ಕೆ.ಎಂ. ಮಂಜುನಾಥ್
ಬಳ್ಳಾರಿ: ನಗರ ಹಾಗೂ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ತೀವ್ರವಾಗಿದ್ದು, ಅತಿಥಿ ಉಪನ್ಯಾಸಕರನ್ನೇ ಅವಲಂಬಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ!ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಬಳ್ಳಾರಿಯಲ್ಲಿ ಪದವಿ ಕಾಲೇಜುಗಳು ಬೋಧಕರ ಕೊರತೆ ಎದುರಿಸುತ್ತಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೂ ಪೆಟ್ಟು ಬಿದ್ದಿದೆ.
ಅದರಲ್ಲೂ ಕಳೆದ 23 ದಿನಗಳಿಂದ ಅತಿಥಿ ಉಪನ್ಯಾಸಕರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿರುವುದು ಬೋಧನಾ ಚಟುವಟಿಕೆಗೆ ಮತ್ತಷ್ಟು ಹಿನ್ನಡೆಯಾಗಿದೆ. ಸರ್ಕಾರಿ ಕಾಲೇಜುಗಳನ್ನೇ ಅವಲಂಬಿಸಿರುವ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಶೈಕ್ಷಣಿಕ ಹಿನ್ನಡೆಯ ಆತಂಕ ಎದುರಿಸುತ್ತಿದ್ದಾರೆ.ಉಪನ್ಯಾಸಕರ ಕೊರತೆ ಎಷ್ಟೆಷ್ಟು?:
ನಗರದ ಸರಳಾದೇವಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 4700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ ಶೇ. 60ರಷ್ಟು ಗ್ರಾಮೀಣ ವಿದ್ಯಾರ್ಥಿಗಳಿದ್ದಾರೆ.ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ, ಬಿಸಿಎ ವಿಭಾಗದಲ್ಲಿ ವಿವಿಧ ಕೋರ್ಸ್‌ಗಳು ಸೇರಿದಂತೆ ಪತ್ರಿಕೋದ್ಯಮ, ನಾಟಕ ವಿಭಾಗಗಳಿವೆ. ಸ್ನಾತಕೋತ್ತರ ಪದವಿಯಲ್ಲಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಭೌತಶಾಸ್ತ್ರ, ವಾಣಿಜ್ಯಶಾಸ್ತ್ರ ಕೋರ್ಸ್‌ಗಳಿವೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ಸೇರಿದಂತೆ ಬೋಧನೆ ಮಾಡಲು ಪ್ರಾಂಶುಪಾಲರು ಸೇರಿದಂತೆ 40 ಜನ ಮಾತ್ರ ಕಾಯಂ ಉಪನ್ಯಾಸಕರು ಇದ್ದು, ಉಳಿದಂತೆ 112 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಹಿಂದಿ, ಉರ್ದು, ಪರಿಸರ ವಿಜ್ಞಾನ, ತೆಲುಗು, ಪ್ರಾಣಿಶಾಸ್ತ್ರ ಹಾಗೂ ಸಸ್ಯಶಾಸ್ತ್ರ ಬೋಧನೆಗೆ ಕಾಯಂ ಉಪನ್ಯಾಸಕರೇ ಇಲ್ಲ. ಹೀಗಾಗಿ ಈ ನಾಲ್ಕೈದು ವಿಭಾಗಗಳು ಸಂಪೂರ್ಣ ಅತಿಥಿಗಳನ್ನೇ ಅವಲಂಬಿಸಿವೆ.
