ಕನ್ನಡಪ್ರಭ ವಾರ್ತೆ ಹುಣಸೂರು ಶಾಲೆಗಳನ್ನು ಅಭಿವೃದ್ಧಿ ಪಡಿಸಿದರೆ ಸಮಾಜದ ಏಳಿಗೆ ತಾನಾಗಿಯೇ ಆಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಹೇಳಿದರು.ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಆಯೋಜಿಸಿದ್ದ ಎಚ್.ಪಿಬಿಎಸ್ ಮಹಾಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಬ್ಬ ನಾಗರಿಕನು ತನ್ನ ಸುತ್ತ ಸಮಾಜವು ಕೆಡದಂತೆ ಎಚ್ಚರವಹಿಸುವ ಅಗತ್ಯವಿದೆ. ಅದಕ್ಕಾಗಿ ಸಮಾಜದ ಮೂಲ ಬೇರಿನಂತಿರುವ ಶಿಕ್ಷಣ ಕ್ಷೇತ್ರವನ್ನು ಸುಧಾರಿಸಬೇಕು. ನಮ್ಮ ಸುತ್ತಲಿನ ಅದಕ್ಕಾಗಿ ಕರವೇ ದತ್ತು ಪಡೆದು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಹುಣಸೂರು ಪಟ್ಟಣದ ಜನತೆಗೆ ಮಾದರಿ ಶಾಲೆಯೊಂದನ್ನು ನೀಡುವ ಗುರಿ ಹೊಂದಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಸಾಯಿನಾಥ್ ಮಾತನಾಡಿ, ಹುಣಸೂರು ಪುಟ್ಟಣ ಪುರಾತನ ಶಾಲೆನ್ನು ಪೋಷಿಸುವ ಮೂಲಕ ನಮ್ಮ ಪರಂಪರೆಯನ್ನು ನಾವು ಉಳಿಸಿಕೊಂಡಿದ್ದೇವೆ. ಇಂತಹ ಗುರುತರ ಕಾರ್ಯಕ್ಕೆ ನಾವು ಸದಾ ಸಿದ್ಧರಾಗಬೇಕೆಂದರು.ಮಹಾಸಂಭ್ರಮದ ಅಂಗವಾಗಿ ಆಯೋಜನೆಗೊಂಡಿದ್ದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಇಡೀ ಕಾರ್ಯಕ್ರಮವನ್ನು ಹೆಚ್ಚು ಅಂದಗಾಣಿಸಿತು. ಕನ್ನಡದ ಅಸ್ಮಿಯತೆಯನ್ನು ಹಾಡಿ ಹೊಗಳುವ ಹಾಡುಗಳಿಗೆ ಮಕ್ಕಳು ಲಯಬದ್ಧವಾಗಿ ಹೆಜ್ಜೆ ಹಾಕಿದರು.ಮಹಿಳಾ ದಿನಾಚರಣೆಯ ಅಂಗವಾಗಿ ಶಾಲೆಯ ಮಹಿಳಾ ಸಿಬ್ಬಂದಿಯನ್ನು ಗೌರವಿಸಲಾಯಿತು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಘಟಕ-1ರ ಯೋಜನಾಧಿಕಾರಿ ಧನಂಜಯ, ಕಸಾಪ ತಾಲೂಕು ಅಧ್ಯಕ್ಷ ಮಹದೇವ, ಸಾಹಿತಿಗಳಾದ ರೇಣುಕಾ ಪ್ರಸಾದ್, ಜೆ. ಮಹದೇವ ಕಲ್ಕುಣಿಕೆ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ನರಸಿಂಹ, ಪಿಇಒ ಲೋಕೇಶ, ಎಸ್.ಡಿಎಂಸಿ ಅಧ್ಯಕ್ಷ ರಮೇಶ್, ಪೋಷಕರ ಸಮಿತಿ ಅಧ್ಯಕ್ಷ ಶಿವರಾಮ್, ಮುಖ್ಯ ಶಿಕ್ಷಕ ಡಾ. ಮಾದುಪ್ರಸಾದ್ , ಶಿಕ್ಷಕ ಸೋಮಸುಂದರ್, ಸಿ.ಆರ್.ಪಿ ಸ್ಮಿತಾ ಸಿಂಧೆ, ಕಿರುತೆರೆ ಮತ್ತು ಬೆಳ್ಳಿತೆರೆ ನಟ ಕುಮಾರ್ ಅರಸೇಗೌಡ ಮತ್ತು ಪುಟಾಣಿ ಮಕ್ಕಳು ಮತ್ತು ಪಾಲಕರು ಇದ್ದರು.