ಕಸದ ತೊಟ್ಟಿಗೆ ಸರ್ಕಾರಿ ಕಡತಗಳು: ಅಧಿಕಾರಿಗಳ ಕೈವಾಡ ಶಂಕೆ

KannadaprabhaNewsNetwork |  
Published : Sep 18, 2026, 01:30 AM IST
೧೭ಕೆಎಂಎನ್‌ಡಿ-೧೦ ನಾಗಮಂಗಲ ಪಟ್ಟಣದ ತಾಲೂಕು ಕಚೇರಿಯ ಆಡಳಿತ ಶಾಖೆಗೆ ಭೇಟಿ ಕೊಟ್ಟ ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯ ತಹಶೀಲ್ದಾರ್ ಗುರುಪ್ರಸಾದ್ ನೇತೃತ್ವದ ಅಧಿಕಾರಿಗಳ ತಂಡ ಕೆಲ ದಾಖಲೆ ಕಡತಗಳ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ನಾಗಮಂಗಲ ತಾಲೂಕು ಕಚೇರಿಯ ಅಭಿಲೇಖಾಲಯ ಶಾಖೆಯಲ್ಲಿ ಅತ್ಯಂತ ಸುರಕ್ಷತೆಯಿಂದ ಇರಬೇಕಾದ ರೈತರ ಜಮೀನಿಗೆ ಸಂಬಂಧಿಸಿದ ಕಡತಗಳಾದ ಎಂಆರ್, ಆರ್‌ಆರ್ ಇಂಡೆಕ್ಸ್, ಕೈಬರವಣಿಗೆ ಆರ್‌ಟಿಸಿ ಸೇರಿದಂತೆ ಹಲವು ಮೂಲ ದಾಖಲೆಗಳನ್ನು ಸಿಸಿ ಟಿವಿ ಕಣ್ಗಾವಲು ವಲಯದಲ್ಲೇ ಕಸದ ತೊಟ್ಟಿಗೆ ಬಿಸಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕರಡಹಳ್ಳಿ ಸೀತಾರಾಮು

ಕನ್ನಡಪ್ರಭ ವಾರ್ತೆ ನಾಗಮಂಗಲ

ಒಂದು ಸಾವಿರ ಎಕರೆಗೂ ಹೆಚ್ಚು ಸರ್ಕಾರಿ ಭೂಮಿ ಕಬಳಿಕೆ ಪ್ರಕಣ ಅಚ್ಚ ಹಸಿರಾಗಿರುವಾಗಲೇ ಮೂಲ ಭೂ-ದಾಖಲೆಗಳ ಕಡತಗಳನ್ನು ಕಸದತೊಟ್ಟಿಗೆ ಬಿಸಾಡಿರುವ ಪ್ರಕರಣ ಬೆಚ್ಚಿ ಬೀಳಿಸಿದೆ. ಪ್ರಭಾವಿ ಭೂಗಳ್ಳರಿಗೆ ಅನುಕೂಲವಾಗಲೆಂದು ಕಂದಾಯ ಇಲಾಖೆಯ ಅಧಿಕಾರಿಗಳೇ ದ್ವಿತೀಯ ದರ್ಜೆ ಸಹಾಯಕನ ಮೂಲಕ ಮೂಲ ಭೂದಾಖಲೆ ಕಡತಗಳನ್ನು ಬಿಸಾಡಿಸಿರಬಹುದೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ.

ತಾಲೂಕು ಕಚೇರಿಯ ಅಭಿಲೇಖಾಲಯ ಶಾಖೆಯಲ್ಲಿ ಅತ್ಯಂತ ಸುರಕ್ಷತೆಯಿಂದ ಇರಬೇಕಾದ ರೈತರ ಜಮೀನಿಗೆ ಸಂಬಂಧಿಸಿದ ಕಡತಗಳಾದ ಎಂಆರ್, ಆರ್‌ಆರ್ ಇಂಡೆಕ್ಸ್, ಕೈಬರವಣಿಗೆ ಆರ್‌ಟಿಸಿ ಸೇರಿದಂತೆ ಹಲವು ಮೂಲ ದಾಖಲೆಗಳನ್ನು ಸಿಸಿ ಟಿವಿ ಕಣ್ಗಾವಲು ವಲಯದಲ್ಲೇ ಕಸದ ತೊಟ್ಟಿಗೆ ಬಿಸಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ವಿಲೇವಾರಿಗೆ ನಿಯಮವಿದೆ:

