ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಅನ್ನಪೂರ್ಣೇಶ್ವರಿ ಬಡಾವಣೆಯ ಪಕ್ಕ ನೂತನವಾಗಿ ನಿರ್ಮಿಸಿರುವ ಮಾಂಡವ್ಯ ನಗರ ಬಡಾವಣೆ ಉದ್ಘಾಟನೆ, ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಪತ್ರ ವಿತರಣಾ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು.
ನಗರ ವ್ಯಾಪ್ತಿಯಲ್ಲಿ ಸುಂದರ, ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಬಡಾವಣೆಗಳ ಕೊರತೆ ಕಾಡುತ್ತಿದೆ. ಆ ನಿಟ್ಟಿನಲ್ಲಿ ಮಾಂಡವ್ಯ ನಗರ ಬಡಾವಣೆ ಎಲ್ಲರಿಗೂ ಮಾದರಿಯಾಗಿದೆ. ಅತ್ಯುತ್ತಮ ರೀತಿಯಲ್ಲಿ ನಿರ್ಮಾಣಗೊಂಡು ಹೊಸದಾಗಿ ಬಡಾವಣೆ ನಿರ್ಮಿಸುವವರಿಗೆ ಸ್ಫೂರ್ತಿದಾಯಕವಾಗಿದೆ ಎಂದರು.ಮಂಡ್ಯ ಜಿಲ್ಲೆಯ ಜನರು ಮೈಸೂರನ್ನು ಬೆಳೆಸುತ್ತಿದ್ದಾರೆ. ಸ್ಥಳೀಯ ಜನರು ತಮ್ಮ ಹುಟ್ಟೂರಿನ ಅಭಿವೃದ್ಧಿಯನ್ನೇ ಮರೆತಿದ್ದಾರೆ. ಮೊದಲು ಮಂಡ್ಯವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸುವ ಅಗತ್ಯವಿದೆ. ಹೊಸ ಕಾರ್ಖಾನೆಗಳು, ಕೈಗಾರಿಕೆಗಳು ಸೃಷ್ಟಿಯಾಗಬೇಕು. ಇಲ್ಲೇ ಉದ್ಯೋಗಗಳು ಸೃಷ್ಟಿಯಾಗಬೇಕು. ಇಲ್ಲಿನ ಜನರ ಹಣಕಾಸು ಇಲ್ಲಿನ ಜನರಿಗೇ ಸಿಗುವಂತಾಗಬೇಕು. ಮಕ್ಕಳು ಇಲ್ಲೇ ಶಿಕ್ಷಣ ಪಡೆಯುವ ಮಾದರಿಯಲ್ಲಿ ಶಿಕ್ಷಣ ಸಂಸ್ಥೆಗಳು ಉದಯಿಸಬೇಕು ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಕಾವೇರಿ ಜಲವಿವಾದದ ಅಡ್ವೋಕೇಟ್ ಜನರಲ್, ಸಹಾಯಕ ಅಡ್ವೋಕೇಟ್ ಜನರಲ್ ಎಲ್ಲರೂ ಹೊರಗಿನವರೇ. ಇಲ್ಲಿನವರಿಗೆ ಸಮಸ್ಯೆಯ ಅರಿವಿಲ್ಲವೇ. ಇಲ್ಲಿನ ಜನರಿಗಿಂತ ಹೊರಗಿನವರು ಬಹಳ ತಜ್ಞರೇ. ನಮಗೆ ಎಲ್ಲಾ ಬುದ್ಧಿಶಕ್ತಿ, ಸಾಮರ್ಥ್ಯ, ಸಮಸ್ಯೆಯ ಆಳ-ಅಗಲ ಗೊತ್ತಿದ್ದರೂ ಇಲ್ಲಿನವರಿಗೆ ಅವಕಾಶವೇ ಸಿಗಲಿಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಜಿಲ್ಲೆಯ ಜನರು ಶಕ್ತಿಶಾಲಿಗಳಾಗಿದ್ದರೂ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನೂ ದೊರಕಿಸಲಾಗಲಿಲ್ಲ. ರಾಜಕಾರಣಿಗಳು ಎಲ್ಲರೂ ನಾವು ರೈತರ ಮಕ್ಕಳು ಅಂತಾರೆ. ಆದರೆ, ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದರೆ ಸಮಾಜ ಉಳಿಯುವುದು ಹೇಗೆ ಎಂದು ಪ್ರಶ್ನಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು ಮಾತನಾಡಿ, ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರ ಅಭಿವೃದ್ಧಿಯತ್ತ ಸಾಗಬೇಕು. ಕಿರಿದಾದ ರಸ್ತೆಗಳಿಂದ ನಗರದ ಬಡಾವಣೆಗಳ ಸೌಂದರ್ಯ ಹಾಳಾಗಿದೆ. ನಿರ್ದಿಷ್ಟ ರೂಪು-ರೇಷೆಯಿಲ್ಲದೆ ತಲೆಎತ್ತುತ್ತಿವೆ. ಜನರು ಅಭಿವೃದ್ಧಿ ದೃಷ್ಟಿಯಿಂದ ಸಹಕರಿಸಬೇಕು. ಅವೈಜ್ಞಾನಿಕ ಬಡಾವಣೆಗಳ ರಚನೆಗೆ ಅಧಿಕಾರಿಗಳೂ ಕಾರಣರಾಗಿದ್ದಾರೆ. ಪರಿಸರವನ್ನು ಉಳಿಸುವುದರೊಂದಿಗೆ ಕೊಳಚೆ ನೀರನ್ನು ಅತ್ಯಾಧುನಿಕ ರೀತಿಯಲ್ಲಿ ಸಂಸ್ಕರಣೆ ಮಾಡಿ ಜಲ ಕಲುಷಿತವಾಗದಂತೆ ತಡೆಯಬೇಕು ಎಂದರು.