ಗದಗ: ಈ ವರ್ಷ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಇದುವರೆಗೆ ಯಾವುದೇ ಪ್ರಾಥಮಿಕ ಸಮೀಕ್ಷೆಯನ್ನೂ ಮಾಡಿಲ್ಲ. ಕಂದಾಯ ಸಚಿವರು ಡಿಸಿಗಳಿಂದ ವರದಿ ತರಿಸುವುದಾಗಿ ಹೇಳುತ್ತಿದ್ದಾರೆ. ಆದರೆ ವೈಜ್ಞಾನಿಕವಾಗಿ ಕಂದಾಯ, ಸಾಂಖ್ಯಿಕ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ನೀಡಿದಾಗ ಮಾತ್ರ ಅದು ಅಧಿಕೃತವಾಗುತ್ತದೆ ಎಂದರು.
ಬರ ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ತುರ್ತು ಯೋಜನೆ ರೂಪಿಸಿಲ್ಲ. ಕುಡಿಯುವ ನೀರಿಗೂ ಪರ್ಯಾಯ ವ್ಯವಸ್ಥೆ ಮಾಡಲಾಗಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಮಳೆಯಾಗಿದ್ದರಿಂದ ನದಿಗಳಲ್ಲಿ ನೀರು ಬಂದಿದ್ದರೂ, ಆ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಸುಮಾರು 145 ಏತ ನೀರಾವರಿ ಯೋಜನೆಗಳು ದುರಸ್ತಿ ಮತ್ತು ವಿದ್ಯುತ್ ಬಿಲ್ ಪಾವತಿಸದ ಕಾರಣ ಸ್ಥಗಿತಗೊಂಡಿವೆ. ಇದು ಸರ್ಕಾರದ ವೈಫಲ್ಯವಾಗಿದೆ ಎಂದರು.ಕೇವಲ ಪತ್ರ ವ್ಯವಹಾರ ನಡೆಸುವುದೇ ಸರ್ಕಾರದ ಕೆಲಸವಲ್ಲ. ಕೂಡಲೇ ರಾಜ್ಯ ಸರ್ಕಾರ ವೈಜ್ಞಾನಿಕವಾಗಿ ಬೆಳೆ ಸಮೀಕ್ಷೆ ನಡೆಸಿ, ಅಧಿಕೃತ ವರದಿಯನ್ನು ಸಿದ್ಧಪಡಿಸಬೇಕು. ಅದರ ಆಧಾರದ ಮೇಲೆ ಎನ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.