ಬಾಡಿಗೆ ಕಟ್ಟಡದಲ್ಲಿ ಸರ್ಕಾರಿ ಕಾಲೇಜು, ಕಚೇರಿಗಳು!

KannadaprabhaNewsNetwork |  
Published : May 25, 2025, 01:35 AM IST
24ಎಚ್‌ಯುಬಿ36ಎನವಲಗುಂದ ಪಟ್ಟಣದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ದೇವರಾಜು ಅರಸು ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ. | Kannada Prabha

ಸಾರಾಂಶ

ನಗರ ನೀರು ನೈರ್ಮಲ್ಯ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಸಿಡಿಪಿಒ ಕಚೇರಿ, ಕಾರ್ಮಿಕ ಇಲಾಖೆ, ಐಟಿಐ ಕಾಲೇಜು, ಸಹಕಾರಿ ಸಂಘಗಳ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿದ್ದು.

ಫಕೃದ್ದೀನ್ ಎಂ ಎನ್ ನವಲಗುಂದ

ತಾಲೂಕಿನ ವಿವಿಧ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದರೆ, ವ್ಯವಸ್ಥಿತ ಸೌಲಭ್ಯಗಳಿಂದ ವಂಚಿತವಾಗಿದ್ದು, ಎಲ್ಲ ಸರ್ಕಾರಿ ಕಚೇರಿಗಳನ್ನು ಮಿನಿ ವಿಧಾನಸೌಧದಲ್ಲಿಯೇ ನಿರ್ಮಿಸಬೇಕು ಎಂಬುದು ಈ ಭಾಗದ ಜನರ ಬಹುದಿನಗಳ ಒತ್ತಾಯವಾಗಿದೆ.

ನಗರ ನೀರು ನೈರ್ಮಲ್ಯ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಸಿಡಿಪಿಒ ಕಚೇರಿ, ಕಾರ್ಮಿಕ ಇಲಾಖೆ, ಐಟಿಐ ಕಾಲೇಜು, ಸಹಕಾರಿ ಸಂಘಗಳ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿದ್ದು. ಸ್ವಂತ ಕಟ್ಟಡವಿಲ್ಲದಿರುವುದು ಶೋಚನೀಯ ಸ್ಥಿತಿ ಎನ್ನುತ್ತಾರೆ ಸಾರ್ವಜನಿಕರು.

ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಿ ಕೊಡುವ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು ಸೂರಿಲ್ಲದೆ ಬಾಡಿಗೆ ಕಟ್ಟಡದಲ್ಲಿದ್ದು, ಇದರಿಂದ ಪ್ರತಿವರ್ಷ ಕೋಟ್ಯಂತರ ಬಾಡಿಗೆ ಪಾವತಿ ಮಾಡಬೇಕಿದೆ. ಆದರೆ, ಸ್ವಂತ ಕಟ್ಟಡ ಹೊಂದುವುದು ಮರೀಚಿಕೆಯಾಗಿಯೇ ಉಳಿದಿದೆ.

ಐಟಿಐ ಕಾಲೇಜು ಒಂದಕ್ಕೆ ಹತ್ತಿ ಜಿನಿಂಗ್ ಫ್ಯಾಕ್ಟರಿಯನ್ನು ಪ್ರತಿ ತಿಂಗಳು ₹85 ಸಾವಿರ ನೀಡಿ ಬಾಡಿಗೆ ಪಡೆದು ಕಾರ್ಯನಿರ್ವಹಿಸುತ್ತಿದೆ. ಡಿ.ದೇವರಾಜು ಅರಸು ಮೇಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ಪ್ರತಿ ತಿಂಗಳು ₹90000 ಬಾಡಿಗೆ ನೀಡಲಾಗುತ್ತಿದೆ. ಹೀಗೆ ಹಲವು ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿದ್ದು, ಅವುಗಳು ಸ್ವಂತ ಕಟ್ಟಡ ಹೊಂದುವಂತೆ ಮಾಡಬೇಕು ಎಂಬುದು ಸ್ಥಳೀಯರ ಬೇಡಿಕೆ. ಬಾಡಿಗೆ ಕಟ್ಟಡಗಳಲ್ಲಿಯ ಕಚೇರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲದಂತಾಗಿದೆ. ಸ್ವಂತ ಕಟ್ಟಡವಿಲ್ಲದಿರುವುದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಸುಸಜ್ಜಿತ ಕಟ್ಟಡ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಬೇಕು ಮತ್ತು ಸರ್ಕಾರಿ ಕಚೇರಿಗಳಿಗೆ ಜಾಗ ಮೀಸಲಿಡಬೇಕು ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ.

ಪಟ್ಟಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಕಾರ್ಮಿಕ ಇಲಾಖೆ ಸೇರಿದಂತೆ ಹತ್ತಕ್ಕೂ ಹೆಚ್ಚು ಸರ್ಕಾರದ ವಿವಿಧ ಇಲಾಖೆಗಳು ಸ್ವಂತ ಸೂರಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.ಸ್ವಂತ ಕಟ್ಟಡ ಹೊಂದುವ ಪ್ರಯತ್ನ ಅಧಿಕಾರಿಗಳು ಮಾಡಬೇಕು. ಈ ನಿಟ್ಟಿನಲ್ಲಿ ಇಲಾಖೆ ವ್ಯಾಪ್ತಿಯಲ್ಲಿನ ಕಾರ್ಯ ಬಗ್ಗೆ ತಾಲೂಕಾಡಳಿತದ ಗಮನಕ್ಕೆ ತಂದು ಸರ್ಕಾರಿ ಜಾಗ ಸದುಪಯೋಗಪಡಿಸಿಕೊಂಡು ಸ್ವಂತ ಕಟ್ಟಡ ಹೊಂದುವಂತಾಗಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ನಿಂಗಪ್ಪ ಬಾರಕೇರ ತಿಳಿಸಿದ್ದಾರೆ. 2007ರಿಂದ ಪ್ರತಿ ತಿಂಗಳು ₹85 ಸಾವಿರ ನೀಡಿ ಬಾಡಿಗೆ ಕಟ್ಟಡದಲ್ಲಿ ಕಾಲೇಜು ನಡೆಸುತ್ತಿದ್ದೇವೆ.ಸುಮಾರು 18 ವರ್ಷದಿಂದ ಬಾಡಿಗೆ ನೀಡುತ್ತಿರುವುದನ್ನು ಲೆಕ್ಕ ಹಾಕಿದರೆ ಬಾಡಿಗೆ ದುಡ್ಡಲ್ಲಿ ಸ್ವಂತ ಕಟ್ಟಡವಾಗುತ್ತಿತ್ತು. ಜಾಗವಿಲ್ಲದ ಕಾರಣ ಈ ಐಟಿಐ ಕಾಲೇಜು ಬೇರೆ ತಾಲೂಕಿಗೆ ಸ್ಥಳಾಂತರವಾಗುವ ಸಂಭವವೇ ಹೆಚ್ಚಿದೆ. ಈ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದೆ ಎಂದು ನವಲಗುಂದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಧರ್ಮಾ ಜೆ.ಲಮಾಣಿ ತಿಳಿಸಿದ್ದಾರೆ.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