ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಸರಾಫ್ ಬಜಾರ್‌ನಲ್ಲಿರುವ ಮಾಲೀಕ್ ಚಿನ್ನದಂಗಡಿ ದರೋಡೆ ಪ್ರಕರಣ ಭೇದಿಸಿರುವ ಕಲಬುರಗಿ ಪೊಲೀಸರು ಮೂವರು ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ. ಆದರೆ ಈ ವೇಳೆ ಅವರಿಂದ ದೂರು ದಾಖಲಾಗಿದ್ದ ಹೆಚ್ಚಿನ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪಶ್ಚಿಮ ಬಂಗಾಳದ ಅಯೋಧ್ಯಾ ಪ್ರಸಾದ್ ಚವ್ಹಾಣ್ (48), ಅದೇ ರಾಜ್ಯ ದಡಪೂರ ಠಾಣಾ ವ್ಯಾಪ್ತಿಯ ಬಂಗಾರ ವ್ಯಾಪಾರಿ ಫಾರುಕ್ ಅಹಮದ್ ಮಲ್ಲಿಕ್ (40) ಹಾಗೂ ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಟೈಲರ್ ಆಗಿದ್ದ ಸೊಹೆಲ್ ಶೇಖ್ ಅಲಿಯಾಸ್ ಬಾದಶಾ (30) ಬಂಧಿತರು.
ಕಳೆದ ಜು.11ರಂದು ಹಾಡಹಗಲೇ ಗನ್ ಬಳಸಿ ಸರಾಫ್ ಬಝಾರ್ ಪ್ರದೇಶದಲ್ಲಿನ ಚಿನ್ನದಂಗಡಿಯಿಂದ ಅಂದಾಜು 3 ಕೋಟಿ ರು. ಮೌಲ್ಯದ ಬಂಗಾರದ ಆಭರಣಗಳನ್ನು ದರೋಡೆ ಮಾಡಿರುವ ಪ್ರಕರಣ ಗಮನ ಸೆಳೆದಿತ್ತು. ಬಂಧಿತ ದರೋಡೆಕೋರರಿಂದ 2.865 ಕೆ.ಜಿ ಬಂಗಾರ ಹಾಗೂ 4.80 ಲಕ್ಷ ರು. ಹಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಪ್ರಕರಣ ನಡೆದಾಗ 805 ಗ್ರಾಂ ಚಿನ್ನ ಕಳ್ಳತನ ಆಗಿದೆ ಎಂದು ಆಭರಣ ಮಳಿಗೆ ಮಾಲೀಕ ದೂರು ನೀಡಿದ್ದರು. ಆದರೆ ಪೊಲೀಸರು ಜಪ್ತಿ ಮಾಡಿದ್ದು 2800 ಗ್ರಾಂ ಚಿನ್ನ. ಇದರ ಮೌಲ್ಯ ಸುಮಾರು 3 ಕೋಟಿ ರು. ಎಂದು ಅಂದಾಜಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ದರೋಡೆಯ ಮಾಸ್ಟರ್ ಮೈಂಡ್ ಕೋಲ್ಕತಾ ಮೂಲದ ಫಾರೂಕ್. ಈತನೂ ಸಹ ಕಲಬುರಗಿಯಲ್ಲಿ ಚಿನ್ನದ ಮಳಿಗೆ ಹೊಂದಿದ್ದ, ಚಿನ್ನಾಭರಣದ ವ್ಯವಹಾರದಲ್ಲಿ ನಷ್ಟ ಉಂಟಾಗುತ್ತಿದ್ದಂತೆಯೇ 35 ರಿಂದ 40 ಲಕ್ಷ ರು. ಸಾಲ ಮಾಡಿಕೊಂಡಿದ್ದ.