ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆ ಮಾಜಿ ಸದಸ್ಯ ಶಿವಕುಮಾರ್ ನೀಡಿರುವ ದೂರಿಗೆ ಸಂಬಂಧಿಸಿದಂತೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಿದ ಮೇಲೆ ೨೦೦೦ ಮೆಟ್ರಿಕ್ ಟನ್ ಮೊಲಾಸಸ್ ಬಿಡುಗಡೆಯಾಗುತ್ತಲೇ ಅದನ್ನು ಟೆಂಡರ್ ಮುಖಾಂತರ ವಿಲೇವಾರಿ ಮಾಡಿ ರೈತರು ಸರಬರಾಜು ಮಾಡಿದ ಕಬ್ಬಿನ ಬಿಲ್‌ನ ಪಾವತಿ ಹಾಗೂ ಕಾರ್ಖಾನೆಯ ಚಾಲನೆ ಮತ್ತು ನಿರ್ವಹಣೆ, ಖರ್ಚು-ವೆಚ್ಚಗಳಿಗೆ ಬಳಸಿಕೊಳ್ಳಬೇಕಿರುತ್ತದೆ ಎಂದು ಹೇಳಿದ್ದಾರೆ.
ಮೊಲಾಸಸ್ ಟ್ಯಾಂಕ್ ಭದ್ರತೆ, ದಾಸ್ತಾನು, ಅವುಗಳ ಮೇಲ್ವಿಚಾರಣೆ, ರಿಪೇರಿ, ಸುರಕ್ಷತೆ, ಅವುಗಳ ಜವಾಬ್ದಾರಿ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಕೆ.ಮಂಗಲ್‌ದಾಸ್, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ್ ಪಾಟೀಲ್, ಮುಖ್ಯ ರಸಾಯನ ಶಾಸ್ತ್ರಜ್ಞ ಪಾಪಣ್ಣ ಅವರ ನೇರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಕಾರ್ಖಾನೆಯಲ್ಲಿ ಅಗತ್ಯ ಉತ್ಪನ್ನಗಳಾದ ಸಕ್ಕರೆ ಮತ್ತು ಮೊಲಾಸಸ್‌ಗಳನ್ನು ಸಕಾಲದಲ್ಲಿ ಸಂರಕ್ಷಿಸಿ ವಿಲೇವಾರಿ ಮಾಡದೆ ಕಾರ್ಖಾನೆಗೆ, ರೈತರಿಗೆ, ಇಲಾಖೆ ಮತ್ತು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟುಮಾಡಿರುವುದು ದೃಢಪಟ್ಟಿರುತ್ತದೆ ಎಂದಿದ್ದಾರೆ.ಮೊಲಾಸಸ್ ಸೋರಿಕೆ ಪ್ರಕರಣದಲ್ಲಿ ಈ ಮೂವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಹಾಗೂ ನಷ್ಟವನ್ನು ಸಂಬಂಧಿಸಿದ ಅಧಿಕಾರಿಗಳಿಂದಲೇ ಭರಿಸುವಂತೆ ಕೋರಿ ಸರ್ಕಾರಕ್ಕೆ ಶಿಫಾರಸು ಮಾಡಲು ಅವಕಾಶವಿದ್ದು, ಮೂರು ದಿನಗಳೊಳಗೆ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ.
ಶಿವಕುಮಾರ್ ಅವರು ನೀಡಿರುವ ದೂರಿನಲ್ಲಿ ಸೆ.೧೭ ರಿಂದ ಸೆ.೨೦ರವರೆಗೆ ೫೪೯೦ ಟನ್ ಮೊಲಾಸಸ್ ಶೇಖರಣೆಗೊಂಡಿದೆ. ಸೆ.೧೯ರಂದು ಮೊಲಾಸಸ್ ಟ್ಯಾಂಕ್‌ನಲ್ಲಿ ಬಿರುಕುಬಿಟ್ಟು ಶೇಖರಣೆಯಾದ ಮೊಲಾಸಸ್‌ನಲ್ಲಿ ಸುಮಾರು ೧೫೦೦ ಟನ್ ಹಾಳಾಗಿದೆ. ಇದರಿಂದ ಕಾರ್ಖಾನೆಗೆ ೧.೫೦ ಕೋಟಿ ರು. ನಷ್ಟ ಉಂಟಾಗಿದೆ. ಈ ನಷ್ಟಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಅವರ ಅಧಿಕಾರಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಒತ್ತಾಯಿಸಿದ್ದರು.