ಕನ್ನಡಪ್ರಭ ವಾರ್ತೆ ಹುಣಸಗಿ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರೈತರು ಸಾವಿರಾರು ರುಪಾಯಿ ಖರ್ಚು ಮಾಡಿ, ಹಗಲಿರುಳು ಶ್ರಮಿಸಿ, ನೀರಾವರಿ, ಗೊಬ್ಬರ, ಔಷಧಿ ಹಾಗೂ ಕೂಲಿ ಕಾರ್ಮಿಕರ ವೆಚ್ಚ ಭರಿಸಿ ಭತ್ತ ಬೆಳೆದಿದ್ದಾರೆ. ಆದರೆ ಬೆಳೆ ಕೈಗೆ ಬಂದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದಿರುವುದು ರೈತರಿಗೆ ಮತ್ತೊಂದು ಆರ್ಥಿಕ ಹೊಡೆತವಾಗಿದೆ. ಹೊರರಾಜ್ಯಗಳಿಂದ ಕರ್ನಾಟಕಕ್ಕೆ ಭತ್ತದ ಆಮದು ಆಗುತ್ತಿರುವುದು ಸ್ಥಳೀಯ ಮಾರುಕಟ್ಟೆಯ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆಯೇ ಎಂಬ ಗಂಭೀರ ಪ್ರಶ್ನೆ ಎದುರಾಗಿದೆ ಎಂದರು.
ಉತ್ತರ ಪ್ರದೇಶದಿಂದ ಸುಮಾರು 1,140 ಟನ್ ಭತ್ತ ಆಮದಾಗಿದೆ ಎಂಬ ಮಾಹಿತಿ ಹಾಗೂ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿಂದಲೂ ಭತ್ತ ರಾಜ್ಯಕ್ಕೆ ಬರುತ್ತಿದೆ ಎಂಬ ಆರೋಪಗಳ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು. ಈ ಆಮದುಗಳ ಪ್ರಮಾಣ, ಅವುಗಳ ಮೂಲ, ವ್ಯಾಪಾರಿಗಳ ದಾಸ್ತಾನು ಮತ್ತು ಮಾರುಕಟ್ಟೆಯ ಮೇಲಿನ ಪರಿಣಾಮದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಹೊರರಾಜ್ಯಗಳಿಂದ ಭತ್ತ ಖರೀದಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಹೊರರಾಜ್ಯದ ವ್ಯಾಪಾರ ಮತ್ತು ಆಮದಿನ ಪರಿಣಾಮವಾಗಿ ಕರ್ನಾಟಕದ ರೈತರು ಬೆಳೆದ ಭತ್ತಕ್ಕೆ ನ್ಯಾಯಯುತ ಬೆಲೆ ಸಿಗದ ಪರಿಸ್ಥಿತಿ ನಿರ್ಮಾಣವಾಗಬಾರದು. ಇನ್ನೊಂದೆಡೆ, ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಹೆಚ್ಚಾಗಿದ್ದರೂ ಭತ್ತ ಬೆಳೆದ ರೈತನಿಗೆ ಮಾತ್ರ ಬೆಲೆ ಕುಸಿತವಾಗುತ್ತಿರುವುದು ಕೃಷಿ ಮಾರುಕಟ್ಟೆಯ ವ್ಯವಸ್ಥೆಯ ಬಗ್ಗೆ ಅನುಮಾನ ಮೂಡಿಸುತ್ತಿದೆ. ರೈತರು ಬೆಳೆದ ಬೆಳೆಗೆ ಬೆಲೆ ನಿಗದಿಪಡಿಸುವ ಅಧಿಕಾರ ರೈತರ ಕೈಯಲ್ಲಿಲ್ಲದಿದ್ದರೆ, ರೈತರ ಬದುಕಿಗೆ ಭದ್ರತೆ ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ರೈತರು ಕಷ್ಟಪಟ್ಟು ಬೆಳೆ ಬೆಳೆಯಬೇಕು, ಆದರೆ ಬೆಲೆ ನಿರ್ಧರಿಸುವವರು ಬೇರೆಯವರಾಗಿರಬೇಕು ಎನ್ನುವ ವ್ಯವಸ್ಥೆ ಬದಲಾಗಬೇಕು. ರೈತರಿಂದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಆಧಾರದ ಮೇಲೆ ಭತ್ತ ಖರೀದಿಸಲು ಸೂಕ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಆಗ್ರಹಿಸಿದರು.