- ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿ 10 ಸಾವಿರ ಅನಧಿಕೃತ ಆಸ್ತಿಗಳು । ನಗರಸಭೆ ವ್ಯಾಪ್ತಿಯಲ್ಲಿ ಇ- ಖಾತೆ ಅಭಿಯಾನ
ಕಂದಾಯ ಭೂಮಿಯಲ್ಲಿ ನಿರ್ಮಿಸಿಕೊಂಡಿರುವ ಮನೆ, ಕಟ್ಟಡ, ನಿವೇಶನಗಳನ್ನು ಸಕ್ರಮಗೊಳಿಸಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಅದರಂತೆ ನಗರದಲ್ಲಿ ಇ-ಖಾತಾ ಅಭಿಯಾನ ಆರಂಭಿಸಲಾಗಿದೆ ಎಂದು ನಗರಸಭಾ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದರು.ಸೋಮವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ನಗರಸಭೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಇ-ಖಾತಾ ಅಭಿಯಾನಕ್ಕೆ ಚಾಲನೆ ನೀಡಿ, ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ನಗರಸಭೆ ವ್ಯಾಪ್ತಿಯಲ್ಲಿ ಬರುವ ನಾಗರಿಕರು ಆಸ್ತಿ ತೆರಿಗೆ ಪಾವತಿಸದೇ ಇರುವವರು ಇ-ಖಾತಾ ಅಭಿಯಾನದಲ್ಲಿ ಪಾಲ್ಗೊಂಡು ತೆರಿಗೆ ಪಾವತಿಸಿ, ಸಕ್ರಮ ಮಾಡಿಕೊಳ್ಳಲು ಅವಕಾಶ ಇದಾಗಿದ್ದು, ಇದರಿಂದ ಸ್ವತ್ತಿನ ಬಿ-ಖಾತೆ ಮಾಡಿಕೊಂಡು ಅನುಕೂಲ ಪಡೆಯಿರಿ ಎಂದು ಹೇಳಿದರು.
ನಗರದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಈ ತೆರಿಗೆ ಸಂಗ್ರಹ ಬಹಳ ಮುಖ್ಯವಾಗಿದ್ದು, ಸರ್ಕಾರ ನೀಡಿರುವ ಈ ಮೂರು ತಿಂಗಳ ಕಾಲಾವಕಾಶವನ್ನು ಸದ್ಭಳಕೆ ಮಾಡಿಕೊಂಡು ಆಸ್ತಿಯ ಮೌಲ್ಯವರ್ಧಿತ ಗೊಳಿಸಿಕೊಳ್ಳುವಂತೆ ಮನವಿ ಮಾಡಿದರು.ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜು ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯಲ್ಲಿ ಮನೆ ನಿರ್ಮಿಸಿ ಕೊಂಡಿರುವ ನಾಗರಿಕರು ಕೂಡಲೇ ಸರ್ಕಾರ ನೀಡಿರುವ ಬಿ-ಖಾತಾ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಆಸ್ತಿಗಳ ಮೌಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಅನಧಿಕೃತ ಆಸ್ತಿಗಳು ಇವೇ ಎಂಬ ಮಾಹಿತಿ ಇದ್ದು, 2003-04 ನೇ ಸಾಲಿನಲ್ಲಿ ಸರ್ವೇ ಕಾರ್ಯಕೈಗೊಂಡಾಗ 6 ಸಾವಿರ ಅನಧಿಕೃತ ಕಟ್ಟಡಗಳು ಇರುವುದು ಪತ್ತೆ ಹಚ್ಚ ಲಾಗಿತ್ತು. ಈಗ ಈವರೆಗೆ ಇನ್ನೂ 4 ಸಾವಿರ ಹೆಚ್ಚಾಗಿರಬಹುದೆಂದು ಅಂದಾಜಿಸಲಾಗಿದೆ ಎಂದು ಹೇಳಿದರು.ಸರ್ಕಾರದ ಸೌಲಭ್ಯ ಪಡೆದು, ಯಾವುದೇ ರೀತಿ ತೆರಿಗೆ ಪಾವತಿ ಮಾಡದೇ ವಾಸ ಮಾಡುತ್ತಿರುವ ನಿವಾಸಿಗಳಿಗೆ ಅನುಕೂಲವಾಗಬೇಕೆಂಬ ದೃಷ್ಠಿಯಿಂದ ಖಾಲಿ ನಿವೇಶನ ಅಥವಾ ಕಟ್ಟಡ ಮನೆ ಹೊಂದಿರುವ ನಾಗರಿಕರು ಒಂದು ವರ್ಷದ ಆಸ್ತಿ ತೆರಿಗೆಯನ್ನು ಪಾವತಿಸಿ, ಬಿ-ಖಾತಾ ಮಾಡಿಸಿಕೊಳ್ಳಬೇಕೆಂದು ಎಂದು ತಿಳಿಸಿದರು.ಬಿ-ಖಾತೆ ಆದ ನಂತರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಆಸ್ತಿಗಳಿಗೆ ನಗರಸಭೆಯಲ್ಲಿ ಇ-ಖಾತೆ ಮಾಡಿಕೊಡುತ್ತೇವೆ. ಈ ದಾಖಲೆ ಪಡೆದುಕೊಂಡು ಬ್ಯಾಂಕಿನಲ್ಲಿ ಸಾಲ ಮತ್ತು ಮಾರಾಟ ಮಾಡಲು ಸಹಾಯವಾಗುತ್ತದೆ ಎಂದರು.2024ರ ಮೇ 10 ರ ಹಿಂದೆ ಆಗಿರುವ ಆಸ್ತಿ ನೋಂದಣಿ ಪತ್ರ ಪರಿಗಣಿಸಿ, 2025ರ ಮೇ 10 ರವರೆಗೆ ಬಿ-ಖಾತಾ ಮಾಡಿ ಕೊಳ್ಳಲು ಅವಕಾಶ ನೀಡಲಾಗಿದೆ. ಈ ನಿಗಧಿತ ಅವಧಿಯಲ್ಲಿ ನಾಗರಿಕರು ಆಸ್ತಿ ನೋಂದಣಿ ಮಾಡಿಕೊಳ್ಳಬೇಕು, ಇಲ್ಲ ವಾದರೆ ಮುಂದೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ವ್ಯವಸ್ಥಾಪಕ ರವಿ, ಕಂದಾಯ ಅಧಿಕಾರಿ ದೀಪಕ್, ಕಂದಾಯ ನಿರೀಕ್ಷಕರಾದ ಶಿವಾನಂದ್, ವೆಂಕಟರಾಮ್ ಹಾಗೂ ಸಿಬ್ಬಂದಿ ಹಾಜರಿದ್ದರು. 10 ಕೆಸಿಕೆಎಂ 5ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅವರು ಇ- ಖಾತಾ ಅಭಿಯಾನಕ್ಕೆ ಚಾಲನೆ ನೀಡಿದರು. ಪೌರಾಯುಕ್ತ ಬಿ.ಸಿ. ಬಸವರಾಜ್, ರವಿ, ಶಿವಾನಂದ್ ಇದ್ದರು.