ಸರ್ಕಾರಿ ಸೇವೆ ಎಂದರೆ ಜನಸೇವೆ ಎಂಬ ಆಶಯದೊಂದಿಗೆ ನೌಕರರು ಮತ್ತು ಶಿಕ್ಷಕರು ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಪ್ರತಿಯೊಬ್ಬ ನೌಕರರೂ ತಮ್ಮದೇ ಆದ ಕೊಡುಗೆ ನೀಡಬೇಕು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಜನಸಾಮಾನ್ಯರೊಂದಿಗೆ ನೇರ ಸಂಪರ್ಕದಲ್ಲಿರುವ ಸರ್ಕಾರಿ ನೌಕರರು ಪ್ರಾಮಾಣಿಕತೆ, ಬದ್ಧತೆ ಹಾಗೂ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ ಎಂದರು.
ಸರ್ಕಾರಿ ಸೇವೆ ಎಂದರೆ ಜನಸೇವೆ ಎಂಬ ಆಶಯದೊಂದಿಗೆ ನೌಕರರು ಮತ್ತು ಶಿಕ್ಷಕರು ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಪ್ರತಿಯೊಬ್ಬ ನೌಕರರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ಸರ್ಕಾರಿ ನೌಕರರ ಹಿತರಕ್ಷಣೆ ಹಾಗೂ ಅವರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸದಾ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಸಂಘದ ತಾಲೂಕು ಅಧ್ಯಕ್ಷ ಜೆ.ವೈ.ಮಂಜುನಾಥ್ ಮಾತನಾಡಿ, ಸರ್ಕಾರಿ ನೌಕರರು ಮತ್ತು ಶಿಕ್ಷಕರು ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುವಾಗ ನಿರ್ಭೀತಿಯಿಂದ ಸ್ವತಂತ್ರ್ಯವಾಗಿ ಕೆಲಸ ಮಾಡುವಂತಹ ವಾತಾವರಣ ಸೃಷ್ಟಿಸಬೇಕಿರುವುದು ಸಂಘಟನೆಯ ಕರ್ತವ್ಯವಾಗಿದೆ. 103 ವರ್ಷ ಇತಿಹಾಸ ಹೊಂದಿರುವ ಸರ್ಕಾರಿ ನೌಕರರ ಸಂಘವು ಶಿಕ್ಷಕರ ಸಂಘ ಸೇರಿದಂತೆ ಎಲ್ಲಾ ಇಲಾಖೆಗಳ ಸಂಘಟನೆಗಳನ್ನು ಜೊತೆಗೂಡಿಸಿಕೊಂಡು 28 ಇಲಾಖೆಗಳ ನೌಕರರ ಹಿತಾಸಕ್ತಿ ಕಾಯುವ ಜೊತೆಗೆ ಸೇವಾ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ ಎಂದರು.
ಸಮಾರಂಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಂ.ಪ್ರಕಾಶ್ ಮಾತನಾಡಿದರು. ಸಭೆಯಲ್ಲಿ ಜಮಾ ಖರ್ಚು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು. ಜಿಪಿಟಿ ಶಿಕ್ಷಕರಿಗೆ ಖಾಯಂಪೂರ್ವ ಸೇವಾ ಅವಧಿ ಘೋಷಣಾ ಪತ್ರ ವಿತರಿಸಲಾಯಿತು. ಬಳಿಕ ಕಳೆದ ಸಾಲಿನಲ್ಲಿ ಸೇವಾ ನಿವೃತ್ತಿ ಹೊಂದಿದ ಸರ್ಕಾರಿ ನೌಕರರು ಮತ್ತು ವರ್ಗಾವಣೆಗೊಂಡಿರುವ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಯು.ಎಸ್.ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಲೋಕೇಶ್, ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ವಿಶ್ವಮಂಜು ಸೇರಿದಂತೆ ಸರ್ಕಾರಿ ನೌಕರರ ಸಂಘ ಮತ್ತು ವೃಂದ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.