ಅನುಪಯುಕ್ತ ಭೂದಾಖಲೆ ಕಡತ ಮತ್ತು ವೇಸ್ಟೇಜ್ ಪೇಪರ್‌ಗಳನ್ನು ವಿಲೇವಾರಿ ಮಾಡಲು ಹಲವು ನಿಯಮಗಳಿವೆ. ವೇಸ್ಟೇಜ್ ಪೇಪರ್ ಖರೀದಿಸುವ ಏಜೆನ್ಸಿಯವರ ಟೆಂಡರ್ ಕರೆಯಬೇಕು. ಸಂಬಂಧಿಸಿದ ಅಧಿಕಾರಿಗಳ ಸಮ್ಮುಖದಲ್ಲಿಯೇ ಅನುಪಯುಕ್ತ ಭೂದಾಖಲೆ ಮತ್ತು ವೇಸ್ಟೇಜ್ ಪೇಪರ್‌ಗಳನ್ನು ಗುರುತು ಸಿಗದಂತೆ ಸಣ್ಣದಾಗಿ ಚಿಂದಿ ಮಾಡಿಸಿದ ನಂತರ ವಿಲೇವಾರಿ ಮಾಡಬೇಕು. ವಿಲೇವಾರಿ ಮಾಡುವ ಫೋಟೋ ವಿಡಿಯೋ ಮಾಡಿಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎನ್ನಲಾಗಿದೆ.

ಲೋಕಾಯುಕ್ತ ದಾಳಿ ನಂತರ ಅಭಿಲೇಖಾಲಯ ಶಾಖೆಯಲ್ಲಿ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು ಹೆಚ್ಚಿಸಲಾಗಿದೆ. ಪ್ರಭಾವಿ ಖಾಸಗಿ ವ್ಯಕ್ತಿಗಳು ಸಂಚು ರೂಪಿಸಿ ಕಚೇರಿ ಸಿಬ್ಬಂದಿ ಮೂಲಕವೇ ಮೂಲ ಭೂದಾಖಲೆಗಳನ್ನು ಕಚೇರಿಯ ಹೊರಭಾಗಕ್ಕೆ ತರಿಸಿಕೊಳ್ಳುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಭೂಗಳ್ಳರೊಂದಿಗೆ ಶಾಮೀಲಾಗಿರುವ ಅಧಿಕಾರಿಗಳು ಗುಮಾಸ್ತ ಅಶೊಕ್‌ಕುಮಾರ್ ಮೂಲಕ ಮಹತ್ವದ ಭೂದಾಖಲೆಗಳನ್ನು ಕಸದ ತೊಟ್ಟಿಯಲ್ಲಿ ಹಾಕಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಒಂದು ಖಾಲಿ ಕೈಬರವಣಿಗೆ ಆರ್‌ಟಿಸಿ ಮತ್ತು ಖಾಲಿ ಎಂಆರ್ ಪ್ರತಿ ಸಿಕ್ಕರೆ ಅದ್ನನೇ ಬಂಡವಾಳ ಮಾಡಿಕೊಂಡು ತಮಗೆ ಬೇಕಾದ ವ್ಯಕ್ತಿಗಳ ಹೆಸರು ನಮೂದಿಸಿ ಭೂಗಳ್ಳರು ಲಕ್ಷಗಟ್ಟಲೆ ಹಣ ಸಂಪಾದಿಸುತ್ತಾರೆ. ಇದೇ ಹುನ್ನಾರದಿಂದ ಅಭಿಲೇಖಾಲಯ ಶಾಖೆಯಲ್ಲಿದ್ದ ಕೈಬರವಣಿಗೆ ಆರ್‌ಟಿಸಿ, ಎಂಆರ್, ಆರ್‌ಆರ್ ಇಂಡೆಕ್ಸ್, ಸೇರಿದಂತೆ ಹಲವು ಮೂಲ ದಾಖಲೆಗಳನ್ನು ಅನುಪಯುಕ್ತದ ನೆಪದಲ್ಲಿ ಕಸದ ತೊಟ್ಟಿಗೆ ಹಾಕಿಸಿಕೊಂಡು ನಂತರ ಹೊತ್ತೊಯ್ಯುವ ಸಂಚು ರೂಪಿಸಿರಬಹುದೆಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ.

ಮೈಸೂರು ಪ್ರಾದೇಶಿಕ ಆಯುಕ್ತರ ಭೇಟಿ, ಪರಿಶೀಲನೆ

ಮೂಲ ಭೂದಾಖಲೆ ಕಡತಗಳನ್ನು ಕಸದ ತೊಟ್ಟಿಯಲ್ಲಿ ಬಿಸಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಪಟ್ಟಣದ ತಾಲೂಕು ಆಡಳಿತ ಸೌಧಕ್ಕೆ ಭೇಟಿ ಕೊಟ್ಟು ಕೆಲ ದಾಖಲಾತಿ ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು.

ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯ ತಹಸೀಲ್ದಾರ್ ಗುರುಪ್ರಸಾದ್ ನೇತೃತ್ವದಲ್ಲಿ ಶಿರಸ್ತೇದಾರ್ ಅನಂತಮೂರ್ತಿ, ಲೆಕ್ಕಪರಿಶೋಧಕರಾದ ಜಗದೀಶ್, ಬಸವರಾಜು, ಪ್ರಥಮ ದರ್ಜೆ ಸಹಾಯಕ ಮಹೇಂದ್ರ ಪ್ರಕರಣ ಕುರಿತು ಪರಿಶೀಲನೆ ನಡೆಸಿದರು. ತನಿಖಾ ಅಧಿಕಾರಿಗಳು ಕಚೇರಿಯ ಚಲನವಲನ ಪುಸ್ತಕ, ಹಾಜರಾತಿ ಪುಸ್ತಕ ಸೇರಿದಂತೆ ಕೆಲ ಕಡತಗಳ ಪರಿಶೀಲಿಸಿ ಕಚೇರಿಯ ಆಡಳಿತ ಶಿರಸ್ತೇದಾರ್ ಟಿ.ಎನ್.ಪ್ರಕಾಶ್ ಅವರಿಂದ ಅಗತ್ಯ ಮಾಹಿತಿ ಕಲೆಹಾಕಿದರು.ಅನುಪಯುಕ್ತ ಭೂದಾಖಲೆಗಳನ್ನು ನಿಯಮಾನುಸಾರ ವಿಲೇವಾರಿ ಮಾಡಿದ್ದಾರೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಅಭಿಲೇಖಾಲಯ ಶಾಖೆಗೆ ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ವಿಚಾರಣೆ ನಡೆಸಿ ಅಗತ್ಯ ಮಾಹಿತಿ ಪಡೆಯಲಾಗಿದೆ. ಈ ಎಲ್ಲಾ ಅಂಶಗಳ ಕುರಿತು ಸಿದ್ದಪಡಿಸಿರುವ ವರದಿಯನ್ನು ಮುಂದಿನ ಕ್ರಮಕ್ಕಾಗಿ ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಲಾಗುವುದು.

-ಗುರುಪ್ರಸಾದ್, ತಹಸೀಲ್ದಾರ್, ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಗ್ರೇಡ್-೨ ತಹಸೀಲ್ದಾರ್‌ಗೆ ನೋಟಿಸ್

ತಾಲೂಕು ಕಚೇರಿಯ ಅಭಿಲೇಖಾಲಯ ಶಾಖೆಯಲ್ಲಿರುವ ಮೂಲ ಭೂದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಆನ್‌ಲೈನ್‌ಗೆ ಅಪ್‌ಲೋಡ್ ಮಾಡಲು ಹೊರಗುತ್ತಿಗೆ ಆಧಾರದಲ್ಲಿ ದಿನಗೂಲಿ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಭಿಲೇಖಾಲಯ ಶಾಖೆಯ ಮೇಲುಸ್ತುವಾರಿ ಗ್ರೇಡ್-೨ ತಹಸೀಲ್ದಾರ್ ಮಂಜುನಾಥ್, ದ್ವಿತೀಯ ದರ್ಜೆ ಸಹಾಯಕ ಅಶೋಕ್ ಕುಮಾರ್ ಸೇರಿದಂತೆ ಶಾಖೆಯ ದಿನಗೂಲಿ ಡಾಟಾ ಎಂಟ್ರಿ ಆಪರೇಟರ್‌ಗಳು ಭಾನುವಾರವೂ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿತ್ತು. ಭೂದಾಖಲೆಗಳು ಕಸದ ತೊಟ್ಟಿಯಲ್ಲಿ ಪತ್ತೆಯಾಗಿರುವ ಬಗ್ಗೆ ಗ್ರೇಡ್-೨ ತಹಸೀಲ್ದಾರ್ ಮಂಜುನಾಥ್‌ಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ.

-ಡಾ. ಅಶೋಕ್, ತಹಸೀಲ್ದಾರ್, ನಾಗಮಂಗಲ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನುಗ್ಗೇಹಳ್ಳಿ ಸೊಸೈಟಿಗೆ ಅಧ್ಯಕ್ಷರಾಗಿ ಕಾರೇಕೆರೆ ಪ್ರಕಾಶ್‌ ಆಯ್ಕೆ
ಪ್ರವಾಸೋದ್ಯಮ ಅಭಿವೃದ್ಧಿಯಿಂದ ಜಿಲ್ಲೆಯ ಸೌಕರ್ಯ ಮೇಲ್ದರ್ಜೆಗೆ: ಸಾಗರ ಖಂಡ್ರೆ