ಶಿವಮೊಗ್ಗ: ಕಿವುಡರ ಕಷ್ಟಗಳು ಅರ್ಥವಾಗುತ್ತಿದೆ. ಇಲ್ಲಿ ನಾವೆಲ್ಲರೂ ಒಂದೇ. ಭೇದ-ಭಾವ ಬೇಡ, ಮಾನವೀಯತೆಯ ದೃಷ್ಟಿಯಿಂದ ಇವರ ತಲ್ಲಣಗಳನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.
ಇಂದಿನ ವಿಶ್ವ ಕಿವುಡರ ದಿನಾಚರಣೆಯ ಎಲ್ಲಾ ಖರ್ಚನ್ನು ನಾನೇ ಸ್ವತಃ ಭರಿಸುತ್ತೇನೆ. ಇದು ಅನುಕಂಪವಲ್ಲ, ನನ್ನ ಪ್ರೀತಿಯ ಸೇವೆಯಷ್ಟೇ. ನಾವೆಲ್ಲರೂ ಕರ್ತವ್ಯ ಎಂದುಕೊಂಡೇ ಇಂತಹ ಕೆಲಸಗಳನ್ನು ಮಾಡಬೇಕಾಗಿದೆ. ನಿಮ್ಮ ಪರವಾಗಿ ನಾನಿದ್ದೇನೆ. ನಿಮ್ಮ ಭಾಷೆ ನನಗೆ ಅರ್ಥವಾಗಿದೆ. ನಾವು ಇದನ್ನು ಹೃದಯದಿಂದ ಮತ್ತಷ್ಟು ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.ಸಂಘದ ಗೌರವಾಧ್ಯಕ್ಷ ಕೆ.ಎಸ್.ಶಂಕರ್ ಮಾತನಾಡಿ, ರಾಜ್ಯದಲ್ಲಿ 5 ಲಕ್ಷ ಮಕ್ಕಳು ಕಿವುಡರಿದ್ದಾರೆ. ಶೋಷಣೆಗೆ ಒಳಗಾಗಿದ್ದಾರೆ. ಎಷ್ಟೋ ಮಕ್ಕಳು ಶಾಲೆಯಲ್ಲಿ ಪಾಠ ಅರ್ಥವಾಗದೆ ಶಿಕ್ಷಣವನ್ನೇ ಮೊಟಕುಗೊಳಿಸುತ್ತಾರೆ. ಹಾಗಾಗಿ ನಮಗಿರುವ ಪಿಂಚಣಿಯನ್ನು 5 ಸಾವಿರಕ್ಕೆ ಹೆಚ್ಚಿಸಬೇಕು. ಉಚಿತ ಪ್ರಯಾಣದ ವ್ಯವಸ್ಥೆ ನೀಡಬೇಕು. ವಿವಾಹ ಪ್ರೋತ್ಸಾಹಧನ ನೀಡಬೇಕು. ಕಿವುಡರಿಗಾಗಿಯೇ ಇರುವ ಸನ್ನೆಭಾಷೆ ಶಾಲೆಗಳನ್ನು ಮತ್ತಷ್ಟು ತೆರೆಯಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಿಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಹನುಮಂತಪ್ಪ, ಉಮಾಶಂಕರ್, ದೇವರಾಜ್, ನವೀನ್‌ಕುಮಾರ್, ಸಂದೇಶ್, ಕಾಂಗ್ರೆಸ್ ಮುಖಂಡರಾದ ಜಿ.ಡಿ.ಮಂಜುನಾಥ್, ವೈ.ಎಚ್.ನಾಗರಾಜ್, ರಮೇಶ್ ಶಂಕರಘಟ್ಟ ಸೇರಿದಂತೆ ಹಲವರಿದ್ದರು.