ಭಟ್ಕಳ: ರಾಜ್ಯ ಸರ್ಕಾರವು ಮೀನುಗಾರರ ಬದುಕು ಹಸನು ಮಾಡಲು ಎಲ್ಲ ರೀತಿಯ ಕ್ರಮಕ್ಕೆ ಮುಂದಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಿಳಿಸಿದರು.
ಮುರ್ಡೇಶ್ವರ ಸಮೀಪದ ಬೇಂಗ್ರೆ ಗಾಲ್ಫ್ ಮೈದಾನದಲ್ಲಿ ಮೀನುಗಾರಿಕೆ ಇಲಾಖೆಯಿಂದ ಗುರುವಾರ ಸಂಜೆ ಏರ್ಪಡಿಸಿದ್ದ ವಿಶ್ವ ಮೀನುಗಾರಿಕಾ ದಿನಾಚರಣೆ ಮತ್ತು ಮೂರು ದಿನಗಳ ಬೃಹತ್ ಮತ್ಸ್ಯಮೇಳಕ್ಕೆ ಅಲಂಕಾರಿಕಾ ಮೀನುಗಳನ್ನು ಅಕ್ವೇರಿಯಂಗೆ ಹಾಕುವ ಮೂಲಕ ಚಾಲನೆ ನೀಡಿದರು. ಮೀನುಗಾರರ ಸಂಕಷ್ಟ ಪರಿಹಾರ ನಿಧಿಯನ್ನು ₹8 ಲಕ್ಷದಿಂದ ₹10 ಲಕ್ಷಕ್ಕೆ ಏರಿಕೆ ಮಾಡುತ್ತೇವೆ. ಮೀನುಗಾರರು ಶ್ರಮಜೀವಿಗಳಾಗಿದ್ದು, ಮೀನುಗಾರರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ ಮಾತನಾಡಿ, ಮುರ್ಡೇಶ್ವರದಲ್ಲಿ ₹400 ಕೋಟಿ ವೆಚ್ಚದಲ್ಲಿ ಬಂದರು ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನಮ್ಮ ಸರ್ಕಾರ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಸೀಮ ಎಣ್ಣೆ, ಡೀಸೆಲ್ ಒದಗಿಸುತ್ತಿದೆ. ಸಂಕಷ್ಟ ಪರಿಹಾರ ನಿಧಿ ಏರಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಂದರುಗಳ ಧಕ್ಕೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ನಮ್ಮ ಸರ್ಕಾರ ಮೀನುಗಾರರ ಪರವಾಗಿ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಮೀನುಗಾರರಿಗೆ ಅಗತ್ಯ ಇರುವ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ಮೀನುಗಾರರು ವಿಶ್ವದ ದೊಡ್ಡ ಶಕ್ತಿಯಾಗಿದ್ದಾರೆ. ದೇಶದ ಆಸ್ತಿಯೂ ಆಗಿದ್ದಾರೆ. ಮೀನುಗಾರಿಕೆ ಸಾಹಸಿ, ಕಷ್ಟಮಯ ಜೀವನ ಆಗಿದೆ. ಮಳೆ, ಗಾಳಿ, ಚಳಿ ಎನ್ನದೇ ಮೀನುಗಾರರು ತಮ್ಮ ಕೆಲಸ ಮಾಡುತ್ತಿದ್ದಾರೆ. ಮೀನುಗಾರಿಕೆ ಮತ್ತು ಮೀನುಗಾರರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.ಶಾಸಕರಾದ ಯಶ್ಪಾಲ್ ಸುವರ್ಣ, ಶಿವರಾಮ ಹೆಬ್ಬಾರ, ಸತೀಶ ಸೈಲ್, ಭೀಮಣ್ಣ ನಾಯ್ಕ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ತಿಪ್ಪಣ್ಣ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಪಂ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ, ಎಸ್ಪಿ ಎಂ. ನಾರಾಯಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ ಗಾಂವಕರ್, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಸತೀಶ ನಾಯ್ಕ, ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾಯ್ಕಿಣಿ ಗ್ರಾಪಂ ಅಧ್ಯಕ್ಷ ರಾಜು ನಾಯ್ಕ ಮುಂತಾದವರಿದ್ದರು. ಮತ್ಸ್ಯವಾಹಿನಿ ಮಾಸಪತ್ರಿಕೆ ಬಿಡುಗಡೆ
ಮೀನುಗಾರಿಕಾ ಅಂಕಿ ಅಂಶಗಳುಳ್ಳ ಮಾಸಪತ್ರಿಕೆ ಮತ್ಸ್ಯವಾಹಿನಿ ಮಾಸ ಪತ್ರಿಕೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬಿಡುಗಡೆಗೊಳಿಸಿದರು.ಸಂಕಷ್ಪ ಪರಿಹಾರ ನಿಧಿಯಡಿಯಲ್ಲಿ ಪರಿಹಾರ ವಿತರಿಸಲಾಯಿತು. ಉತ್ತಮವಾಗಿ ಕಾರ್ಯನಿರ್ವಹಿಸಿದ ಮೀನುಗಾರಿಕಾ ಸೊಸೈಟಿಗಳಿಗೆ ಮತ್ತು ಮೀನುಕೃಷಿ ಉತ್ಪನ್ನ ಕಂಪನಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶಕುಮಾರ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಗಣ್ಯರು, ಸಂಘ ಸಂಸ್ಥೆಗಳ ಪ್ರಮುಖರು, ರಾಜ್ಯದ ವಿವಿಧ ಭಾಗಗಳ ಸಾವಿರಾರು ಮೀನುಗಾರರು ಪಾಲ್ಗೊಂಡಿದ್ದರು.