- ತಾಲೂಕು ಕ.ಸಾ.ಪ ದಿಂದ ಎಸ್.ಎಲ್.ಬೈರಪ್ಪನವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ
ಸಾಹಿತಿ ಎಸ್.ಎಲ್.ಬೈರಪ್ಪನವರು ತಮ್ಮ ಕೃತಿಗಳಲ್ಲಿ ಈ ನೆಲದ ಸೊಗಡು, ಸಂಪ್ರದಾಯಗಳನ್ನು ಅಳವಡಿಸಿಕೊಂಡಿದ್ದರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಎಸ್.ಎಸ್.ಸಂತೋಷ ಕುಮಾರ್ ತಿಳಿಸಿದರು.
ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಅಗಲಿದ ಸಾಹಿತಿ ಎಸ್.ಎಲ್.ಬೈರಪ್ಪ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಎಸ್.ಎಲ್.ಬೈರಪ್ಪ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಮಾತನಾಡಿದರು. ಅವರ ಗ್ರಂಥಗಳನ್ನು ಅಧ್ಯಯನ ಮಾಡಬೇಕು. ಬೈರಪ್ಪನವರು ಜನ ಸಾಮಾನ್ಯರಂತೆ ಸಮಾಜದ ಎಲ್ಲರೊಂದಿಗೆ ಬೆರೆತು ಹಲವಾರು ಮೇರು ಕೃತಿಗಳನ್ನು ರಚಿಸಿದ್ದಾರೆ. ಅವರು ಸಾಹಿತ್ಯ ಕೃಷಿ ಜೊತೆಗೆ ಸಾಮಾಜಿಕ ಕಳಕಳಿಯಿಂದ ತಮ್ಮ ಹುಟ್ಟೂರಿಗೆ ನೀರು ತರಲು ಭಗೀರಥ ಪ್ರಯತ್ನ ಮಾಡಿ ಯಶಸ್ಸು ಕಂಡಿದ್ದರು. ಎಸ್.ಎಲ್.ಬೈರಪ್ಪ, ಯು.ಆರ್.ಅನಂತಮೂರ್ತಿ, ಕುವೆಂಪು, ಪಿ.ಲಂಕೇಶ್, ತೇಜಸ್ವಿ, ರವಿ ಬೆಳಗರೆ ಯಂತಹ ಲೇಖಕರು ಮುಂದೆ ಹುಟ್ಟಿ ಬರಬೇಕಾಗಿದೆ. ಅವರ ಗ್ರಂಥಗಳನ್ನು ಈಗಿನ ಯುವ ಜನರು ಓದಬೇಕು ಎಂದು ಕರೆ ನೀಡಿದರು.ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಎಸ್.ಎಲ್. ಬೈರಪ್ಪ ನಿಧನದಿಂದ ಸಾಹಿತ್ಯ ಲೋಕ ಬಡವಾಗಿದೆ. ಅವರ ಕೃತಿಗಳಲ್ಲಿ ಸಾಮಾಜಿಕ ಕಳಕಳಿ ಇದೆ. ಇತ್ತೀಚಿನ ವರ್ಷಗಳಲ್ಲಿ ಹೆಸರಾಂತ ಸಾಹಿತಿಗಳು ನಿಧನರಾಗಿದ್ದಾರೆ. ದೊಡ್ಡ, ದೊಡ್ಡ ಕವಿಗಳು ಬರೆದ ಗ್ರಂಥಗಳನ್ನು, ಕಾದಂಬರಿಗಳನ್ನು ಓದುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಾಗಿದೆ. ತಾಲೂಕು ಕಸಾಪದಿಂದ ನವೆಂಬರ್ ತಿಂಗಳಲ್ಲಿ ನರಸಿಂಹರಾಜಪುರದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಬಾಳೆಹೊನ್ನೂರಿನಲ್ಲಿ ಗ್ರಾಮ ಸಮ್ಮೇಳನ ನಡೆಸಲು ಚಿಂತನೆ ನಡೆಸಿದ್ದು ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಗಳು ಸಹಕಾರ ನೀಡಬೇಕು ಎಂದರು.
ಸಭೆಯಲ್ಲಿ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್,ಕಸಾಪ ಹೋಬಳಿ ಅಧ್ಯಕ್ಷ ಉದಯ ಗಿಲಿ, ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು,ಕಸಾಪ ಸದಸ್ಯರಾದ ಪಿ.ಸಿ.ಮ್ಯಾಥ್ಯೂ, ವಾಣಿ ನರೇಂದ್ರ, ವಸಂತಿ, ಜಯಂತಿ, ಶೈಲಾ, ಕೆ.ಎಸ್.ರಾಜಕುಮಾರ್, ನಂದೀಶ್, ನವೀನ್, ಹುಸೇನ್, ಸುನೀತಾ ಮತ್ತಿತರರು ಇದ್ದರು.