ಕನ್ನಡಪ್ರಭ ವಾರ್ತೆ ಬೀದರ್ ಜಿಲ್ಲೆಯಲ್ಲಿ ಕೈಗಾರಿಕಾ ಸ್ಥಾಪನೆಗೆ ಕೈಗಾರಿಕಾ ಉದ್ಯಮಿಗಳಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಾಯ, ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಿದೆಯೆಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಬೆಂಗಳೂರು ಹಾಗೂ ಬೀದರ್ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಬೀದರ ಜಂಟಿಯಾಗಿ ಶನಿವಾರ ಆಯೋಜಿಸಿದ ವಿಶೇಷ ಕಾರ್ಯಕಾರಿ ಸಮಿತಿ ಸಭೆ ಹಾಗೂ ಬೀದರ್ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿ ಮತ್ತು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕರ್ನಾಟಕ ವಾಣಿಜ್ಯ ಸಂಸ್ಥೆಯಾಗಲಿ, ಮಧ್ಯಮ ಅಥವಾ ಸಣ್ಣ ಕೈಗಾರಿಕಾ ಸಂಸ್ಥೆಗಳು ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲಾಡಳಿತವನ್ನು ಸಂಪರ್ಕಿಸಿ ತಮ್ಮ ಅಗತ್ಯತೆಗಳ ಪ್ರಸ್ತಾವನೆಗಳನ್ನು ಸಲ್ಲಿಸಿದಲ್ಲಿ ಎಲ್ಲ ರೀತಿಯ ಮೂಲಭೂತ ಸೌಕರ್ಯ ಒದಗಿಸಲಾಗುವುದೆಂದರು.ಬೀದರ್ ಜಿಲ್ಲೆಗೆ ಅತ್ಯುತ್ತಮ ಸಂಪರ್ಕ ರಸ್ತೆಗಳಿವೆ, ಉತ್ತಮ ನೀರು, ಹವಾಮಾನ, ವಿದ್ಯುತ್ ಅಲ್ಲದೇ ವಿಮಾನಯಾನ ಸೌಕರ್ಯ ಇದೆ. ಬೆಂಗಳೂರಿನಷ್ಟೇ ಉತ್ತಮ ರಸ್ತೆಗಳಿವೆ. ಜಿಲ್ಲೆಯಲ್ಲಿ ವಿದ್ಯುತ್ ಕೊರತೆ ಇಲ್ಲ, ಜಿಲ್ಲೆಗೆ ಅಗತ್ಯ ಇರುವಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಹೆಚ್ಚಿನ ಸೌರ ವಿದ್ಯುತ್, 375 ಮೆಗಾವ್ಯಾಟ್ ಉತ್ಪಾದಿಸಲಾಗುತ್ತಿದೆ. 220 ಕೆ.ವಿ., ಎರಡು 400 ಕೆ.ವಿ. ಹಾಗೂ 700 ಕೆ.ವಿ. ಸ್ಟೇಶನ್‌ಗಳು ಸ್ಥಾಪನೆಯಾಗುತ್ತಿವೆ. ಒಟ್ಟು 5 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಎರಡು ವರ್ಷದಲ್ಲಿ ಉತ್ಪಾದಿಸಲಾಗುವುದು. ಒಟ್ಟಾರೆಯಾಗಿ ಕೈಗಾರಿಕೋದ್ಯಮಗಳಿಗೆ ಎಲ್ಲ ರೀತಿಯ ಸೌಲಭ್ಯ ನೀಡುವುದಾಗಿ ಸಚಿವರು ಭರವಸೆ ನೀಡಿದರು. ಬೆಂಗಳೂರು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ಮಾತನಾಡಿ, ಬೀದರ್ ಜಿಲ್ಲೆ ಕೃಷಿ ಪ್ರಧಾನವಾದ ಸಮೃದ್ಧ ಜಿಲ್ಲೆಯಲ್ಲದೆ ವಿವಿಧ ಬಗೆಯ ಕೈಗಾರಿಕೆಗಳನ್ನು ಆರಂಭಿಸಲು ಸೂಕ್ತವಾದ ಜಿಲ್ಲೆಯಾಗಿದೆ. ಬೀದರ್ ಜಿಲ್ಲೆಯು ಕೃಷಿ ಪ್ರಧಾನವಾಗಿರುವುದರಿಂದ ಹಾಗೂ ಮಾನವ ಶಕ್ತಿಯು ಸಹ ಹೇರಳವಾಗಿದ್ದು, ಕೃಷಿಗೆ ಪೂರಕವಾಗಿರುವಂತಹ ಕೈಗಾರಿಕೆಗಳನ್ನು ಆರಂಭಿಸುವುದರಿಂದ ಈ ಭಾಗದ ಜನರಿಗೆ ಉದ್ಯೋಗವಕಾಶಗಳು ಸಿಗುವಂತಾಗುತ್ತದೆ. ಜಿಲ್ಲೆಯ ಕೃಷಿಕರು ಬೆಳೆಯುವ ಪ್ರಮುಖ ಬೆಳೆಗಳಲ್ಲಿ ಕಬ್ಬು ತೊಗರಿ (ಇನ್ನಿತರ ದ್ವಿದಳ ಧಾನ್ಯಗಳು), ಸೋಯಾಬಿನ್, ಶುಂಠಿ, ಜಿಂಜಿರ, ಅರಿಷಿಣ ಮುಂತಾದ ಬೆಳೆಗಳನ್ನು ಉತ್ಪಾದಿಸುತ್ತಾರೆ. ತೋಟಗಾರಿಕೆ ಬೆಳೆಗಳಾದ ಹೂವು ವಿವಿಧ ಪ್ರಕಾರದ ಹಣ್ಣುಗಳಾದ ಮಾವು. ಬಾಳೆ, ದ್ರಾಕ್ಷಿ, ಮೊಸಂಬಿ, ಸೀತಾಫಲ, ನಿಂಬೆ ಹಣ್ಣು ಡ್ಯಾಗನ್ ಹಣ್ಣು, ಉತ್ತಮ ದರ್ಜೆಯ ಬಾರೆ ಹಣ್ಣು ಮತ್ತು ಸೇಬಿನಂತಹ ಇನ್ನಿತರ ಹಣ್ಣು ಗಳನ್ನು ಬೆಳೆಯಬಹುದು ಎಂದರು.ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ, ಎಫ್‌ಕೆಸಿಸಿಐನ ನಿರ್ದೇಶಕರು ಹಾಗೂ ಬಿಸಿಸಿಐನ ಗೌರವ ಕಾರ್ಯದರ್ಶಿ ಡಾ.ವೀರೇಂದ್ರ ಶಾಸ್ತ್ರಿ, ಹಿರಿಯ ಉಪಧ್ಯಾಕ್ಷರಾದ ಉಮಾರೆಡ್ಡಿ, ಟಿ.ಸಾಯಿರಾಂ ಪ್ರಸಾದ್, ಎಫ್‌ಕೆಸಿಸಿಐ ನ ಜಿಲ್ಲಾ ಸಮನ್ವಯ ಸಮಿತಿಯ ಅಧ್ಯಕ್ಷ ಅಂಡಾರು ದೇವಿ ಪ್ರಸಾದ್ ಶೆಟ್ಟಿ, ಡಾ. ರಜನೀಶ ವಾಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.