ವರ್ಗಾವಣೆಯ ಹೆಸರಲ್ಲಿ ಅಧಿಕಾರಿಗಳಿಗೆ ಸರ್ಕಾರದ ಕಾಟ : ಸಂಸದ ಬಿ.ವೈ.ರಾಘವೇಂದ್ರ

KannadaprabhaNewsNetwork |  
Published : Jun 19, 2025, 11:48 PM ISTUpdated : Jun 20, 2025, 12:11 PM IST
BY Raghavendra

ಸಾರಾಂಶ

ವರ್ಗಾವಣೆಯ ದಂಧೆಯ ಮೂಲಕ ರಾಜ್ಯ ಮತ್ತು ಜಿಲ್ಲೆಯ ಅಧಿಕಾರಿಗಳಿಗೆ ಕಾಟ ನೀಡುವಂತಹ ಕೆಲಸ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಿಂದ ನಡೆಯುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದರು.

 ಶಿವಮೊಗ್ಗ :  ವರ್ಗಾವಣೆಯ ದಂಧೆಯ ಮೂಲಕ ರಾಜ್ಯ ಮತ್ತು ಜಿಲ್ಲೆಯ ಅಧಿಕಾರಿಗಳಿಗೆ ಕಾಟ ನೀಡುವಂತಹ ಕೆಲಸ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಿಂದ ನಡೆಯುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಇನ್ನೊಂದು ವಾರದ ಅವಧಿಗೆ ವಿಸ್ತರಣೆ ಮಾಡಿರುವ ಸಂಗತಿಯನ್ನು ನಾನು ಮಾಧ್ಯಮಗಳ ಮೂಲಕ ನೋಡಿದೆ. ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಇದನ್ನೇ ದಂಧೆಯನ್ನಾಗಿ ತೆಗೆದುಕೊಂಡಿದ್ದಾರೆ. ಅದರ ಭಾಗವಾಗಿಯೇ ಈ ವರ್ಗಾವಣೆ ಅವಧಿಯನ್ನು ಇನ್ನೊಂದು ವಾರಕ್ಕೆ ವಿಸ್ತರಣೆ ಮಾಡಿರುವುದು ದುರಂತ ಎಂದು ಕಿಡಿಕಾರಿದರು.

ವರ್ಗಾವಣೆ ಹೆಸರಲ್ಲಿ ಅಧಿಕಾರಿಗಳಿಗೆ ರಾಜ್ಯ ಮತ್ತು ಜಿಲ್ಲೆಯಲ್ಲಿ ಕಾಟ ಕೊಡುವ ಕೆಲಸ ನಡೆಯುತ್ತಿದೆ. ಕೆಲವು ಅಧಿಕಾರಿಗಳಿಗೆ ಧಮ್ಕಿ ಹಾಕಲಾಗಿದೆ. ನಿಮ್ಮ ಅವಧಿ ಮುಗಿದಿದೆ ಎಲ್ಲಾದರೂ ಜಾಗ ನೋಡಿಕೊಳ್ಳಿ ಎಂದು ಬೆದರಿಸಲಾಗುತ್ತಿದೆ. ಕೆಲವು ಅಧಿಕಾರಿಗಳು ನಮ್ಮ ಮನೆಗೂ ಬಂದು ಅಳಲು ತೋಡಿಕೊಂಡಿದ್ದಾರೆ. ಕೆಲವರು ಶಾಸಕರ ಮನೆಗೂ ಹೋಗಿದ್ದಾರೆ. ಅಧಿಕಾರಿಗಳಿಗೆ ಈ ರೀತಿ ಕಾಟ ಕೊಡುವ ಕೆಲಸವನ್ನು ಸರ್ಕಾರ ಮತ್ತು ಕಾಂಗ್ರೆಸ್ ಶಾಸಕರು ನಿಲ್ಲಿಸಬೇಕು. ಈ ಕುರಿತಂತೆ ನಾನು ಮುಖ್ಯ ಮಂತ್ರಿಗಳಲ್ಲೂ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ಅವರು ಮಳೆಯಿಂದ ಜಿಲ್ಲೆಯಲ್ಲಿ ಆದ ಬೆಳೆಹಾನಿ, ಆಸ್ತಿ-ಪಾಸ್ತಿಹಾನಿಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇದು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದ್ದರೂ ಬೇಸಿಗೆ ಹಂಗಾಮಿನಲ್ಲಿ ರೈತರು ಬೆಳೆದಿದ್ದ ಮೆಕ್ಕೆಜೋಳ, ಭತ್ತ ಬೆಳೆಗಳಿಗೆ ಭಾರೀ ಹಾನಿಮಾಡಿದೆ. ಸಾವು-ನೋವುಗಳು ಕೂಡ ಸಂಭವಿಸಿವೆ. ಇದೆಲ್ಲವನ್ನು ಗಮನಿಸಿದ್ದೇನೆ. ಈ ಕುರಿತಂತೆ ಜಿಲ್ಲಾಧಿಕಾರಿಗಳ ಜತೆಗೆ ಸಭೆ ಕರೆದಿದ್ದೇನೆ ಎಂದರು.

