ಅಕ್ಟೋಬರ್‌ 2ಕ್ಕೆ ಸಾರ್ವಜನಿಕ ವಿಜಯದಶಮಿ ಶೋಭಾಯಾತ್ರೆ: ವೀರೇಶ

KannadaprabhaNewsNetwork |  
Published : Sep 28, 2025, 02:00 AM IST
27ಕೆಡಿವಿಜಿ1-ದಾವಣಗೆರೆಯಲ್ಲಿ ಶನಿವಾರ ಸಾರ್ವಜನಿಕ ವಿಜಯ ದಶಮಿ ಮಹೋತ್ಸವ ಸಮಿತಿ ಮುಖಂಡ, ಮಾಜಿ ಮೇಯರ್ ಎಸ್.ಟಿ.ವೀರೇಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ವಿಶ್ವ ಹಿಂದು ಪರಿಷತ್‌ ಮತ್ತು ಸಾರ್ವಜನಿಕ ವಿಜಯ ದಶಮಿ ಮಹೋತ್ಸವ ಸಮಿತಿಯಿಂದ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಅಂಗವಾಗಿ ಅ.2ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಮುಖಂಡ, ಮಾಜಿ ಮೇಯರ್ ಎಸ್.ಟಿ.ವೀರೇಶ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಶ್ವ ಹಿಂದು ಪರಿಷತ್‌ ಮತ್ತು ಸಾರ್ವಜನಿಕ ವಿಜಯ ದಶಮಿ ಮಹೋತ್ಸವ ಸಮಿತಿಯಿಂದ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಅಂಗವಾಗಿ ಅ.2ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಮುಖಂಡ, ಮಾಜಿ ಮೇಯರ್ ಎಸ್.ಟಿ.ವೀರೇಶ ತಿಳಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ವಿಜಯದಶಮಿ ಮಹೋತ್ಸವದ ಕಾರ್ಯಕ್ರಮ ಸೆ.22ರಿಂದಲೇ ಆರಂಭವಾಗಿದ್ದು, ಶನಿವಾರ ಜಿಲ್ಲಾ ಕೇಂದ್ರದಲ್ಲಿ ಸಂಚಾರ ಪೊಲೀಸ್ ಠಾಣೆ ಅಧಿಕಾರಿಯ ಹೆದರಿಕೆ, ಬೆದರಿಕೆ ಮಧ್ಯೆಯೂ ಆಟೋ ಚಾಲಕರು ಶಿಸ್ತಿನಿಂದ ಆಟೋ ರ್ಯಾಲಿ ನಡೆಸುವ ಮೂಲಕ ಪೊಲೀಸ್ ಅಧಿಕಾರಿಗೆ ಹಿಂದುಗಳ ಬದ್ಧತೆ ಪ್ರದರ್ಶಿಸಿದ್ದಾರೆ ಎಂದರು.

ಸೆ.28ರಂದು ಬೆಳಿಗ್ಗೆ 10.30ಕ್ಕೆ ಸಮಿತಿಯಿಂದ ಇಲ್ಲಿನ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಿಂದ ಮಹಿಳಾ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿದ್ದು, ಸಮಸ್ತ ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಬೇಕು. ಸೆ.30ರಂದು ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಿಂದ ಯುವಕರ ಬೈಕ್ ರ್‍ಯಾಲಿ ಏರ್ಪಡಿಸಲಾಗಿದೆ. ಸಮಸ್ತ ವಿದ್ಯಾರ್ಥಿ, ಯುವ ಜನರು, ಹಿರಿಯರು ಭಾಗವಹಿಸಲು ಕರೆ ನೀಡಿದರು.

