ನಾಡಧ್ವಜಕ್ಕೆ ಮಾನ್ಯತೆ ನೀಡಲು ಸರ್ಕಾರ ಬದ್ಧ: ಸಚಿವ ಬಿ.ಎಸ್. ಸುರೇಶ

KannadaprabhaNewsNetwork |  
Published : Nov 02, 2026, 02:15 AM IST
 ಸಿಕೆಬಿ-1 ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಬೈರತಿ ಸುರೇಶ್ ಮಾತನಾಡಿದರು                        ಸಿಕೆಬಿ-2 ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಒನಕೆ ಓಬವ್ವ ಗೀತೆಯ ಪ್ರದರ್ಶನ | Kannada Prabha

ಸಾರಾಂಶ

ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ ಎಂಟು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಕನ್ನಡದ ಮಣ್ಣಿನಲ್ಲಿ ಆಳ್ವಿಕೆ ನಡೆಸಿದ ರಾಜಮಹಾರಾಜರು ಸಾಂಸ್ಕೃತಿಕ ವೈಭವಕ್ಕೆ ಕೊಡುಗೆ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಸಾರಿಗೆ ಸಚಿವ ಬಿ.ಎಸ್. ಸುರೇಶ ಹೇಳಿಕೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕನ್ನಡ ಭಾಷೆ ನಮ್ಮ ನಡೆ-ನುಡಿ, ಆಚಾರ-ವಿಚಾರ, ಸಂಸ್ಕೃತಿ, ಅಭಿಮಾನ ಮತ್ತು ಅಸ್ಮಿತೆಯ ಪ್ರತೀಕವಾಗಿದೆ. ಕನ್ನಡಿಗರ ಹೃದಯದಲ್ಲಿ ಈಗಾಗಲೇ ಪ್ರತಿಷ್ಠಾಪನೆಗೊಂಡಿರುವ ಕನ್ನಡ ಭಾವುಟಕ್ಕೆ ನಾಡಧ್ವಜದ ಸ್ಥಾನಮಾನ ಒದಗಿಸಿ ಅಧಿಕೃತ ಮಾನ್ಯತೆ ಕೊಡಿಸುವುದು ಸರ್ಕಾರದ ನಿಲುವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಾರಿಗೆ ಸಚಿವ ಬಿ.ಎಸ್. ಸುರೇಶ ತಿಳಿಸಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ ಎಂಟು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಕನ್ನಡದ ಮಣ್ಣಿನಲ್ಲಿ ಆಳ್ವಿಕೆ ನಡೆಸಿದ ರಾಜಮಹಾರಾಜರು ಸಾಂಸ್ಕೃತಿಕ ವೈಭವಕ್ಕೆ ಕೊಡುಗೆ ನೀಡಿದ್ದಾರೆ. ದಾಸರು, ದಾರ್ಶನಿಕರು, ವಚನಕಾರರು, ಸಾಹಿತಿಗಳು ಮತ್ತು ವಿದ್ವಾಂಸರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.

ಕನ್ನಡದಲ್ಲಿ ಮಾತನಾಡುವುದು ಮತ್ತು ಬರೆಯುವುದು ಅತ್ಯಂತ ಸುಲಭ ಎಂದು ದ.ರಾ. ಬೇಂದ್ರೆಯವರು ಹೇಳಿದ್ದಾರೆ. ಕರ್ನಾಟಕದ ಮಣ್ಣು, ಹವಾಗುಣ ಹಾಗೂ ವೈವಿಧ್ಯಮಯ ಸಂಸ್ಕೃತಿ ದೇಶ ವಿದೇಶದ ಜನರನ್ನು ಆಕರ್ಷಿಸುತ್ತಿವೆ. ವಾಣಿಜ್ಯ, ಉದ್ಯಮ ಮತ್ತು ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕ ವಿಶ್ವದ ಗಮನ ಸೆಳೆಯುತ್ತಿದೆ ಎಂದರು.