ವಿಶೇಷವಾಗಿ ಶಿಕಾರಿಪುರ ಮತ್ತು ಶಿವಮೊಗ್ಗ ತಾಲೂಕುಗಳಲ್ಲಿ ರೈತರು ಬೇಸಿಗೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ತುಂಬಾ ನಷ್ಟವಾಗಿದೆ. ಮಳೆಯಿಂದ ಮೆಕ್ಕೆಜೋಳ ಮೊಳಕೆ ಬಂದಿದೆ. ಅದು ಈಗ ಉಪಯೋಗಕ್ಕೆ ಬರುವುದಿಲ್ಲ. ಇಂತಹ ರೈತರಿಗೆ ಸರ್ಕಾರ ಪರಿಹಾರ ನೀಡಬೇಕಿದೆ. ಆದರೆ ಅಧಿಕಾರಿಗಳು ಎನ್‌ಡಿಆರ್‌ಎ- ನಿಯಮದಲ್ಲಿ ಅದಕ್ಕೆ ಅವಕಾಶ ಇಲ್ಲ ಎನ್ನುತ್ತಾರೆ. ಹಿಂದೆ ಹಿರಿಯರಾದ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ನಿಯಮಗಳಲ್ಲಿ ಸಡಿಲಗೊಳಿಸಿ ೫ ಲಕ್ಷದವರೆಗೂ ರೈತರಿಗೆ ಬೆಳೆ ನಷ್ಟದ ಪರಿಹಾರ ಕೊಡಿಸಿದ್ದರು. ಇದೇ ರೀತಿ ರಾಜ್ಯ ಸರ್ಕಾರ ತಕ್ಷಣವೇ ಬೆಳೆ ನಷ್ಟ ಅನುಭವಿಸಿದ ರೈತರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.

ಇದೇ ವೇಳೆ ಮಳೆಯಿಂದ ಹೆದ್ದಾರಿಯಲ್ಲಿ ಬಿರುಕು ಬಂದಿದ್ದರ ಬಗ್ಗೆಯೂ ಪ್ರಸ್ತಾಪಿಸಿ, ಎಲ್ಲವನ್ನು ಸರಿಪಡಿಸಲಾಗುವುದು ಈ ಸಂಬಂಧ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಪಕ್ಷದ ಶುದ್ದೀಕರಣ ಆಗಬೇಕೆನ್ನುವುದು ನಿಜ: ಬಿವೈಆರ್

ಪಕ್ಷ ಶುದ್ದವಾಗಿರಬೇಕೆನ್ನುವುದು ನಮ್ಮ ಅಪೇಕ್ಷೆಯೂ ಹೌದು. ಕೇವಲ ನಾನು ಅಥವಾ ಇನ್ನಾರೋ ಇದನ್ನು ಬಯಸುತ್ತಾರೆನ್ನುವುದಲ್ಲ, ಪಕ್ಷದ ಒಬ್ಬ ಕಟ್ಟಕಡೆಯ ಕಾರ್ಯಕರ್ತನಿಗೂ ಇಂತಹ ಅಪೇಕ್ಷೆ ಸಹಜ. ಆ ಕೆಲಸವನ್ನು ಇವತ್ತು ರಾಜ್ಯ ಮಟ್ಟದಲ್ಲೂ ಪಕ್ಷದ ಜವಾಬ್ದಾರಿ ಹೊತ್ತ ಪ್ರತಿಯೊಬ್ಬ ನಾಯಕರು ಕೂಡ ಮಾಡುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಿಷ್ಟಗೊಳಿಸಲು ಮುಂಬರುವ ಪಾಲಿಕೆ, ಜಿ.ಪಂ., ತಾ.ಪಂ. ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಬೇಕೆನ್ನುವ ಅಪೇಕ್ಷೆ ಎಲ್ಲರಿಗೂ ಇದೆ. ಅದನ್ನು ಯಾರೋ ಹೇಳಿದರು, ಮಾಡಿದರು ಅಂತಲ್ಲ ಎಲ್ಲರ ಅಪೇಕ್ಷೆ ಕೂಡ ಪಕ್ಷ ಶುದ್ದವಾಗಿರಬೇಕೆನ್ನುವುದೇ ಆಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

PREV
Read more Articles on

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