ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದ ಸೌಲಭ್ಯ: ಬಿ. ಮಲ್ಲಿಕಾರ್ಜುನ

KannadaprabhaNewsNetwork | Published : May 21, 2024 12:30 AM

ಸಾರಾಂಶ

ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಬಂದಿದ್ದ ಅನುದಾನವನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಈಗಾಗಲೇ ಮಾಡಿದ್ದೇವೆ. ಸರ್ಕಾರದ ಎಲ್ಲ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸುತ್ತೇವೆ ಎಂದು ಗಜೇಂದ್ರಗಡ ಪುರಸಭೆ ಯೋಜನಾಧಿಕಾರಿ ಬಿ. ಮಲ್ಲಿಕಾರ್ಜುನ ಹೇಳಿದ್ದಾರೆ.

ಗಜೇಂದ್ರಗಡ: ಪಟ್ಟಣದ ಪುರಸಭೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಸ್ಥರಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸುವ ಕಾರ್ಯ ಪುರಸಭೆಯಿಂದ ನಡೆಯುತ್ತಿದೆ ಎಂದು ಪುರಸಭೆ ಯೋಜನಾಧಿಕಾರಿ ಬಿ. ಮಲ್ಲಿಕಾರ್ಜುನ ಹೇಳಿದರು.

ಬೀದಿ ಬದಿ ಪಟ್ಟಣ ವ್ಯಾಪಾರಿ ಸಮಿತಿ ಸದಸ್ಯರ ಜತೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಬಂದಿದ್ದ ಅನುದಾನವನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಈಗಾಗಲೇ ಮಾಡಿದ್ದೇವೆ. ಅಲ್ಲದೆ ಸ್ಥಳೀಯ ಬೀದಿ ಬದಿ ವ್ಯಾಪಾರಿಗಳ ಸರ್ವೇ ಕಾರ್ಯದ ಜತೆಗೆ ಅವರಿಗೆ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿ ವಿತರಿಸುವ ಕಾರ್ಯ ಕೊನೆಯ ಹಂತದಲ್ಲಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಡವಾಗಿದೆ. ನೀತಿ ಸಂಹಿತೆ ತೆರವು ಆಗುತ್ತಿದ್ದಂತೆ ಇನ್ನುಳಿದ ಕೆಲಸ ಕಾರ್ಯಗಳನ್ನು ಪುರಸಭೆಯಿಂದ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳ ಹಿತ ಕಾಪಾಡಲು ಹಾಗೂ ಅವರಿಗೆ ಜಾಗೃತಿ ಮೂಡಿಸಲು ಸಭೆಗಳ ಜತೆಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ತ್ವರಿತ ಕೆಲಸ ಮಾಡುವ ಮೂಲಕ ಇಲ್ಲಿನ ಬೀದಿಬದಿ ವ್ಯಾಪಾರಿಗಳ ಹಿತರಕ್ಷಣೆ, ಅವರ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಬೀದಿ ಬದಿ ವ್ಯಾಪಾರಿಗಳ ಸಂಘಟನೆಯ ಜಿಲ್ಲಾಧ್ಯಕ್ಷ ಬಾಷೇಸಾಬ್‌ ಕರ್ನಾಚಿ ಮಾತನಾಡಿ, ಪಟ್ಟಣದಲ್ಲಿನ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಬರುವ ಸಾಲ ಹಾಗೂ ಇತರ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸುವ ಕಾರ್ಯವನ್ನು ಜಿಲ್ಲಾಧಿಕಾರಿ, ಪುರಸಭೆ ಮುಖ್ಯಾಧಿಕಾರಿ ಹಾಗೂ ಯೋಜನಾ ಅಧಿಕಾರಿಗಳು ಮಾಡುತ್ತಿದ್ದಾರೆ. ಪರಿಣಾಮ ಗಜೇಂದ್ರಗಡ ಪುರಸಭೆ ಜಿಲ್ಲೆಯಲ್ಲಿನ ಎಲ್ಲ ಸ್ಥಳೀಯ ಸಂಸ್ಥೆಗಳಿಗಿಂತ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ೧೦ರಿಂದ ೫೦ ಸಾವಿರ ವರೆಗೆ ಸಾಲ ಪಡೆದಿರುವ ಬೀದಿ ಬದಿ ವ್ಯಾಪಾರಿಗಳು ಸಾಲದ ಕಂತುಗಳನ್ನು ಸಹ ತುಂಬುತ್ತಿದ್ದಾರೆ. ಈಗಾಗಲೇ ಒಬ್ಬ ವ್ಯಾಪಾರಿ ₹೧ ಲಕ್ಷ ಸಾಲ ಸೌಲಭ್ಯ ಪಡೆದಿದ್ದಾರೆ. ಅನೇಕ ವ್ಯಾಪಾರಿಗಳಿಗೆ ಆರೋಗ್ಯ ವಿಮೆ ಸಹ ಮಾಡಿಸಲಾಗಿದೆ. ಸ್ಥಳೀಯ ವ್ಯಾಪಾರಿಗಳಿಂದ ಶುಲ್ಕ ಸಂಗ್ರಹಿಸಲಾಗಿದ್ದು, ಬೀದಿ ಬದಿ ಪಟ್ಟಣ ವ್ಯಾಪಾರಿ ಸಮಿತಿಗೆ ಅಂದಾಜು ₹೪೦ ಸಾವಿರ ಸಂಗ್ರಹವಾಗಿದೆ ಎಂದರು.

ಚಂದ್ರಶೇಖರ ರಾಠೋಡ, ಹುಲ್ಲಪ್ಪ ತಳವಾರ, ಕವಿತಾ ಹೆಬ್ಬಾಳ, ರಾಜೇಸಾಬ ಕಟ್ಟಿಮನಿ, ಚೌಡಮ್ಮ ಹೆಲ್ಪು, ಉಮಾ ಚವ್ಹಾಣ, ಸುಕನ್ಯಾ ಇತರರು ಇದ್ದರು.

Share this article