ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ ನಾಟಕ ಕಲೆಗೆ ಸರ್ಕಾರದ ಸಹಕಾರ ಅತಿ ಮುಖ್ಯವಾಗಿದ್ದು, ಕಲಾವಿದರು ತಮ್ಮ ಕಲೆ ಪ್ರದರ್ಶಿಸಲು ಸರ್ಕಾರದ ಪ್ರೋತ್ಸಾಹಬೇಕಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗ ಕಲಾವಿದೆ ಡಾ.ಕೆ. ನಾಗರತ್ನಮ್ಮ ಹೇಳಿದರು. ಇಲ್ಲಿನ ದುರ್ಗಾದಾಸ್ ರಂಗಮಂದಿರದಲ್ಲಿ ಬುಧವಾರ ಸಂಜೆ ಅಕ್ಷರ ಜ್ಞಾನ ಕಲಾಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ ಸಂಯುಕ್ತಾಶ್ರದಲ್ಲಿ ಸಮೂಹ ನೃತ್ಯ ಮತ್ತು ನಾಟಕ ಸುಗ್ಗಿ ಸಂಭ್ರಮ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯೋಜನೆಯಲ್ಲಿ ಕಲಾವಿದರಿಗೆ ಅನೇಕ ಕಾರ್ಯಕ್ರಮ ನೀಡುತ್ತಿರುವುದರಿಂದ ನಾಟಕಗಳ ಪ್ರದರ್ಶನ ಹೆಚ್ಚಾಗಿ ನಡೆಯುತ್ತಿರುವುದಿಂದ ರಂಗಭೂಮಿ ಬೆಳವಣಿಗೆಗೆ ಸರ್ಕಾರ ಸಹಕಾರಿ ನೀಡುತ್ತಿದೆ. ಸಿನಿಮಾ ಮತ್ತು ಧಾರವಾಹಿಗಳ ಹಾವಳಿಯಿಂದ ಇಂದು ನಾಟಕಗಳು ಸಂಕಷ್ಟ ಪರಿಸ್ಥಿಯಲ್ಲಿವೆ.ಹೀಗಾಗಿ ಸಾರ್ವಜನಿಕರ, ಕಲಾಸಕ್ತರು ನಾಟಕಗಳನ್ನು ವೀಕ್ಷಿಸುವ ಮೂಲಕ ನಾಟಕ ಕ್ಷೇತ್ರ ಹಾಗೂ ಅದನ್ನೇ ನೆಚ್ಚಿಕೊಂಡಿರುವ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ರಂಗಕರ್ಮಿ ಬಿ.ಎಂ.ಎಸ್. ಪ್ರಭು ಮಾತನಾಡಿ,ಅನೇಕ ಸಿನಿಮಾ ಕಲಾವಿದರು ಮೂಲತಃ ರಂಗಭೂಮಿಯಿಂದಲೇ ಬಂದವರಾಗಿದ್ದಾರೆ.ಪ್ರೇಕ್ಷಕರ ಮನಸ್ಸು ಒಂದೆಡೆ ಕ್ರೂಢೀಕರಿಸಿ ಒಂದು ಉತ್ತಮ ಸಂದೇಶ ನೀಡುವ ಶಕ್ತಿ ರಂಗಭೂಮಿಗಿದೆ ಎಂದರು. ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದೆ ರಾಮವ್ವ ಜೋಗತಿ ಕಾರ್ಯಕ್ರಮ ಉದ್ಘಾಟಿಸಿದರು. ಅಕ್ಷರ ಜ್ಞಾನ ಕಲಾಸಂಘದ ಅಧ್ಯಕ್ಷ ತಳವಾರ್ ನವೀನ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಥಳೀಯ ಮುಖಂಡರಾದ ತಳವಾರ್ ಹುಲುಗಪ್ಪ,ಗಂಗಾವತಿಯ ಶರಣಪ್ಪ,ಪಪಂ ಸದಸ್ಯ ಕೆ.ಮಂಜುನಾಥ,ಲಲಿತಕಲಾ ರಂಗದ ಅಧ್ಯಕ್ಷ ಎಚ್.ಮಂಜುನಾಥ,ಜಾನಪದ ಕಲಾವಿದೆ ಅಂಜಿನಮ್ಮ ಜೋಗತಿ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು. ಅಶ್ವಿನಿ ತಳವಾರ್ ತಂಡದವರಿಂದ ಸಮೂಹ ನೃತ್ಯ,ಪ್ರವೀಣ್ ಕುಮಾರ್ ಟಿ.ತಂಡದವರಿಂದ ಪೂರ್ಣಚಂದ್ರ ತೇಜಸ್ವಿ ರಚಿಸಿರುವ ಟಿ.ನವೀನ್ ಕುಮಾರ್ ಟಿ.ನಿರ್ದೇಶಿಸಿರುವ ಕೃಷ್ಣೇಗೌಡರ ಆನೆ ನಾಟಕ ಪ್ರದರ್ಶನ ನಡೆಯಿತು.