ನರಸಿಂಹರಾಜಪುರ: ಕೊಪ್ಪದ ಸಹಕಾರ ದುರೀಣ, ಬ್ರಾಹ್ಮಣ ಮಹಾ ಸಭಾದ ಮುಖಂಡ ಹಾಗೂ ಬಿಜೆಪಿ ಮುಖಂಡ ಮಹಾಬಲರಾವ್ ಅವರಿಗೆ ಸರ್ಕಾರವು ಸಹಕಾರ ರತ್ನ ಪ್ರಶಸ್ತಿ ಘೋಷಣೆ ಮಾಡಿ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಹೋಗಿದ್ದಾಗ ಪ್ರಶಸ್ತಿ ಪಟ್ಟಿಯಿಂದ ಅವರನ್ನು ಕೈಬಿಟ್ಟು ಅವರಿಗೆ ಅಗೌರವ ತೋರಿಸಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆರೋಪಿಸಿದರು.
ಹಣ ಬಿಡುಗಡೆ ಬಗ್ಗೆ ಮಾಹಿತಿ ನೀಡಿ:
ರಸ್ತೆ ಗುಂಡಿ ಮುಚ್ಚುವ ಕಾರ್ಯ ಈಗ ಪ್ರಾರಂಭವಾಗಿದೆ. ಕೊರಲಕೊಪ್ಪ- ಎನ್.ಆರ್.ಪುರ ಮಾರ್ಗದ ರಸ್ತೆಯಲ್ಲಿ ಗುಂಡಿ ಮುಚ್ಚುತ್ತಿದ್ದು, ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಕಿತ್ತು ಬರಲಿದೆ. ನಾನು ಶಾಸಕನಾಗಿದ್ದಾಗ ರಸ್ತೆ ಮಾಡಿದ ಮೇಲೆ 8 ರಿಂದ 10 ವರ್ಷ ರಸ್ತೆ ಹಾಳಾಗುತ್ತಿರಲಿಲ್ಲ. ಈಗ 8 ತಿಂಗಳಲ್ಲೇ ಹಾಳಾಗುತ್ತಿದೆ. ಶಾಸಕರು ಮಳೆಯ ಕಾರಣ ಕೊಡುತ್ತಿದ್ದಾರೆ. ಆಗಲೂ ಮಳೆ ಇದೇ ರೀತಿ ಸುರಿಯುತ್ತಿತ್ತು. ಈ ಹಿಂದೆ ಕಾಮಗಾರಿ ಮಾಡುವಾಗ ಕಾಮಗಾರಿ ವಿವರವನ್ನು ಬ್ಯಾನರ್‌ನಲ್ಲಿ ಹಾಕಲಾಗುತ್ತಿತ್ತು. ಈಗ ನಿಂತು ಹೋಗಿದೆ. ನೀವು ಶಾಸಕರಾದ 7.50 ವರ್ಷದಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ ಎಂದು ಪಟ್ಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಕೊಪ್ಪ, ನರಸಿಂಹರಾಜಪುರಕ್ಕೆ ಅಮೃತ-2.0 ಯೋಜನೆಯಡಿ ತುಂಗಾ ನದಿಯಿಂದ ಕುಡಿಯುವ ನೀರಿನ ಯೋಜನೆ ಪ್ರಾರಂಭವಾಗಿದೆ. ನರಸಿಂಹರಾಜಪುರ ಸಮೀಪದ ಭದ್ರಾ ಹಿನ್ನೀರಿನಿಂದ ನೀರು ತರಲು ಕೇವಲ 5 ಕಿ.ಮೀ.ಸಾಕಾಗಿತ್ತು. ಈಗ 25 ಕಿ.ಮೀ. ದೂರದ ಮುತ್ತಿನಕೊಪ್ಪದಿಂದ ತುಂಗಾ ನದಿಯಿಂದ ನೀರು ತರುವ ಯೋಜನೆ ರೂಪಿಸಲಾಗಿದ್ದು, ಇದರಿಂದ ಅನಗತ್ಯವಾಗಿ ಹಣ ಪೋಲಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ನೀಲೇಶ್, ಅರುಣಕುಮಾರ್, ಆಶೀಶ್ ಕುಮಾರ್, ಎನ್.ಎಂ.ಕಾಂತರಾಜ್, ಸುರಭಿ ರಾಜೇಂದ್ರ, ಪರ್ವೀಜ್, ಕೆಸವಿ ಮಂಜುನಾಥ್ ಇದ್ದರು.
ನ್ಯಾಷನಲ್ ಹೈವೇಗೆ ಶೀಘ್ರ ಅನುಮೋದನೆಹೊಸಪೇಟೆ-ಹರಿಹರ-ಶಿವಮೊಗ್ಗ-ನರಸಿಂಹರಾಜಪುರ- ಬಾಳೆಹೊನ್ನೂರು- ಶೃಂಗೇರಿಗೆ ನ್ಯಾಷನಲ್ ಹೈವೇ ರಸ್ತೆ ಮಾಡಿಸಿಕೊಡಬೇಕು ಎಂದು ಚಿಕ್ಕಮಗಳೂರು- ಉಡುಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಶಿವಮೊಗ್ಗದ ಸಂಸದ ರಾಘವೇಂದ್ರ ಅವರಿಗೆ ನಾನು ಮನವಿ ಸಲ್ಲಿಸಿದ್ದು ಶೀಘ್ರದಲ್ಲೇ ಅನುಮೋದನೆ ದೊರೆಯಲಿದೆ. ಅಲ್ಲದೆ ಹಾಸನ- ಚಿಕ್ಕಮಗಳೂರು- ಬಾಳೆಹೊನ್ನೂರು-ಶೃಂಗೇರಿಗೆ ನ್ಯಾಷನಲ್ ಹೈವೇ ಮಂಜೂರಾಗಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಬಹುದು ಮಾಜಿ ಸಚಿವ ಡಿ.ಎನ್.ಜೀವರಾಜ್ ತಿಳಿಸಿದರು.