ಕನ್ನಡಪ್ರಭ ವಾರ್ತೆ ಚಾಮರಾಜನಗರ
ಗಡಿಜಿಲ್ಲೆ ಚಾಮರಾಜನಗರದಲ್ಲಿ ವರುಣಾರ್ಭಟ ಮುಂದುವರೆದಿದ್ದು ಸೋಮವಾರ ಜಿಲ್ಲಾದ್ಯಂತ ಜೋರು ಮಳೆಯಾಯಿತು. ಗುಡುಗು ಸಿಡಿಲಿನ ಆರ್ಭಟದೊಂದಿಗೆ ಧುಮುಕಿದ ಮಳೆರಾಯ ಎಡಬಿಡದೇ ಚಾಮರಾಜನಗರ ಜಿಲ್ಲಾಕೇಂದ್ರ ಹಾಗೂ ಗುಂಡ್ಲುಪೇಟೆ, ಕೊಳ್ಳೇಗಾಲ ಮತ್ತು ಹನೂರು ಭಾಗದಲ್ಲಿ ಜೋರು ಮಳೆ ಸುರಿಯಿತು.ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ರವಾಸಿಗರ ಪರದಾಟ:
ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಜೋರು ಮಳೆ ಸುರಿದ ಪರಿಣಾಮ ದೇವಸ್ಥಾನಕ್ಕೆ ತೆರಳಲು ಚೆಕ್ ಪೋಸ್ಟ್ ಬಳಿ ಬಸ್‌ಗೆ ಕಾಯುತ್ತಿದ್ದ ಸಂದರ್ಭದಲ್ಲಿ ನೂರಾರು ಮಂದಿ ಮಳೆಗೆ ಸಿಲುಕಿ ಪರದಾಡಿದರು. 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದರಿಂದ ಬೆಟ್ಟದ ಮೇಲಿಂದ ಮಳೆ ನೀರು ಹೊಳೆ ರೂಪದಲ್ಲಿ ಹರಿಯಿತು. ಅಕ್ಕಪಕ್ಕದ ರಸ್ತೆ ಬದಿ ಅಂಗಡಿಗಳಿಗೆ ನೀರು ನುಗ್ಗಿದವು. ಗೋಪಾಲಸ್ವಾಮಿ ಬೆಟ್ಟದ ಭಾಗದಲ್ಲಿ ಜೋರು ಮಳೆಯಾದ್ದರಿಂದ ಹಂಗಳ ಹಿರಿಕೆರೆಗೆ ನೀರು ಹರಿದು ಬರುತ್ತಿದೆ.ಮಂಚಹಳ್ಳೀಲಿ ಸುರಿದ ಧಾರಾಕಾರ ಮಳೆ: ಬರಗಿ ಸುತ್ತ ಮುತ್ತ ಕಳೆದ ಮೂರು ದಿನಗಳಿಂದ ಮಳೆ ಬೀಳುತ್ತಿದ್ದು, ಸೋಮವಾರ ಸಹ ಮಂಚಹಳ್ಳಿ ಸುತ್ತ ಮುತ್ತ ಧಾರಾಕಾರ ಮಳೆ ಬಿದ್ದು ಕೆರೆ, ಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ. ಕಳೆದ ಶನಿವಾರ, ಭಾನುವಾರ, ಸೋಮವಾರ ಬರಗಿ ಭಾಗದಲ್ಲಿ ಮಳೆ ಮಧ್ಯಾಹ್ನದ ವೇಳೆಗೆ ಬಿದ್ದಿದೆ. ಸೋಮವಾರ ಬಿದ್ದ ಮಳೆಗೆ ಜಮೀನುಗಳಲ್ಲಿ ಮಳೆಯ ನೀರು ನಿಂತಿತು. ಮಂಚಹಳ್ಳಿ ಬಳಿಯ ಹುಲಿ ಕೆರೆ, ಹೊಸ ಕೆರೆಗೆ ಮಳೆಯ ನೀರು ಬಂದು ತುಂಬುವ ಹಂತ ತಲುಪಿದೆ. ಮೂಖಹಳ್ಳಿ ಸುತ್ತ ಮುತ್ತಲಿನ ಕೆರೆ, ಕಟ್ಟೆಗಳಿಗೆ ನೀರು ಹರಿದು ಬರುತ್ತಿದ್ದು ಹಳ್ಳ ಕೊಳ್ಳಗಳಲ್ಲಿ ನೀರು ನಿಂತಿದೆ.
ಬರಗಿ ಸುತ್ತ ಮುತ್ತಲಿನ ಗ್ರಾಮಗಳ ರೈತರ ಜಮೀನಿನಲ್ಲಿ ಬೆಳೆದಿದ್ದ ಸೂರ್ಯಕಾಂತಿ, ಹತ್ತಿ, ಕಡ್ಲೆ, ಹೊಗೆ ಸೊಪ್ಪು, ಈರುಳ್ಳಿ ಸೇರಿದಂತೆ ಇನ್ನಿತರ ಬೆಳೆಗಳು ಮಳೆಗೆ ನಾಶವಾಗಿದೆ. ಹೊಂಗಳ್ಳಿ ಬಳಿಯ ಮೊಗೆ ಕೆರೆ, ಚನ್ನಪ್ಪನ ಕಟ್ಟೆಯಲ್ಲಿ ಮಳೆ ನೀರು ಬಂದು ಕೋಡಿ ಬಿದ್ದಿದೆ. ಬರಗಿ ಕೆರೆಗೆ ನೀರು ಹರಿದು ಕೆರೆ ತುಂಬುವ ಹಂತಕ್ಕೆ ಬಂದಿದೆ. ಹಂಗಳ, ಗುಂಡ್ಲುಪೇಟೆ, ಚೆನ್ನಮಲ್ಲಿಪುರ, ಗೋಪಾಲಪುರ, ದೇವರಲ್ಲಿ, ಹೊಂಗಳ್ಳಿ, ಬರಗಿ ಬಾಗದಲ್ಲಿ ಉತ್ತಮ ಮಳೆಯಾಗಿದೆ.