ಸಾರಿಗೆ ಇಲಾಖೆಯ ವತಿಯಿಂದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದ್ದು, 845.33 ಕೋಟಿ ಉಚಿತ ಟಿಕೆಟ್ ಪಡೆದು ಮಹಿಳಾ ಪ್ರಯಾಣಿಕರು ಪ್ರಯೋಜನ ಪಡೆದಿದ್ದಾರೆ. ಈವರೆಗೆ 22,281.94 ಕೋಟಿ ರು. ಮೌಲ್ಯದ ಟಿಕೆಟ್‌ಗಳನ್ನು ವಿತರಿಸಲಾಗಿದೆ.ವಿದ್ಯಾರ್ಥಿಗಳಿಗೆ 10,07,756 ಉಚಿತ ಬಸ್ ಪಾಸ್‌ಗಳನ್ನು ನೀಡಲಾಗಿದೆ. ಮೆಟ್ರೋ ಮತ್ತು ಬಸ್‌ಗಳಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಸಮಗ್ರ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಪಿಎಂ ಇ-ಡ್ರೈವ್ ಯೋಜನೆಯಡಿ 4,500 ಎಲೆಕ್ಟ್ರಿಕ್ ಬಸ್‌ಗಳು ಹಾಗೂ ವಿಶ್ವಬ್ಯಾಂಕ್ ಸಹಯೋಗದಲ್ಲಿ 2,000 ಎಲೆಕ್ಟ್ರಿಕ್ ಬಸ್‌ಗಳನ್ನು ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಮಾಜಸೇವಕ ಶ್ರೀ ಕೃಷ್ಣಗೌಡ ಹಾಗೂ ಇಂಜಿನಿಯರಿಂಗ್ ಕ್ಷೇತ್ರದ ಡಾ. ಕೆ.ಎನ್. ವೆಂಕಟ ಕೃಷ್ಣರಾವ್ ಅವರನ್ನು ಅಭಿನಂದಿಸಲಾಯಿತು. ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ ವಿವಿಧ ಕ್ಷೇತ್ರಗಳ 71 ಸಾಧಕರಿಗೆ ಇದೆ ಮೊದಲ ಬಾರಿಗೆ ಸನ್ಮಾನ ಮಾಡಲಾಯಿತು.ಕಾರ್ಯಕ್ರಮದ ನಂತರ ಗ್ರಾಮಾನುಭವ ಕಾರ್ಯಕ್ರಮಕ್ಕೆ ಜಿಲ್ಲಾ ಹಂತದಲ್ಲಿ ಚಾಲನೆ ನೀಡಿದರು. ಗ್ರಾಮಾನುಭವ ಕಾರ್ಯಕ್ರಮವು ಗ್ರಾಮೀಣ ಜನರ ಜೀವನ, ಸಂಸ್ಕೃತಿ, ಕೃಷಿ ಪದ್ಧತಿ ಹಾಗೂ ಗ್ರಾಮೀಣ ಸಮಸ್ಯೆಗಳನ್ನು ನೇರವಾಗಿ ಅರಿಯಲು ರೂಪಿಸಲಾದ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಮೂಲಕ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮಗಳಿಗೆ ಭೇಟಿ ನೀಡಿ ಜನರೊಂದಿಗೆ ಸಂವಾದ ನಡೆಸುತ್ತಾರೆ ಎಂದು ಸಚಿವರು ತಿಳಿಸಿದರು.ಬ್ಯಾಡ್ಮಿಂಟನ್ ಅಂಕಣ ಉದ್ಘಾಟನೆ ಹಾಗೂ ಆಟ:

ಸರ್ ಎಂ ವಿ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ 40 ಲಕ್ಷ ರು.ನಲ್ಲಿ ಅಭಿವೃದ್ಧಿಪಡಿಸಿರುವ ಸಿಂಥೆಟಿಕ್ ಬ್ಯಾಡ್ಮಿಂಟನ್ ಅಂಕಣವನ್ನು ಸಚಿವರು ಉದ್ಘಾಟಿಸಿದರು. ನಂತರ ಜಿಲ್ಲಾಧಿಕಾರಿ ಜಿ.ಪ್ರಭು, ಜಿಪಂ ಸಿಇಒ ಡಾ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಅವರೊಂದಿಗೆ ಸಚಿವರು ಬ್ಯಾಡ್ಮಿಂಟನ್ ಆಟ ಆಡುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದರು.ಈ ವೇಳೆ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಂಡಳಿ ಅಧ್ಯಕ್ಷ ಬಿ.ಜಿ ಗಣೇಶ್, ಜಿಲ್ಲಾಧಿಕಾರಿ ಜಿ.ಪ್ರಭು, ಜಿಪಂ ಸಿಇಒ ಡಾ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ರಮೇಶ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಂದೀಪ್ ಚಕ್ರವರ್ತಿ, ಉಪವಿಭಾಗಾಧಿಕಾರಿ ಶೋಭಿತಾ ಮತ್ತಿತರರು ಇದ್ದರು.

ಸಿಕೆಬಿ-1 ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಬೈರತಿ ಸುರೇಶ್ ಮಾತನಾಡಿದರು

ಸಿಕೆಬಿ-2 ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಒನಕೆ ಓಬವ್ವ ಗೀತೆಯ ಪ್ರದರ್ಶನ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭದ್ರ ನೆಲೆ: ದಾವಣಗೆರೆಗೆ ಐಟಿ-ಬಿಟಿ ಉದ್ಯಮಕ್ಕೆ ಯತ್ನ
ಕನ್ನಡದಂತಹ ಭಾಷೆ, ಶಿಸ್ತು, ಆಡಳಿತ ವೈಖರಿ ಬೇರೆಲ್ಲೂ ಸಿಗದು: ವೆಂಕಟೇಶ್‌