ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ಸಕ್ಕರೆ ಇಳುವರಿ (ರಿಕವರಿ) ಪರೀಕ್ಷೆ ಮಾಡುವ ಪ್ರಯೋಗಾಲಯಗಳ ವರದಿಯಲ್ಲಿ ರೈತರಿಗೆ ಮೋಸವಾಗುತ್ತಿದೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಒತ್ತಾಯಿಸಿದ್ದಾರೆ.

ಹಾವೇರಿ: ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ಸಕ್ಕರೆ ಇಳುವರಿ (ರಿಕವರಿ) ಪರೀಕ್ಷೆ ಮಾಡುವ ಪ್ರಯೋಗಾಲಯಗಳ ವರದಿಯಲ್ಲಿ ರೈತರಿಗೆ ಮೋಸವಾಗುತ್ತಿದೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಒತ್ತಾಯಿಸಿದ್ದಾರೆ.

ನಗರದ ಹೊರವಲಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಬ್ಬಿನ ದರ ನಿಗದಿ ಸಂಬಂಧ ತಡರಾತ್ರಿವರೆಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ, ಸಕ್ಕರೆ ಸಚಿವ ರುದ್ರಪ್ಪ ಲಮಾಣಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮೂರು ಸಕ್ಕರೆ ಕಾರ್ಖಾನೆಗಳ ಮಾಲೀಕರು ಭಾಗವಹಿಸಿದ್ದರು. ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 3,225 ರು.ದರ ನಿಗದಿಪಡಿಸಿ ಸಂಧಾನ ಮಾಡಲಾಗಿತ್ತು. ಆದರೆ, ಈ ದರದಿಂದ ರೈತರಿಗೆ ಸಂಪೂರ್ಣ ಸಮಾಧಾನವಾಗಿಲ್ಲ. ರಿಕವರಿ ಹಾಗೂ ತೂಕ ಸೇರಿದಂತೆ ಹಲವು ಸಮಸ್ಯೆಗಳಿಗೂ ಪರಿಹಾರ ಸಿಗಬೇಕಿದೆ ಎಂದು ರೈತರು ಒತ್ತಾಯಿಸಿದ್ದಾರೆ.

ಹಾವೇರಿ ತಾಲೂಕಿನ ಸಂಗೂರು ಸಕ್ಕರೆ ಕಾರ್ಖಾನೆ ಈ ಹಿಂದೆ ಸಹಕಾರಿ ಸಂಘದ ನಿರ್ವಹಣೆಯಲ್ಲಿದ್ದಾಗ ಶೇ.10.30ರಿಂದ 11.30ರ ವರೆಗೆ ಸಕ್ಕರೆ ಇಳುವರಿ ಬರುತ್ತಿತ್ತು. ಆದರೆ, ಜಿಎಂ ಶುಗರ್ಸ್ ಸಂಸ್ಥೆ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನಿರ್ವಹಣೆ ವಹಿಸಿಕೊಂಡ ಬಳಿಕ ಇಳುವರಿ ಪ್ರಮಾಣ ದಿಢೀರ್ ಕುಸಿದಿದೆ. ಕಳೆದ 18 ವರ್ಷಗಳಿಂದ ಕಾರ್ಖಾನೆಯವರೇ ತಮ್ಮ ಪ್ರಯೋಗಾಲಯದಲ್ಲಿ ಕಬ್ಬಿನ ಮಾದರಿ ಪರೀಕ್ಷಿಸಿ ವರದಿ ನೀಡುತ್ತಿದ್ದಾರೆ. ಪ್ರತಿ ವರ್ಷ ರಿಕವರಿ ಪ್ರಮಾಣ ಕಡಿಮೆಯಾಗುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಲ್ಯಾಬ್ ಪರಿಶೀಲನೆಗೆ ಆಗ್ರಹ: ಮೂರು ಕಾರ್ಖಾನೆಗಳ ರಿಕವರಿ ಪರೀಕ್ಷಾ ಪ್ರಯೋಗಾಲಯಗಳನ್ನು ಪರಿಶೀಲಿಸಬೇಕು. ವರದಿ ಸಿದ್ಧಪಡಿಸುವ ತಜ್ಞರನ್ನು ವಿಚಾರಣೆಗೆ ಒಳಪಡಿಸಬೇಕು. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ರೈತರಿಗೆ ನ್ಯಾಯ ಒದಗಿಸಬೇಕು ಎಂದು ಶಿಡ್ಲಾಪೂರ ಆಗ್ರಹಿಸಿದ್ದಾರೆ.

ತೂಕದಲ್ಲಿಯೂ ಮೋಸ ಆರೋಪ: ಕಾರ್ಖಾನೆ ಆವರಣದಲ್ಲಿರುವ ತೂಕದ ಯಂತ್ರಗಳಲ್ಲಿ ಕಬ್ಬಿನ ವಾಹನಗಳ ನೈಜ ತೂಕಕ್ಕಿಂತ ಕಡಿಮೆ ತೂಕ ದಾಖಲಿಸಿ ರೈತರಿಗೆ ವಂಚಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಹೀಗಾಗಿ ಸರ್ಕಾರದಿಂದಲೇ ಸ್ವತಂತ್ರ ರಿಕವರಿ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಬೇಕು. ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳ ಎದುರು ಸರಕಾರಿ ತೂಕದ ಯಂತ್ರಗಳನ್ನು ಅಳವಡಿಸಬೇಕು ಎಂದು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಭುವನೇಶ್ವರ ಶಿಡ್ಲಾಪೂರ ತಿಳಿಸಿದ್ದಾರೆ.