ನಂ.10 ಮುದ್ದಾಪುರ ಗ್ರಾಮದಲ್ಲಿ ಸಮಸ್ಯೆ । ಜನರಲ್ಲಿ ಆತಂಕಕನ್ನಡಪ್ರಭ ವಾರ್ತೆ ಕಂಪ್ಲಿ
ತಾಲೂಕಿನ ನಂ.10 ಮುದ್ದಾಪುರ ಗ್ರಾಮದಲ್ಲಿ ಮೊಣಕಾಲು ನೋವಿನಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಗ್ರಾಮದಲ್ಲಿ ಸುಮಾರು 200 ರಿಂದ 300ಕ್ಕೂ ಹೆಚ್ಚು ಜನರು ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಮೂವತ್ತು ವರ್ಷದ ವಯೋಮಾನದ ಸ್ತ್ರೀ-ಪುರುಷರಿಗೆ ವಿಪರೀತ ಮೊಣಕಾಲು ನೋವು ಕಾಡುತ್ತಿದೆ. ಮೊಣಕಾಲು ಊದಿಕೊಂಡು ಕುಳಿತವರು ಬೇಗನೆ ಏಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಇಡೀ ಗ್ರಾಮದ ಜನರಲ್ಲಿ ಆತಂಕ ಹೆಚ್ಚಾಗಿದ್ದು ಸುತ್ತ ಮುತ್ತ ಗ್ರಾಮಗಳಲ್ಲಿ ಕಾಣಿಸದ ಮೊಳಕಾಲು ನೋವಿನ ಸಮಸ್ಯೆ ಮುದ್ದಾಪುರದಲ್ಲಿಯೇ ಯಾಕೆ ಕಾಣಿಸುತ್ತಿದೆ? ಕುಡಿಯಲು ಬಳಸುತ್ತಿರುವ ನೀರಿನ ಗುಣಮಟ್ಟ ಸರಿ ಇದೆಯಾ ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ.
ಅಧಿಕಾರಿಗಳು ಈ ಕುರಿತು ಗಮನ ಹರಿಸಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಮೊಣಕಾಲು ನೋವಿನ ಪತ್ತೆಗೆ ಆರೋಗ್ಯ ಶಿಬಿರ ನಡೆಸಬೇಕು ಎಂದು ನೊವಿಗೆ ಒಳಗಾದ ಎಚ್.ಎಂ. ಶರಣಯ್ಯಸ್ವಾಮಿ ಆಗ್ರಹಿಸಿದರು.ಆರ್ ಒ ಪ್ಲ್ಯಾಂಟ್ ದುರಸ್ತಿಗೊಳಿಸಿ:
ಗ್ರಾಮದಲ್ಲಿ ಸದ್ಯ ಬೋರ್‌ವೆಲ್ ನೀರು ಪೂರೈಸಲಾಗುತ್ತಿದೆ. ಚೌಡೇಶ್ವರಿಗುಡಿ ಪಕ್ಕದ ಆರ್.ಓ ಪ್ಲ್ಯಾಂಟ್ ಹದೆಗೆಟ್ಟಿದ್ದು, ಇದರಿಂದ ಜನರು ನಿತ್ಯ ಬೋರ್ ವೆಲ್ ನೀರನ್ನೇ ಕುಡಿಯಲು ಬಳಸುತ್ತಿದ್ದಾರೆ. ಅತಿ ಹೆಚ್ಚು ಬೋರ್ ವೆಲ್ ನೀರು ಸೇವನೆಯಿಂದ ಮೊಣಕಾಲು ಬರುತ್ತಿರುವ ಸಾಧ್ಯತೆಗಳಿವೆ. ಈ ಕುರಿತು ಅಧಿಕಾರಿಗಳು ಎಚ್ಚೆತ್ತುಕೊಂಡು ಆರ್ ಒ ಪ್ಲ್ಯಾಂಟ್ ದುರಸ್ತಿಗೊಳಿಸಿ ಶುದ್ಧ ಕುಡಿವ ನೀರನ್ನು ಪೂರೈಸಬೇಕು. ಬುಕ್ಕಸಾಗರ ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ತುಂಗಭದ್ರಾ ನದಿಯಿಂದ ನೀರು ಪೂರೈಸಲು ಪೈಪು ಅಳವಡಿಕೆಯಾಗಿದೆ. ಕೂಡಲೇ ಸಂಬಂಧಿಸಿದವರು ಗಮನಹರಿಸಿ ಶುದ್ದೀಕರಿಸಿದ ನದಿ ನೀರನ್ನು ಸರಬರಾಜು ಮಾಡಬೇಕು. ತಕ್ಷಣ ಗ್ರಾಮದಲ್ಲಿ ವಿಶೇಷ ಆರೋಗ್ಯ ಶಿಬಿರ ಆಯೋಜಿಸಬೇಕು ಎಂದು ಗ್ರಾಮದ ಮುಖಂಡ ಕಟ್ಟೆ ವಿಜಯ ಮಹಾಂತೇಶ್ ಒತ್ತಾಯಿಸಿದ್ದಾರೆ.ನಂ.10 ಮುದ್ದಾಪುರ ಗ್ರಾಮದ ಜನತೆ ಮೊಣಕಾಲು ನೋವಿನಿಂದ ಬಳಲುತ್ತಿರುವುದು ಗಮನಕ್ಕೆ ಬಂದಿದೆ. ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಆರೋಗ್ಯ ಮೇಲ್ವಿಚಾರಕ ಡಾ. ಜಿ. ಅರುಣ್ ತಿಳಿಸಿದ್ದಾರೆ.