ಈ ಸಾಲದ ಸುಳಿಯಿಂದ ಹೊರಬರಲು ಫಾರೂಕ್ ಮುಂಬೈನಲ್ಲಿದ್ದ ತನ್ನ ಸ್ನೇಹಿತನೊಂದಿಗೆ ಸೇರಿ ಈ ಜ್ಯೂವೆಲ್ಲರಿ ಶಾಪ್ ದರೋಡೆಯ ಸಂಚು ರೂಪಿಸಿದ್ದಾನೆ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ಮುಂಬೈನ ಸ್ನೇಹಿತ ಅಯೋದ್ಯಾ ಪ್ರಸಾದ್ ತನ್ನ ಮೂವರು ಪರಿಚಿತರೊಂದಿಗೆ ಸೇರಿ ಈ ದರೋಡೆ ಮಾಡಿದ್ದಾನೆ. ದರೋಡೆ ನಂತರ ಇವರು ಚಿನ್ನದ ಸಮೇತ ಬಸ್ ಹತ್ತಿ ಮುಂಬೈಗೆ ಹೋಗಿದ್ದರು. ಅಲ್ಲಿಂದ ಪಶ್ಚಿಮ ಬಂಗಾಳ, ಹೈದ್ರಾಬಾದ್‌ನಲ್ಲಿ ಸುತ್ತಾಡಿದ್ದಾರೆ.ದರೋಡೆಕೋರರು ಮುಂಬೈ, ಅಲ್ಲಿಂದ ಲಖನೌ, ಅಲ್ಲಿಂದ ಕೋಲ್ಕತಾ, ಈ ರೀತಿ ಬೇರೆ ಬೇರೆ ಕಡೆ ಸುತ್ತಾಡುತ್ತಿದ್ದ ಕಾರಣ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದರು. ಕೊನೆಗೆ ಕೋಲ್ಕತಾದಲ್ಲಿ ಮೂವರನ್ನು ವಶಕ್ಕೆ ಪಡೆದು ಬಂಗಾರ ಜಪ್ತಿ ಮಾಡಲಾಗಿದೆ. ಸ್ವಲ್ಪ ಬಂಗಾರ ಕರಗಿಸಿ ಮಾರಾಟ ಮಾಡಿದ್ದು ಅದರಿಂದ ಬಂದ 4.80 ಲಕ್ಷ ರು. ಹಣವನ್ನೂ ವಶಕ್ಕೆ ಪಡೆಯಲಾಗಿದೆ ಎಂದರು.
ತನಿಖಾ ತಂಡ ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶಕ್ಕೆ ತೆರಳಿತ್ತು. ಈ ತಂಡ ಸೇರಿದಂತೆ ವಿವಿಧ 4 ತಂಡಗಳ ಶ್ರಮದಿಂದ ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದೆ ಎಂದರು.ಡಿಸಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್, ತನಿಖಾ ತಂಡಗಳ ನೇತೃತ್ವ ವಹಿಸಿದ್ದ ಪೊಲೀಸ್ ಅಧಿಕಾರಿಗಳು ಇದ್ದರು.
ಹೆಚ್ಚುವರಿ ಚಿನ್ನದ ಲೆಕ್ಕ ಮುಚ್ಚಿಡಲು ಯತ್ನಿಸಿದ್ದ ಮಾಲೀಕದರೋಡೆ ನಂತರ ಅಂಗಡಿ ಮಾಲೀಕ ಕೇವಲ 805 ಗ್ರಾಂ ಮಾತ್ರ ದರೋಡೆ ಆಗಿದ್ದು ಅಂತ ದೂರು ಕೊಟ್ಟಿದ್ದ, ಮತ್ತೊಂದು ಖಾತೆಯಲ್ಲಿದ್ದ ಚಿನ್ನದ ಬಗ್ಗೆ ಪೊಲೀಸರ ದಾರಿ ತಪ್ಪಿಸಲು ಅಂಗಡಿ ಮಾಲೀಕ ಸುಳ್ಳು ದೂರು ನೀಡಿದ್ದ, ಈ ಬಗ್ಗೆಯೂ ವಿಚಾರಣೆ ಸಾಗಿದೆ ಎಂದರು.