುವುದು ಎಂದರು.

ಕಾವಿ ಹಾಕಿದಾಕ್ಷಣ, ನಾಲ್ಕು ಅಕ್ಷರ ಬೋಧಿಸಿದಾಕ್ಷಣ ಗುರುವಾಗಲಾರ. ಗುರು ಅರಿವಿನ ಆಗರಬಾಗಬೇಕು. ಅರಿವನ್ನು ಆಚರಣೆಯಲ್ಲಿ ತರಬೇಕು. ಅರಿವು-ಆಚಾರ ಒಂದಾದಾಗ ಮಾತ್ರ ಯೋಗ್ಯ ಗುರುವಾಗಲು ಸಾಧ್ಯ. ಅಂತಹ ಗುರುವನ್ನು ಸ್ವಾಗತಿಸಿ, ಗೌರವಿಸಿ, ಪೂಜಿಸುವಂಥದ್ದು ಅಪೇಕ್ಷಣೀಯ. ಗುರುವಿಗೆ ಗುಲಾಮನಾಗಬಾರದು. ಗುಲಾಮನಾದ ತಕ್ಷಣ ಮುಕ್ತಿ ದೊರೆಯುತ್ತೆ ಎನ್ನುವುದು ಸುಳ್ಳು. ಗುರುವಿಗೆ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳಬೇಕು. ಗುರುವನ್ನು ಪರೀಕ್ಷೆ ಮಾಡಬೇಕು. ಅವರ ಮಾತುಗಳಲ್ಲಿ ಸತ್ಯ ಇದ್ದರೆ ಸ್ವಾಗತ ಮಾಡಬೇಕು. ಇಲ್ಲದಿದ್ದರೆ ಪ್ರಶ್ನೆ ಮಾಡುವ ಗುಣವನ್ನು ಶಿಷ್ಯರು ಬೆಳೆಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಅಧ್ಯಾಪಕ ಅಣ್ಣಿಗೆರೆ ಕೆ.ವಿರೂಪಾಕ್ಷಪ್ಪ ಮಾತನಾಡಿ, ನಮ್ಮೆನ್ನೆಲ್ಲಾ ಜ್ಞಾನದೆಡೆಗೆ ಕೊಂಡೊಯ್ಯುವವರು ಗುರು. ಗುರು ಪೂರ್ಣಿಮೆ ಎನ್ನುವುದು ಇವತ್ತು ಒಂದು ದಿನಕ್ಕೆ ಸೀಮಿತವಾಗಬಾರದು. ನಿತ್ಯವೂ ಸ್ಮರಣೆ ಮಾಡಿಕೊಳ್ಳುವಂಥ ಕ್ಷಣಗಳಾಗಬೇಕು.

ಇಂದು ಮನುಷ್ಯ ಮನುಷ್ಯರ ನಡುವಿನ ಜಿಜ್ಞಾಸೆ, ಹೊಟ್ಟೆಕಿಚ್ಚು, ಮೋಸ, ವಂಚನೆ, ಅನ್ಯಾಯ, ಕ್ರೋಧ ಇವೆಲ್ಲ ತುಂಬಿ ತುಳುಕುತ್ತಿರುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಇದನ್ನು ಹೋಗಲಾಡಿಸಲು ಗುರುವಿನ ಮಾರ್ಗದರ್ಸನ ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಯೋಗಶಿಕ್ಷಕ ದೇವೇಂದ್ರಪ್ಪ ಮಾತನಾಡಿದರು. ಆರಂಭದಲ್ಲಿ ಶಿವಸಂಚಾರದ ಕಲಾವಿದ ನಾಗರಾಜ್ ಹಾಗೂ ತಬಲಸಾಥಿ ಶರಣ ವಚನ ಗೀತೆಗಳನ್ನು ಹಾಡಿದರು. ನಂತರ ಬಸವ ಗುರುವಿಗೆ ಹಾಗೂ ಶಿವಕುಮಾರ ಶ್ರೀಗಳಿಗೆ ಪುಷ್ಪನಮನವನ್ನು ಸಲ್ಲಿಸಿ ವಚನ ಪ್ರಾರ್ಥನೆಯ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.

ಅಧ್ಯಾಪಕಿ ಪಿ.ಎಲ್.ಸಂಧ್ಯಾ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಉಭಯ ಶಾಲೆಗಳ ಮುಖ್ಯ ಶಿಕ್ಷಕರು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.

PREV