
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಅಭಿಮತಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅರ್ಹ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಪಿಂಚಣಿ ಒದಗಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಪಿಂಚಣಿ ಯೋಜನೆಗಳ ಅನುಷ್ಠಾನದಲ್ಲಿರುವ ತಾಂತ್ರಿಕ ಸಮಸ್ಯೆ ಶೀಘ್ರ ಪರಿಹರಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಹೇಳಿದರು.ನಗರದ ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಯೋವೃದ್ಧರು, ವಿಧವೆಯರು ಹಾಗೂ ವಿಶೇಷ ಚೇತನರು ಸೇರಿದಂತೆ ಅರ್ಹರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಪಿಂಚಣಿ ಯೋಜನೆಗಳ ಫಲಾನುಭವಿಗಳ ವಾರ್ಷಿಕ ಆದಾಯ ಮಿತಿ ₹32 ಸಾವಿರದಿಂದ ₹1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ ಇದರಿಂದ ಹೆಚ್ಚಿನ ಅರ್ಹರಿಗೆ ಅನುಕೂಲವಾಗಲಿದೆ ಎಂದರು.ಅರ್ಹ ಫಲಾನುಭವಿಗಳನ್ನು ಗುರುತಿಸಿ ಅನರ್ಹರನ್ನು ಹೊರಗಿಡುವ ಪ್ರಕ್ರಿಯೆ ನಡೆಯುತ್ತಿದ್ದು, ಪಿಂಚಣಿ ಪಾವತಿಗೆ ಸಂಬಂಧಿ ಸಿದ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೂ ಕ್ರಮ ಕೈಗೊಳ್ಳಲಾಗಿದೆ. ಗ್ರಾಪಂ ಮಟ್ಟದಲ್ಲಿ ಪಿಂಚಣಿ ದಾಖಲೆಗಳಿಗೆ ಇ-ಕೆವೈಸಿ ಲಿಂಕ್ ಮಾಡುವ ಕಾರ್ಯ ನಡೆಯುತ್ತಿದ್ದು, ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅರ್ಹ ಫಲಾನುಭವಿಗಳ ಖಾತೆಗೆ ಪಿಂಚಣಿ ಜಮೆಯಾಗಲಿದೆ ಎಂದು ತಿಳಿಸಿದರು.69,057 ಅರ್ಜಿಗಳ ಪರಿಶೀಲನೆ: ಜಿಲ್ಲೆಯಲ್ಲಿ ಒಟ್ಟು 69,057 ಪಿಂಚಣಿ ಅರ್ಜಿಗಳು ಪರಿಶೀಲನೆಗೆ ಒಳಪಟ್ಟಿದ್ದು, ಈ ಪೈಕಿ 26,229 ಅರ್ಜಿಗಳು ಪುರಸ್ಕೃತ ವಾಗಿವೆ. ಪುರಸ್ಕೃತ ಫಲಾನುಭವಿಗಳಿಗೆ ಮುಂದಿನ ತಿಂಗಳಿನಿಂದ ಪಿಂಚಣಿ ಹಣ ಜಮೆಯಾಗಲಿದೆ. ಇನ್ನೂ 40,626 ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು, ವಿವಿಧ ಕಾರಣಗಳಿಂದ 2,740 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು.ತಿರಸ್ಕೃತ ಅರ್ಜಿಗಳ ಪುನರ್ ಪರಿಶೀಲನೆಗೂ ಅವಕಾಶವಿದ್ದು, ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.ಪಿಂಚಣಿ ವಿಚಾರದಲ್ಲಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು ಪಿಂಚಣಿ ವಿಚಾರವನ್ನು ರಾಜಕೀಯ ಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು. ಮಾಜಿ ಶಾಸಕರು ಈ ಹಿಂದೆ ಈ ವಿಚಾರದಲ್ಲಿ ಗಮನಹರಿಸದೆ ಇದೀಗ ಪಿಂಚಣಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಸಿ. ಶಿವಾನಂದ ಸ್ವಾಮಿ, ರೂಬಿನ್ ಮೋಸಸ್, ಪ್ರವೀಣ್ ಬೆಟ್ಟಗೆರೆ, ಶಿವು ಹಿರೇಗೌಜ, ತನುಜ್ ನಾಯ್ಡು, ಬಸವರಾಜು ಹಾಗೂ ಸಂತೋಷ್ ಉಪಸ್ಥಿತರಿದ್ದರು.