ಒಳಮೀಸಲಾತಿ ನೀಡುವ ತನಕ ಬಡ್ತಿ, ನೇಮಕ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ನೀಡಿದ ವಚನ ಪಾಲಿಸಬೇಕು. ಎರಡು ಮೂರು ದಿನಗಳಲ್ಲಿ ಸಿದ್ದರಾಮಯ್ಯ ಸೂಕ್ತ ನಿರ್ಧಾರ ಪ್ರಕಟಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾದಿಗ ಸಮುದಾಯದ ಕ್ರಾಂತಿಕಾರಿ ರಥಯಾತ್ರೆ ರಾಜ್ಯ ಸಂಚಾಲಕ ಬಿ.ಆರ್. ಭಾಸ್ಕರ ಪ್ರಸಾದ ಹೇಳಿದ್ದಾರೆ.
ಕಂಪ್ಲಿ: ಒಳ ಮೀಸಲಾತಿ ನೀಡದೆ 36 ಸಾವಿರ ಬ್ಯಾಕ್‌ಲಾಗ್ ಹುದ್ದೆ ಭರ್ತಿ, ಬಡ್ತಿಗೆ ಮುಂದಾಗಿರುವುದು ಮಾದಿಗ ಸಮುದಾಯಕ್ಕೆ ಸರ್ಕಾರ ಮಾಡಿದ ವಂಚನೆಯಾಗಿದೆ ಎಂದು ಮಾದಿಗ ಸಮುದಾಯದ ಕ್ರಾಂತಿಕಾರಿ ರಥಯಾತ್ರೆ ರಾಜ್ಯ ಸಂಚಾಲಕ ಬಿ.ಆರ್. ಭಾಸ್ಕರ ಪ್ರಸಾದ ಆರೋಪಿಸಿದರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಕ್ರಾಂತಿಕಾರಿ ರಥಯಾತ್ರೆ ಸಮಾವೇಶದಲ್ಲಿ ಮಾತನಾಡಿ, ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯಕ್ಕೆ ಸುಪ್ರೀಂ ಕೋರ್ಟ್ ನೀಡಿದ್ದರೂ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಂಡಿಲ್ಲ. ಒಳಮೀಸಲಾತಿ ನೀಡುವ ತನಕ ಬಡ್ತಿ, ನೇಮಕ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ನೀಡಿದ ವಚನ ಪಾಲಿಸಬೇಕು. ಸಾಧನಾ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಾಗ ಮಾದಿಗ ಸಮುದಾಯದ ಕ್ಷಮೆ ಕೇಳುವಂತೆ, ನೇಮಕ, ಬಡ್ತಿ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಬೇಕು. ತಪ್ಪಿದಲ್ಲಿ ತಾಪಂ, ಜಿಪಂ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸುವ ಎಚ್ಚರಿಕೆ ನೀಡುವಂತೆ ಮಾದಿಗ ಸಮುದಾಯದ ಮುಖಂಡರಿಗೆ ಸೂಚಿಸಿದರು. ಎರಡು ಮೂರು ದಿನಗಳಲ್ಲಿ ಸಿದ್ದರಾಮಯ್ಯ ಸೂಕ್ತ ನಿರ್ಧಾರ ಪ್ರಕಟಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಕ್ರಾಂತಿಕಾರಿ ರಥಯಾತ್ರೆ ಸಮಾವೇಶ: ಪಟ್ಟಣಕ್ಕೆ ಆಗಮಿಸಿದ್ದ ಕ್ರಾಂತಿಕಾರಿ ರಥವನ್ನು ವಾಲ್ಮೀಕಿ ವೃತ್ತದಲ್ಲಿ ತಾಲೂಕಿನ ಮಾದಿಗ ಸಮಾಜದ ಮುಖಂಡರು ಸ್ವಾಗತಿಸಿದರು. ಈ ರಥಯಾತ್ರೆ ವಾಲ್ಮೀಕಿ ವೃತ್ತದಿಂದ ಹೊಸ ಬಸ್ ನಿಲ್ದಾಣ, ಡಾ. ರಾಜಕುಮಾರ ರಸ್ತೆ ಮಾರ್ಗವಾಗಿ ಸಂಚರಿಸಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಭಟ್ಟಪ್ರಸಾದ್, ಕಂಪ್ಲಿ ತಾಲೂಕು ಮಾದಿಗ ಸಮುದಾಯದ ಪ್ರಮುಖರಾದ ವೀರಾಂಜನೇಯಲು, ಡಿಶ್ ಪ್ರಸಾದ್, ನಾಗರಾಜ, ಎಚ್. ಶ್ರೀನಿವಾಸಲು, ಮೆಟ್ರಿ ಕುಮಾರಸ್ವಾಮಿ, ಮರಿಸ್ವಾಮಿ, ಸಣ್ಣ ಹನುಮಂತು, ಎಚ್. ಗುಂಡಪ್ಪ, ಆರ್. ಆಂಜಿನೇಯ, ಆರ್.ಎಂ. ರಾಮಯ್ಯ, ಎನ್. ಗಂಗಣ್ಣ, ಎನ್. ಬುಜ್ಜಿಕುಮಾರ್, ಎಚ್. ಶೇಖರ, ಎಚ್. ಯಲ್ಲಪ್ಪ, ಲಕ್ಷ್ಮಿಪತಿ ಹಾಗೂ ಮೋಚಿ, ಮುಸ್ಲಿಂ ಸಮುದಾಯದ ಮುಖಂಡರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.