ಈ ಕಾಲೇಜಿನ ಬಿಕಾಂ ವಿಭಾಗದಲ್ಲಿ ಐದು ಸೆಕ್ಷನ್‌ಗಳನ್ನು ಮಾಡಲಾಗಿದ್ದು, ಬರೀ ಮೂವರು ಕಾಯಂ ಉಪನ್ಯಾಸಕರ ಮೇಲೆ ವಿದ್ಯಾರ್ಥಿಗಳು ಅವಲಂಬಿತರಾಗಿದ್ದಾರೆ.ರೇಡಿಯೋ ಪಾರ್ಕ್ ಕಾಲೇಜು:
ನಗರದ ರೇಡಿಯೋ ಪಾರ್ಕ್ ಪ್ರದೇಶದಲ್ಲಿರುವ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ಬಿಎ ಹಾಗೂ ಬಿಕಾಂ ವಿಭಾಗಗಳಿವೆ. ಇಲ್ಲಿ 327 ವಿದ್ಯಾರ್ಥಿಗಳಿದ್ದು, ಬರೀ 7 ಕಾಯಂ ಉಪನ್ಯಾಸಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ 16 ಅತಿಥಿ ಉಪನ್ಯಾಸಕರನ್ನು ಕಾಲೇಜು ಅವಲಂಬಿಸಿದೆ.ನಲ್ಲಚೆರವು ಪ್ರದೇಶದ ಬಳಿಯ ರುಕ್ಮಣಮ್ಮ ಚೆಂಗಾರೆಡ್ಡಿ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ 2217 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಲ್ಲಿಗೆ ಬರುವ ಶೇ. 45ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರು. ಇಲ್ಲಿರುವ ಕಾಯಂ ಉಪನ್ಯಾಸಕರು 7 ಜನರು ಮಾತ್ರ. ಇನ್ನುಳಿದಂತೆ 43 ಅತಿಥಿ ಉಪನ್ಯಾಸಕರನ್ನು ಈ ಕಾಲೇಜು ಅವಲಂಬಿಸಿದೆ.
ನಗರದ ಮೂರು ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆಯ ಜತೆಗೆ ಬೋಧಕೇತರ ಸಿಬ್ಬಂದಿ ಕೊರತೆಯೂ ದೊಡ್ಡ ಸಂಖ್ಯೆಯಲ್ಲಿದೆ. ಇದು ಕಾಲೇಜು ನಿರ್ವಹಣೆಗೆ ಸಮಸ್ಯೆಯಾಗಿ ಪರಿಣಮಿಸಿದೆಯಲ್ಲದೆ, ಮಕ್ಕಳ ದೈನಂದಿನ ಶೈಕ್ಷಣಿಕ ಚಟುವಟಿಕೆ ಹಾಗೂ ಪ್ರಗತಿಯ ಮೇಲೂ ಪೆಟ್ಟು ನೀಡಿದಂತಾಗಿದೆ. ಸಮಸ್ಯೆಯಾಗಿದೆ:ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಧರಣಿಯಿಂದ ಒಂದಷ್ಟು ಸಮಸ್ಯೆಯಾಗಿರುವುದು ನಿಜ. ಹೀಗಾಗಿ ವಿದ್ಯಾರ್ಥಿಗಳಿಗೆ ಅನನುಕೂಲವಾಗಬಾರದು ಎಂಬ ಕಾರಣಕ್ಕಾಗಿ ಕ್ಲಬ್ ಮಾಡಿ ಬೋಧಿಸಲಾಗುತ್ತಿದೆ. ದಿನಕ್ಕೆ ಕನಿಷ್ಠ 4 ತರಗತಿಗಳು ನಡೆಯಲು ಕ್ರಮ ವಹಿಸಲಾಗುತ್ತಿದೆ ಎಂದು ಸರಳಾದೇವಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಕೆ. ಮಂಜುನಾಥ ರೆಡ್ಡಿ ತಿಳಿಸಿದರು.
ಹೋರಾಟ ನಡೆಯಲಿದೆ: ಸೇವೆ ಕಾಯಂಗೊಳಿಸುವಂತೆ ಆಗ್ರಹಿಸಿ ಕಳೆದ 23 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದೇವೆ. ಸರ್ಕಾರ ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಯಲಿದೆ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಕೆ. ಬಸಪ್ಪ ತಿಳಿಸಿದರು.