ಹೊರಗುತ್ತಿಗೆ ಕೈಬಿಟ್ಟು ಒಳಗುತ್ತಿಗೆಗೆ ಸರ್ಕಾರ ಚಿಂತನೆ

KannadaprabhaNewsNetwork |  
Published : Nov 13, 2025, 12:45 AM ISTUpdated : Nov 13, 2025, 11:01 AM IST
HK Patil

ಸಾರಾಂಶ

ಖಾಸಗಿ ಏಜೆನ್ಸಿಗಳ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಅದಕ್ಕಾಗಿ ಹೊರಗುತ್ತಿಗೆ ವ್ಯವಸ್ಥೆ ರದ್ದು ಮಾಡಿ ಒಳಗುತ್ತಿಗೆ ವ್ಯವಸ್ಥೆ ಜಾರಿಗೆ ತರಲು ಗಂಭೀರ ಚಿಂತನೆ ನಡೆಸಿದೆ.

ಗಿರೀಶ್‌ ಗರಗ

 ಬೆಂಗಳೂರು :  ಖಾಸಗಿ ಏಜೆನ್ಸಿಗಳ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಅದಕ್ಕಾಗಿ ಹೊರಗುತ್ತಿಗೆ ವ್ಯವಸ್ಥೆ ರದ್ದು ಮಾಡಿ ಒಳಗುತ್ತಿಗೆ ವ್ಯವಸ್ಥೆ ಜಾರಿಗೆ ತರಲು ಗಂಭೀರ ಚಿಂತನೆ ನಡೆಸಿದೆ.

ಹೊರಗುತ್ತಿಗೆ ನೌಕರರ ಮೇಲಿನ ದೌರ್ಜನ್ಯ ತಡೆ ಮತ್ತು ಸೇವಾ ಭದ್ರತೆ ಒದಗಿಸುವ ಸಂಬಂಧ ಸುಪ್ರೀಂಕೋರ್ಟ್‌ ಸ್ಪಷ್ಟ ನಿರ್ದೇಶನ ನೀಡಿದೆ. ಹೀಗಾಗಿ ಹೊರಗುತ್ತಿಗೆ ನೌಕರರ ನೇಮಕವನ್ನು ಖಾಸಗಿ ಏಜೆನ್ಸಿಗಳ ಮೂಲಕ ಮಾಡುವುದನ್ನು ತಪ್ಪಿಸಿ ಅನ್ಯಮಾರ್ಗದ ಮೂಲಕ ನೇಮಕಕ್ಕೆ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ.

ಈ ಸಂಪುಟ ಉಪಸಮಿತಿ ಹೊರ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡಲು ಇರುವ ಮಾರ್ಗಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಒಳಗುತ್ತಿಗೆ ಆಧಾರದಲ್ಲಿ ನೇರವಾಗಿ ಸರ್ಕಾರ ಅಥವಾ ಸರ್ಕಾರಿ ಸಂಸ್ಥೆಗಳ ಮೂಲಕ ಸೇವೆಗೆ ಭರ್ತಿ ಮಾಡಿಕೊಳ್ಳಲು ಪರಿಶೀಲನೆ ನಡೆಸಿದೆ. ಇದರ ಸಾಧಕ-ಬಾಧಕಗಳ ಪರಿಶೀಲನೆಗಾಗಿ ಕಾರ್ಮಿಕ ಇಲಾಖೆ, ಕಾನೂನು ಇಲಾಖೆ ಅಧಿಕಾರಿಗಳ ಸಮಿತಿ ರಚಿಸಲಾಗಿದ್ದು, ಸಮಿತಿಯು ವರದಿ ನೀಡಿದ ನಂತರ ಅದನ್ನು ಪರಿಶೀಲಿಸಿ ಹೊರಗುತ್ತಿಗೆ ನೌಕರರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಸಚಿವ ಸಂಪುಟ ಉಪಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಿದೆ.

2.50 ಲಕ್ಷ ಹೊರ ಗುತ್ತಿಗೆ ನೌಕರರಿಗೆ ಅನುಕೂಲ:

