ಶಿವಮೊಗ್ಗ: ಜಾಲತಾಣದಲ್ಲಿ ಜಿಲ್ಲೆಯ 61ಕ್ಕೂ ಹೆಚ್ಚಿನ ಪ್ರವಾಸಿ ತಾಣಗಳು, ಸ್ಥಳ ಐತಿಹ್ಯ, ವ್ಯಕ್ತಿಚಿತ್ರ, ವಿಶ್ವ ಪ್ರಸಿದ್ಧ ಜೋಗದ ಜಲಪಾತ, ನಗರಕೋಟೆ, ಕೊಡಚಾದ್ರಿ ತಪ್ಪಲು, ವನ್ಯ ಮೃಗಗಳು, ಸಸ್ಯ ಸಂಪತ್ತು ಸೇರಿದಂತೆ ವಿವಿಧ ಮಾಹಿತಿ ಒದಗಿಸಿರುವುದು ಜಗತ್ತಿನ ಹಲವು ಭಾಗಗಳಲ್ಲಿ ವಾಸಿಸುವವರನ್ನು ಆಕರ್ಷಸುವಂತೆ ಮಾಡಿರುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಜಿಲ್ಲೆಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ನೂತನವಾಗಿ ಆರಂಭಿಸಿರುವ ಜಾಲತಾಣದಲ್ಲಿ ಜಿಲ್ಲೆಯ ವಿಶೇಷವಾದ, ಅತ್ಯದ್ಭುತವಾದ ಛಾಯಾಚಿತ್ರಗಳು, ವಿಡಿಯೋ ತುಣುಕುಗಳು, ಮತ್ತಿತರ ಮಾಹಿತಿಯನ್ನು ಅಳವಡಿಸಿರುವುದು ಅತ್ಯಂತ ಪ್ರಶಂಸನಾರ್ಹ ಸಂಗತಿ ಎಂದು ಶ್ಲಾಘಿಸಿದರು.
ಜಿಲ್ಲೆಯಲ್ಲಿ ಹಲವು ವೈಶಿಷ್ಟಪೂರ್ಣ ವಿಶೇಷ ಹಾಗೂ ಆಕರ್ಷಕ ಸ್ಥಳಗಳಿವೆ. ಅವುಗಳನ್ನು ಜಗತ್ತಿಗೆ ಪರಿಚಯಿಸುವ ಅಗತ್ಯವೂ ಇದೆ. ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯಿಂದಾಗಿ ಪರೋಕ್ಷವಾಗಿ ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ. ಅಂತೆಯೇ ಜಿಲ್ಲೆಗೆ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಸುವ ನಿಟ್ಟಿನಲ್ಲಿ ಜೋಗದ ಜಲಪಾತದ ಅಭಿವೃದ್ಧಿ, ಚಂದ್ರಗುತ್ತಿ ಪ್ರಾಧಿಕಾರ ರಚಿಸಿ, ಅದರ ಅಭಿವೃದ್ಧಿಗೆ ವಿಶೇಷ ಗಮನಹರಿಸಲಾಗುವುದು ಎಂದರು.ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, 200 ಕೋಟಿ ರು. ಗಳ ವೆಚ್ಚದಲ್ಲಿ ಜಿಲ್ಲೆಯ ಪ್ರವಾಸಿ ತನಗಳನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಅದರಲ್ಲೂ ವಿಶೇವಾಗಿ ಜೋಗದಲ್ಲಿ ರೋಪ್ ವೇ, ಸಂಗೀತ ಕಾರಂಜಿ, ಜಿಪ್ ಲೈನ್, ಗ್ಲಾಸ್ ಹೌಸ್, ಸಾಹಸ ಕ್ರೀಡೆಗಳಿಗೆ ಉತ್ತೇಜನ ನೀಡುವಲ್ಲಿ ಗಮನ ಹರಿಸಲಾಗುತ್ತಿದೆ ಎಂದ ಅವರು, ಕೊಡಚಾದ್ರಿ ತಪ್ಪಲು ಪ್ರದೇಶಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವ ಅಗತ್ಯವಿದೆ ಎಂದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಆರ್ಥಿಕ ನೆರವು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ವಿಕಾಸಕ್ಕೆ ಕ್ರಮ ವಹಿಸಲಾಗಿದೆ. ನೂತನ ಜಾಲತಾಣ ವಿನ್ಯಾಸ ಮಾಡುವಲ್ಲಿ ಸ್ಥಳೀಯ ಪ್ರತಿಭಾವಂತರ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಅಲ್ಲದೆ ಆಯೋಜಿಸಲಾಗಿದ್ದ ಹಲವು ಸ್ಪರ್ಧೆಗಳಲ್ಲಿನ ಆಕರ್ಷಕ ಛಾಯಾ ಚಿತ್ರಗಳು, ರೀಲ್ಸ್, ವಿಡಿಯೋ ತುಣುಕುಗಳನ್ನು ಬಳಸಿಕೊಳ್ಳಲಾಗಿದೆ ಎಂದರು.
ಇದೇ ವೇಳೆ ಪ್ರವಾಸೋದ್ಯಮವನ್ನು ಉತ್ತೇಜಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಪುರಸ್ಕಾರ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಕ್ಕೂ ಮುನ್ನ ರಂಗಮಂದಿರದ ಆವರಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲೆಯ ಪ್ರವಾಸಿತಾಣಗಳ ಆಕರ್ಷಕ ಛಾಯಾಚಿತ್ರಗಳ ಪ್ರದರ್ಶನವನ್ನು ಸಚಿವರು ಉದ್ಘಾಟಿಸಿದರು. ಈ ಛಾಯಾಚಿತ್ರ ಪ್ರದರ್ಶನವು ಇಂದಿನಿಂದ 5 ದಿನಗಳ ಕಾಲ ನಡೆಯಲಿದೆ.
- ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