ಕನ್ನಡ ಶಾಲೆಗಳ ಉಳಿವಿಗೆ ಸರ್ಕಾರ ಬದ್ಧ

KannadaprabhaNewsNetwork |  
Published : Jan 08, 2026, 03:15 AM IST
ಸಿಂದಗಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಆವರಣದಲ್ಲಿ 2025-26ನೇ ಸಾಲಿನ ಉನ್ನತೀಕರಿಸಿದ ಪ್ರೌಢಶಾಲೆಗಳ ಉದ್ಘಾಟನೆ ಹಾಗೂ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ (ಹಂತ- 4) ವಿವೇಚನಾ ಅನುದಾನದಡಿ ₹50 ಲಕ್ಷ ಅನುದಾನದಲ್ಲಿ ಗುರುಭವನ ಕಟ್ಟಡದ ಪ್ರಥಮ ಹಂತದ ಕಾಮಗಾರಿಯ ಭೂಮಿ ಪೂಜೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ನೇರವೇರಿಸಿ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡ ಶಾಲೆಗಳನ್ನು ಸರ್ಕಾರ ಯಾವುದೇ ಕಾಲಕ್ಕೂ ಮುಚ್ಚುವುದಿಲ್ಲ. ಸರ್ಕಾರ ನಿರಂತರ ಹೊಸ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಕನ್ನಡ ಶಾಲೆಗಳ ಉಳಿವಿಗಾಗಿ ಸದಾ ಸಿದ್ಧವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಕನ್ನಡ ಶಾಲೆಗಳನ್ನು ಸರ್ಕಾರ ಯಾವುದೇ ಕಾಲಕ್ಕೂ ಮುಚ್ಚುವುದಿಲ್ಲ. ಸರ್ಕಾರ ನಿರಂತರ ಹೊಸ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಕನ್ನಡ ಶಾಲೆಗಳ ಉಳಿವಿಗಾಗಿ ಸದಾ ಸಿದ್ಧವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯ ಅಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ 2025-26ನೇ ಸಾಲಿನ ಉನ್ನತೀಕರಿಸಿದ ಪ್ರೌಢಶಾಲೆಗಳ ಉದ್ಘಾಟನೆ ಹಾಗೂ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ (ಹಂತ- 4) ವಿವೇಚನಾ ಅನುದಾನದಡಿ ₹50 ಲಕ್ಷ ಅನುದಾನದಲ್ಲಿ ಗುರುಭವನ ಕಟ್ಟಡದ ಪ್ರಥಮ ಹಂತದ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬರುವ ಬಜೆಟ್‌ನಲ್ಲಿ ಶಿಕ್ಷಣ ಇಲಾಖೆ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಲಾಗಿದೆ. ಶಿಕ್ಷಕರು ಮಕ್ಕಳ ಏಳಿಗೆಗಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ರಾಜ್ಯದಲ್ಲಿ ಶಿಕ್ಷಕರ ಸಮಸ್ಯೆಗಳು ನೂರೆಂಟು. ಅವುಗಳನ್ನು ಹಂತ ಹಂತವಾಗಿ ಪರಿಹರಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಕೆಲವು ಕಾನೂನು ತೊಡಕುಗಳನ್ನು ನಿವಾರಿಸಿ ಶಿಕ್ಷಕರ ಕಲ್ಯಾಣ ನಿಧಿಯಿಂದ ಗುರುಭವನಕ್ಕೆ ₹50 ಲಕ್ಷ ಅನುದಾನ ನೀಡಲು ಮುಂದಾಗುತ್ತೇನೆ. ಪರೀಕ್ಷೆಗಳಲ್ಲಿ ಮಕ್ಕಳು ಅನುತ್ತೀರ್ಣವಾಗುವುದು ಮಕ್ಕಳ ತಪ್ಪಲ್ಲ, ಅದು ಶಿಕ್ಷಕರ ಹಾಗೂ ಪಾಲಕರ ತಪ್ಪು. ಮಕ್ಕಳ ಪ್ರಗತಿ ಶಿಕ್ಷಕರ ಮೇಲಿದೆ. ಫಲಿತಾಂಶ ಸುಧಾರಣೆಗೆ ಶಿಕ್ಷಕರು ಕಲಿಕೆಯನ್ನು ಗಟ್ಟಿಗೊಳಿಸಬೇಕು. ಶಿಕ್ಷಕರ ಸಂಘಟನೆ ಸೃಜನಾತ್ಮಕವಾಗಿ ಕಾರ್ಯ ಮಾಡುತ್ತಿದೆ ಸಂಘಟನೆಗೆ ದೊಡ್ಡ ಶಕ್ತಿಯಿದೆ ಎಂದರು.