ರಾಜ್ಯದಲ್ಲಿ 7.80 ಮಂಜೂರಾದ ಸರ್ಕಾರಿ ಹುದ್ದೆಗಳಿದ್ದು, 2025ರ ಮಾರ್ಚ್‌ ವೇಳೆಗ 5.04 ಲಕ್ಷ ಹುದ್ದೆಗಳು ಭರ್ತಿಯಾಗಿವೆ. ಉಳಿದಂತೆ 2.76 ಹುದ್ದೆಗಳು ಖಾಲಿಯಿದ್ದು, ಅದರಲ್ಲಿ ಸಿ ದರ್ಜೆ 1.66 ಲಕ್ಷ ಮತ್ತು ಡಿ ದರ್ಜೆ 77,614 ಹುದ್ದೆಗಳು ಖಾಲಿಯಿವೆ. ಹೀಗೆ ಖಾಲಿ ಇರುವ ಹುದ್ದೆಗಳಿಗೆ ಹಾಗೂ ನಿಗಮ-ಮಂಡಳಿ ಸೇರಿ ಇನ್ನಿತರ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ಅಂದಾಜು 2.50 ಲಕ್ಷ ಹುದ್ದೆಗಳನ್ನು ಖಾಸಗಿ ಏಜೆನ್ಸಿ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಅದರಲ್ಲಿ ನೇರವಾಗಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ 1.30 ಲಕ್ಷ ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದು, ಉಳಿದ ನೌಕರರು ನಿಗಮ-ಮಂಡಳಿ ಸೇರಿ ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಾಗಿದ್ದಾರೆ. ಸಚಿವ ಸಂಪುಟ ಉಪಸಮಿತಿ ಕೈಗೊಳ್ಳುವ ನಿರ್ಧಾರ ಆ 2.50 ಲಕ್ಷ ಹೊರ ಗುತ್ತಿಗೆ ನೌಕರಿಗೆ ಅನುಕೂಲವಾಗಲಿದೆ.

ಅದರಲ್ಲೂ ಪ್ರಾಣಾಪಾಯದಲ್ಲಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ದೃಷ್ಟಿಯಿಟ್ಟುಕೊಂಡು ಹೊಸ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ಪೌರಕಾರ್ಮಿಕರು, ಚಾಲಕರು, ಇಂಧನ ಇಲಾಖೆಯ ವಿದ್ಯುತ್‌ ಸಂಬಂಧಿ ಕಾರ್ಯನಿರ್ವಹಿಸುವ ನೌಕರರು, ಆರೋಗ್ಯ ಇಲಾಖೆಯಲ್ಲಿ ಸಾಂಕ್ರಾಮಿಕ ರೋಗಗಳ ಚಿಕಿತ್ಸೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ, ಗಣಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಮತ್ತು ಸಿಬ್ಬಂದಿಗೆ ಒತ್ತು ನೀಡಲಾಗುತ್ತಿದೆ. ಹೀಗೆ ಪ್ರಾಣಾಪಾಯದ ಸೇವೆ ಸಲ್ಲಿಸುತ್ತಿರುವ 40 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿಯಿದ್ದಾರೆ.

ಒಳ ಗುತ್ತಿಗೆ ಎಂದರೇನು?

ಖಾಸಗಿ ಏಜೆನ್ಸಿ ಅಥವಾ ಇನ್ಯಾವುದಾದರೂ ಸಂಸ್ಥೆ ಮೂಲಕ ನೌಕರರನ್ನು ನೇಮಿಸುವ ವ್ಯವಸ್ಥೆಯನ್ನು ಹೊರಗುತ್ತಿಗೆ ಎಂದು ಕರೆಯಲಾಗುತ್ತದೆ. ಅದರಲ್ಲಿ ನೌಕರರಿಗೆ ವೇತನ ಪಾವತಿ ಸೇರಿ ಸೌಲಭ್ಯ ನೀಡುವ ಹೊಣೆಗಾರಿಗೆ ಸರ್ಕಾರಕ್ಕಿರುವುದಿಲ್ಲ. ಖಾಸಗಿ ಸಂಸ್ಥೆಗೆ ನಿಗದಿ ಮಾಡಿರುವ ಶುಲ್ಕ ಪಾವತಿಸಿದರೆ ನೌಕರರಿಗೆ ನೀಡಬೇಕಾದ ಸೌಲಭ್ಯ ಆ ಸಂಸ್ಥೆಯೇ ನೀಡುತ್ತದೆ. ಅದೇ ಒಳ ಗುತ್ತಿಗೆ ನೌಕರರು, ಸರ್ಕಾರದಿಂದಲೇ ಗುತ್ತಿಗೆ ಆಧಾರದಲ್ಲಿ ನೇಮಕವಾಗಲಿದ್ದಾರೆ. ಅವರಿಗೆ ವೇತನ, ಪಿಎಫ್‌ ಸೇರಿ ಇನ್ನಿತರ ಸೌಲಭ್ಯವನ್ನು ಆಯಾ ಇಲಾಖೆಗಳು ನೀಡಲಿವೆ. ಆದರೆ, ಅವರು ಸರ್ಕಾರಿ ನೌಕರರಾಗಿರುವುದಿಲ್ಲ.

ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಅದರ ಸಾಧಕ ಬಾಧಕಗಳ ಪರಿಶೀಲನೆಗೆ ಕಾನೂನು ಇಲಾಖೆ ಕಾರ್ಯದರ್ಶಿ ಮತ್ತು ಕಾರ್ಮಿಕ ಇಲಾಖೆ ಆಯುಕ್ತರ ಸಮಿತಿ ರಚಿಸಲಾಗಿದೆ. ಹೊರ ಗುತ್ತಿಗೆ ನೌಕರರ ನೇಮಕಕ್ಕೆ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆ ಬದಲು ಪರ್ಯಾಯ ಮಾರ್ಗ ನೋಡಲಾಗುತ್ತಿದೆ.

