ನರಗುಂದ: ಪ್ರತಿ ದಿನ ರೈತ ಸಮುದಾಯ ಯೂರಿಯಾ ಗೊಬ್ಬರ ಖರೀದಿಗಾಗಿ ಅಲೆದಾಡಿದರೂ ಸಹ ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರಿಗೆ ಗೊಬ್ಬರ ಪೂರೈಕೆ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಗಂಭೀರ ಆರೋಪ ಮಾಡಿದರು.
ಪ್ರತಿ ತಾಲೂಕಿನ ಕೃಷಿ ಇಲಾಖೆಯಿಂದ ಸರ್ಕಾರ ಪ್ರಸಕ್ತ ವರ್ಷ ಯಾವ ಯಾವ ಬೆಳೆ ಬಿತ್ತನೆ ಮಾಡಲಾಗುವದೆಂದು ಗುರಿಯ ಕ್ರಿಯಾ ಯೋಜನೆಯ ವರದಿ ಪಡೆದುಕೊಂಡಿರುತ್ತದೆ. ಇದರ ಪ್ರಕಾರ ಸರ್ಕಾರ ಏಕೆ ಮೊದಲೆ ರಾಸಾಯನಿಕ ಗೊಬ್ಬರ ಸಂಗ್ರಹ ಮಾಡಿಕೊಂಡಿಲ್ಲವೆಂದು ಪ್ರಶ್ನೆ ಮಾಡಿದರು. ಕಳೆದೊಂದು ತಿಂಗಳಿಂದ ರಾಜ್ಯದ ರೈತರು ಯೂರಿಯಾ ಗೊಬ್ಬರಕ್ಕಾಗಿ ಪ್ರತಿ ದಿನ ಖಾಸಗಿ ಗೊಬ್ಬರ ಅಂಗಡಿ ಮತ್ತು ಸಹಕಾರಿ ಸಂಘಗಳಿಗೆ ಗೊಬ್ಬರ ಖರೀದಿ ಮಾಡಲು ಅಲೆದಾಡಿದರೂ ಕೂಡ ಗೊಬ್ಬರ ಸಿಗದೆ ರೈತರು ಬಿತ್ತನೆ ಮಾಡಿದ ಬೆಳೆಗಳು ಹಾಳಾಗುತ್ತಿವೆ. ಆದರೆ ಉಭಯ ಸರ್ಕಾರಗಳು ರಾಜ್ಯದಲ್ಲಿ ಏನು ಸಮಸ್ಯೆ ಇಲ್ಲವೆಂದು ನಾಟಕವಾಡುತ್ತಿವೆ ಎಂದರು.
ಸರ್ಕಾರಕ್ಕೆ ಈಗಲು ಕಾಲ ಮಿಂಚಿಲ್ಲ, ರಾಜ್ಯ ರೈತರ ಬೇಡಿಕೆ ಅನುಸಾರ ಯೂರಿಯಾ ಗೊಬ್ಬರ ಪೂರೈಕೆ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯದ ರೈತರು ಬೆಂಗಳೂರ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಎಚ್ಚರಿಸಿದರು.ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ಸಿ.ಎಸ್. ಪಾಟೀಲ, ಹನಮಂತ ಸರನಾಯ್ಕರ, ಸುಭಾಸ ಗಿರಿಯಣ್ಣವರ, ಮಲ್ಲೇಶ ಅಣ್ಣಿಗೇರಿ, ಶಿವಪ್ಪ ಸಾತಣ್ಣವರ, ಶಂಕ್ರಪ್ಪ ಜಾಧವ, ಫಕೀರಪ್ಪ ಅಣ್ಣಿಗೇರಿ, ಅರ್ಜುನ ಮಾನೆ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ವಾಸು ಚವ್ಹಾಣ, ವಿಜಯಕುಮಾರ ಹೂಗಾರ ಸೇರಿದಂತೆ ಇತರರು ಇದ್ದರು.