ಅಧ್ಯಕ್ಷತೆ ವಹಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಿಂದಗಿಯಲ್ಲಿ ಹಳೆಯದಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವಿದೆ. ಸಿಂದಗಿ ತಾಲೂಕು ವಿಭಜನೆಯಾದ ಬಳಿಕ ಆಲಮೇಲ, ದೇವರಹಿಪ್ಪರಗಿ ತಾಲೂಕುಗಳಾಗಿ ನಿರ್ಮಾಣಗೊಂಡಿವೆ. ಹೀಗಾಗಿ ಒಟ್ಟು 3 ಹೊಸ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮಂಜೂರಾತಿಗೆ ಸಚಿವರು ಕ್ರಮ ಜರುಗಿಸಬೇಕು. ಗುರುಭವನಕ್ಕೆ ₹1.5 ಕೋಟಿಗಳ ಅನುದಾನ ನೀಡಿದರೆ ಇಲ್ಲಿ ಸುಮಾರು 2000ಕ್ಕೂ ಅಧಿಕ ಶಿಕ್ಷಕರ ಶೈಕ್ಷಣಿಕ ಚಟುವಟಿಕೆ ನಡೆಯಲು ಅನುಕೂಲವಾಗುತ್ತದೆ ಎಂದರು.

ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು 1 ಲಕ್ಷ ಶಿಕ್ಷಕರಿಗೆ ಸರ್ಕಾರ ಹಿಂಬಡ್ತಿ ಮಾಡಿದೆ, ಅದನ್ನು ಸಚಿವರು ಗಂಭೀರವಾಗಿ ಪರಿಗಣಿಸಿ ಅವರಿಗೆ ಮುಂಬಡ್ತಿ ನೀಡಬೇಕು. ಇಂದಿರಾಟಿಕ್ ನೀಡುವ ಹಾಗೆ ಮಕ್ಕಳಿಗೆ ಸ್ಕೂಲ್‌ ಬ್ಯಾಗ್‌ ಸಮೇತ ವಿದ್ಯಾಟಿಕ್‌ಗಳನ್ನು ವಿತರಿಸುವ ಯೋಜನೆ ಆದಷ್ಟು ಬೇಗನೆ ರೂಪಿಸಬೇಕು. 2003 ರಿಂದ ಗ್ರಾಮೀಣ ಕೃಪಾಂಕದಿಂದ ವಂಚಿತರಾದವರಿಗೆ ಸೂಕ್ತ ನ್ಯಾಯ ನೀಡುವಲ್ಲಿ ಸರ್ಕಾರ ಮುಂದಾಗಬೇಕು. ಸರ್ಕಾರ ಶಿಕ್ಷಕರನ್ನು ಶೈಕ್ಷಣಿಕ ವಿಚಾರ ಹೊರತು ಪಡಿಸಿ ಅನ್ಯ ಕಾರ್ಯಗಳಿಗೆ ನೀಯೋಜನೆ ಮಾಡಿದರೆ ಮಕ್ಕಳ ಕಲಿಕಾ ಗುಣಮಟ್ಟ ಕುಸಿಯುತ್ತದೆ. ಹೀಗಾಗಿ ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಡಿಡಿಪಿಒ ವ್ಹಿ.ವ್ಹಿ.ಸಾಲಿಮಠ, ಡಾ.ಸಿ.ಕೆ.ಹೊಸಮನಿ, ಉಮಾದೇವಿ ಸೊನ್ನದ, ಸುರೇಶ ಶೇಡಶ್ಯಾಳ, ಅಶೋಕ ತೆಲ್ಲೂರ, ಆನಂದ ಭೂಸನೂರ, ಶ್ರೀಶೈಲ ಕವಲಗಿ, ಅಶೋಕ ಕೊಳಾರಿ, ಅರ್ಜುನ ಲಮಾಣಿ, ಎ.ಎಚ್.ವಾಲಿಕಾರ, ಆರ್.ಎಚ್.ಬಿರಾದಾರ, ಶಿವರಾಜ ಬಿರಾದಾರ, ಅಲ್ಲಾಭಕ್ಷ ವಾಲಿಕಾರ ಸೇರಿದಂತೆ ಇತರರು ಇದ್ದರು. ಡಾ.ರವಿ ಗೋಲಾ ನಿರೂಪಿಸಿದರು. ಈ ಹಿಂದೆ ಗುರುಭವನಕ್ಕೆ ಮಾಜಿ ಶಾಸಕರು ಭೂಮಿ ಪೂಜೆ ನೆರವೇರಿಸಿದ್ದರು. ಅದರ ವಿಸ್ತೀರ್ಣ ಅತ್ಯಂತ ಕಡಿಮೆ ಇರುವುದರಿಂದ ಸುಮಾರು 2000ಕ್ಕೂ ಹೆಚ್ಚು ಶಿಕ್ಷಕರು ಇಲ್ಲಿ ಕಾರ್ಯ ಮಾಡುವುದರಿಂದ ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಬಾರದು ಎಂಬ ಭಾವನೆಯಿಂದ ಅದು ಸೂಕ್ತ ಜಾಗ ಅಲ್ಲ ಎಂದು ಮನಗಂಡು ನಾನು 40*100 ಪ್ರದೇಶದಲ್ಲಿ ಗುರುಭವನ ನಿರ್ಮಾಣ ಮಾಡಲು ಕ್ರಮ ಕೈಗೊಂಡಿದ್ದೇನೆ. ಹೊರತು ಯಾವ ರಾಜಕೀಯ ಉದ್ದೇಶದಿಂದ ಅಲ್ಲ.

ಅಶೋಕ ಮನಗೊಳಿ, ಶಾಸಕರು, ಸಿಂದಗಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