ಎಚ್‌.ಕೆ. ಪಾಟೀಲ್‌, ಕಾನೂನು ಸಚಿವ

ವಿವಿಧೋದ್ದೇಶ ಸಂಘ ಸ್ಥಾಪನೆಗಿಲ್ಲ ಒಲವು:ಖಾಸಗಿ ಏಜೆನ್ಸಿಗಳಿಂದಾಗುವ ದೌರ್ಜನ್ಯ ತಡೆಯುವ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸಿ, ಅದರ ಮೂಲಕ ಹೊರಗುತ್ತಿಗೆ ನೌಕರರನ್ನು ನೇಮಿಸುವ ಬಗ್ಗೆಯೂ ಸಚಿವ ಸಂಪುಟ ಉಪಸಮಿತಿ ಚರ್ಚಿಸಿತ್ತು. ಆದರೆ, ಈ ವ್ಯವಸ್ಥೆಯ ಬಗೆಗಿನ ಸಾಧಕ-ಬಾಧಕ ಅಧ್ಯಯನದ ನಂತರ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆ ಬದಲು, ಒಳ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವುದು ಸೂಕ್ತ ಎಂದು ಸಂಪುಟ ಉಪಸಮಿತಿ ಚಿಂತನೆ ನಡೆಸಿದೆ. 

ಅದಕ್ಕಾಗಿ ಕಾರ್ಮಿಕ ಇಲಾಖೆ ಆಯುಕ್ತರು ಮತ್ತು ಕಾನೂನು ಇಲಾಖೆ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಹೊರಗುತ್ತಿಗೆ ಕಾರ್ಮಿಕರ ಸಂಖ್ಯೆ, ಎಷ್ಟು ವರ್ಷದಿಂದ ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ, ಖಾಸಗಿ ಏಜೆನ್ಸಿಗೆ ನೀಡಲಾಗುತ್ತಿರುವ ಸೇವಾ ಶುಲ್ಕ ಮತ್ತು ಜಿಎಸ್‌ಟಿ ವಿವರ, ಸುಪ್ರೀಂಕೋರ್ಟ್‌ ತೀರ್ಪಿನ ಕುರಿತಂತೆ ಅಭಿಪ್ರಾಯ ತಿಳಿಸುವಂತೆ ಸಮಿತಿಗೆ ನಿರ್ದೇಶಿಸಲಾಗಿದೆ. 

ಸರ್ಕಾರಕ್ಕೆ ಹೊರೆಯಾಗದಂತೆ ಕ್ರಮ: 

ಹೊರಗುತ್ತಿಗೆ ನೌಕರರನ್ನು ಒಳಗುತ್ತಿಗೆ ವ್ಯವಸ್ಥೆ ವ್ಯಾಪ್ತಿಗೆ ತರುವುದರಿಂದ ಸರ್ಕಾರಕ್ಕೆ ಹೊರೆಯಾಗದಂತೆ ಮಾಡಲಾಗುತ್ತದೆ. ಸದ್ಯ ಹೊರ ಗುತ್ತಿಗೆ ಆಧಾರದಲ್ಲಿ ನೌಕರರ ನೇಮಕಕ್ಕೆ ಖಾಸಗಿ ಏಜೆನ್ಸಿಗಳಿಗೆ ಗರಿಷ್ಠ ಶೇ.30ರಷ್ಟು ಸೇವಾ ಶುಲ್ಕ ಮತ್ತು ಜಿಎಸ್‌ಟಿ ಪಾವತಿಸಲಾಗುತ್ತಿದೆ. ಹೀಗೆ ಖಾಸಗಿ ಏಜೆನ್ಸಿಗಳಿಗೆ ನೀಡಲಾಗುತ್ತಿರುವ ಹೆಚ್ಚುವರಿ ಶೇ.30ರಷ್ಟು ಸೇವಾ ಶುಲ್ಕ ಮತ್ತು ಜಿಎಸ್‌ಟಿಯನ್ನು ಒಳಗುತ್ತಿಗೆ ಆಧಾರದಲ್ಲಿ ನೇಮಿಸಿ, ನೌಕರರಿಗೆ ನೀಡುವ ಮೂಲಕ ಈಗಿನ ವೆಚ್ಚದಲ್ಲೇ ನೌಕರರ ನೇಮಕ ಸಾಧ್ಯ ಎಂದು ಸಚಿವ ಸಂಪುಟ ಉಪಸಮಿತಿ ಪರಾಮರ್ಶಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು 11 ಸಾವಿರ ನೀಡಿ
ದೇಶಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