ಅ.1ರಂದು ಬೆಳಿಗ್ಗೆ 10ಕ್ಕೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಿಂದ ಸಮಿತಿ ನೇತೃತ್ವದಲ್ಲಿ ದುರ್ಗಾ ದೌಡ್‌ ಕಾರ್ಯಕ್ರಮವಿದೆ. ಅ.2ರಂದು ಬೆಳಿಗ್ಗೆ 11.30ಕ್ಕೆ 44ನೇ ವರ್ಷದ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಅಂಗವಾಗಿ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ವಿವಿಧ ಮಠಾಧೀಶರ ನೇತೃತ್ವದಲ್ಲಿ ಶೋಭಾಯಾತ್ರೆಯು ಇಲ್ಲಿನ ಶ್ರೀ ವೆಂಕಟೇಶ್ವರ ವೃತ್ತದಿಂದ ಆರಂಭವಾಗಿ ನಗರದ ವಿವಿಧ ಮಾರ್ಗದಲ್ಲಿ ಸಾಗಲಿದೆ ಎಂದು ಅವರು ತಿಳಿಸಿದರು.

ಶೋಭಾಯಾತ್ರೆಯಲ್ಲಿ ವೀರಗಾಸೆ, ಡೊಳ್ಳು, ನಾಸಿಕ್ ಡೋಲು, ನಂದಿಕೋಲು, ವೀರಗಾಸೆ, ಕೊಂಬು ಕಹಳೆ, ಕೀಲು ಕುದುರೆ, ವೇಷದಾರಿಗಳು ಸೇರಿದಂತೆ ನೂರಾರು ಕಲಾ ತಂಡಗಳು, ಜನಪದ ಕಲಾ ತಂಡಗಳು, ಸಾಂಪ್ರಾದಾಯಿಕ ವಾದ್ಯ ತಂಡಗಳು ಭಾಗವಹಿಸಲಿವೆ. ದೇಶ, ಹಿಂದುತ್ವಕ್ಕಾಗಿ ಹೋರಾಡಿದ ಮಹನೀಯರು, ವೀರ ನಾರಿಯರು, ಸ್ವಾತಂತ್ರ್ಯ ಹೋರಾಟಗಾರರು ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ. ಮಹಾರಾಷ್ಟ್ರದ 60-70 ಮಹಿಳೆಯರ ತಂಡ ಡೋಲ್ ತಾಶಾ ಸಹ ಭಾಗವಹಿಸಲಿದೆ. ನಂತರ ಹಳೆ ಪಿಬಿ ರಸ್ತೆ ಮಾರ್ಗವಾಗಿ ಶ್ರೀ ಬೀರಲಿಂಗೇಶ್ವರ ಮೈದಾನದಲ್ಲಿ ಶೋಭಾಯಾತ್ರೆ ತಲುಪಲಿದೆ ಎಂದು ಹೇಳಿದರು.

ನಂತರ ಸಂಜೆ 5ಕ್ಕೆ ಶ್ರೀ ಜಡೇಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಸಮಿತಿ ಅಧ್ಯಕ್ಷ ಎಂ.ಆನಂದ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಂಬುಛೇದನ ನೆರವೇರಿಸುವರು. ಕಣ್ವಕುಪ್ಪೆ ಶ್ರೀಗಳು ಆಶೀರ್ವಚನ ನೀಡುವರು. ಕುಡುಚಿ ಶಾಸಕ ಪಿ.ರಾಜೀವ್ ಉಪನ್ಯಾಸ ನೀಡುವರು. ಸಚಿವರು, ಸಂಸದರು, ಶಾಸಕರು, ಎಸ್ಪಿ ಸೇರಿದಂತೆ ಎಲ್ಲರಿಗೂ ಆಹ್ವಾನ ನೀಡಿದ್ದೇವೆ ಎಂದು ತಿಳಿಸಿದರು.

ಸಮಿತಿ ಅಧ್ಯಕ್ಷ ಎಂ.ಆನಂದ, ಸಂಚಾಲಕ ಆರ್.ಎಲ್.ಶಿವಪ್ರಕಾಶ, ಪುನೀತ, ಪಿ.ಸಿ.ಶ್ರೀನಿವಾಸ ಭಟ್, ಚೇತನಾ ಶಿವಕುಮಾರ, ದಾಕ್ಷಾಯಣಮ್ಮ, ಧನುಷ್ ರೆಡ್ಡಿ, ಮಿಥುನ್, ವಕೀಲ ಕಲ್ಲಪ್ಪ, ಎಚ್.ಪಿ.ವಿಶ್ವಾಸ ಇತರರು ಇದ್ದರು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