ಸಹಕಾರಿ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲ: ಎಸ್.ಎಸ್.ಪಾಟೀಲ್

KannadaprabhaNewsNetwork |  
Published : Dec 17, 2025, 01:15 AM IST
ಎಸ್.ಎಸ್.ಪಾಟಿಲ್ ಅವರನ್ನು ಅಭಿನಂದಿಸಲಾಯಿತು | Kannada Prabha

ಸಾರಾಂಶ

ಸಹಕಾರಿ ಕ್ಷೇತ್ರ ಸರ್ಕಾರದ ಹಸ್ತಕ್ಷೇಪ ಇಲ್ಲದೆ ಸ್ವತಂತ್ರವಾಗಿರಬೇಕು ಎಂದು ಮಾಜಿ ಸಹಕಾರಿ ಸಚಿವ ಎಸ್.ಎಸ್.ಪಾಟೀಲ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸಾಗರ

ಸಹಕಾರಿ ಕ್ಷೇತ್ರ ಸರ್ಕಾರದ ಹಸ್ತಕ್ಷೇಪ ಇಲ್ಲದೆ ಸ್ವತಂತ್ರವಾಗಿರಬೇಕು ಎಂದು ಮಾಜಿ ಸಹಕಾರಿ ಸಚಿವ ಎಸ್.ಎಸ್.ಪಾಟೀಲ್ ಅಭಿಪ್ರಾಯಪಟ್ಟರು.

ಪಟ್ಟಣದ ಅಕ್ಷಯಸಾಗರ ಸೌಹಾರ್ದ ಸಂಸ್ಥೆಗೆ ಮಂಗಳವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂಸ್ಥೆಯಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾನು ಸಹಕಾರಿ ಸಚಿವನಾಗಿದ್ದಾಗ ಸಹಕಾರ ಕ್ಷೇತ್ರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡದಂತೆ ಕಾಯ್ದೆ ತಿದ್ದುಪಡಿ ಮಾಡಲಾಗಿತ್ತು. ನಂತರ ಬಂದವರು ಪುನಃ ಕಾಯ್ದೆ ಬದಲಾವಣೆ ಮಾಡಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

ಸಹಕಾರಿ ಕ್ಷೇತ್ರ ಸ್ವತಂತ್ರವಾಗಿ ಉಳಿದಾಗ ಮಾತ್ರ ಸಹಕಾರಿಗಳ ಶಕ್ತಿ ಹೆಚ್ಚುತ್ತದೆ ಎಂದ ಅವರು, ಸರ್ಕಾರದ ಅನಗತ್ಯ ಹಸ್ತಕ್ಷೇಪದಿಂದಾಗಿ ಸಹಕಾರಿ ತತ್ವದ ಮೂಲಕ್ಕೆ ಕೊಡಲಿಪೆಟ್ಟು ಬೀಳುತ್ತಿದೆ. ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಸಹಕಾರಿ ಕ್ಷೇತ್ರ ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ನಾನು ಸಹಕಾರಿ ಸಚಿವನಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಸುಮಾರು ೪೫ ಸಾವಿರ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದವು. ಸೌಹಾರ್ದ ಸಹಕಾರಿ ಕಾಯ್ದೆ ತಿದ್ದುಪಡಿ ತಂದು ಸಣ್ಣಪುಟ್ಟ ಸಹಕಾರಿ ಸಂಸ್ಥೆಗಳ ಆರ್ಥಿಕ ಶಕ್ತಿ ವೃದ್ದಿಸುವ ಕೆಲಸ ಮಾಡಲಾಗಿತ್ತು. ಇಂದಿಗೂ ಶೇ.೯೦ರಷ್ಟು ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಎಲ್ಲೋ ಶೇ.೧೦ರಷ್ಟು ಜನರು ಮಾಡುವ ಅವ್ಯವಹಾರದಿಂದ ಸಹಕಾರಿ ಕ್ಷೇತ್ರ ಕೆಟ್ಟ ಹೆಸರು ಪಡೆಯುವಂತಾಗಿದೆ ಎಂದು ಹೇಳಿದರು.

ಸಂಸ್ಥೆಯ ಪ್ರವರ್ತಕ ಟಿ.ಡಿ.ಮೇಘರಾಜ್ ಮಾತನಾಡಿ, ಸಹಕಾರಿ ಸಂಸ್ಥೆಯನ್ನು ಪ್ರಾರಂಭಿಸುವುದು ಸುಲಭ. ಆದರೆ ಷೇರುದಾರರು ಮತ್ತು ಗ್ರಾಹಕರ ವಿಶ್ವಾಸ ಗಳಿಸಿಕೊಂಡು ನಿರಂತರವಾಗಿ ನಡೆಸಿಕೊಂಡು ಹೋಗುವುದು ಸವಾಲಿನ ಕೆಲಸ. ಅಕ್ಷಯಸಾಗರ ಸಂಸ್ಥೆಯನ್ನು ೨೫ ವರ್ಷದ ಹಿಂದೆ ಎಸ್.ಎಸ್.ಪಾಟೀಲ್ ಅವರು ಉದ್ಘಾಟನೆ ಮಾಡಿದ್ದರು. ಇಂದು ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಇದಕ್ಕೆ ಕಾರಣ ಅಧ್ಯಕ್ಷ ದಿನೇಶ್ ಬರದವಳ್ಳಿ ನೇತೃತ್ವದ ಆಡಳಿತ ಮಂಡಳಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಕ್ಷಯಸಾಗರ ಸೌಹಾರ್ದ ಸಂಸ್ಥೆ ಅಧ್ಯಕ್ಷ ದಿನೇಶ್ ಬರದವಳ್ಳಿ ಮಾತನಾಡಿ, ಆಡಳಿತ ಮಂಡಳಿ ಮತ್ತು ಷೇರುದಾರರ ಸಹಕಾರದಿಂದ ಸಂಸ್ಥೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ರಾಜ್ಯದ ಬೇರೆಬೇರೆ ಭಾಗಗಳಲ್ಲಿ ಶಾಖೆಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಸಹಕಾರಿ ಕ್ಷೇತ್ರದ ಪ್ರಮುಖರಾದ ಕೆ.ಎಂ.ಸೂರ್ಯನಾರಾಯಣ, ಆರ್.ಶ್ರೀನಿವಾಸ್, ಕೆ.ಸಿ.ದೇವಪ್ಪ, ಕುಮಾರಸ್ವಾಮಿ ಕೊಪ್ಪ, ಚನ್ನಬಸಪ್ಪ ಗೌಡ, ಇಂಡುವಳ್ಳಿ ನಾಗರಾಜ ಗೌಡ ಇನ್ನಿತರರು ಹಾಜರಿದ್ದರು. ಲೋಕನಾಥ್ ಬಿಳಿಸಿರಿ ಸ್ವಾಗತಿಸಿದರು. ಮಧ್ವರಾಜ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